ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ : ಮತ್ತೆ ತುಂತುರು ಮಳೆ

ಈ ಸುದ್ದಿಯನ್ನು ಶೇರ್ ಮಾಡಿ

rain

ಬೆಂಗಳೂರು, ಡಿ.5- ಓಖಿ ಚಂಡಮಾರುತ ದಿಂದಾಗಿ ಕಳೆದ ವಾರ ಎರಡು ದಿನಗಳ ಕಾಲ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಜಿಟಿ ಜಿಟಿ ಮಳೆ ಬಿದ್ದ ಬೆನ್ನಲ್ಲೇ ಮತ್ತೆ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ನಾಳೆ ಹಗುರ ಮಳೆಯಾಗುವ ಸಾಧ್ಯತೆಗಳಿವೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ರಾಜ್ಯದೆಲ್ಲೆಡೆ ಮೋಡ ಕವಿದ ವಾತಾವರಣ ಕಂಡುಬಂದಿದ್ದು, ಡಿ.8ರ ವರೆಗೆ ರಾಜ್ಯದ ಕೆಲವು ಭಾಗಗಳಲ್ಲಿ ಆಗಾಗ್ಗೆ ತುಂತುರು ಮಳೆಯಾಗುವ ಮುನ್ಸೂಚನೆಗಳಿವೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ಈ ಸಂಜೆಗೆ ತಿಳಿಸಿದರು. ಓಖಿ ಚಂಡಮಾರುತದ ಪರಿಣಾಮದಿಂದ ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಸಾಧಾರಣದಿಂದ ಉತ್ತಮ ಮಳೆ ಬಿದ್ದಿತ್ತು. ಬೆಳಗಾವಿ, ಧಾರವಾಡದಲ್ಲೂ ಕೆಲವೆಡೆ ಮಳೆಯಾಗಿದೆ. ಚಂಡಮಾರುತ ಗುಜರಾತ್ ಕಡೆ ಚಲಿಸುತ್ತಿದ್ದು, ನಾಳೆ ವೇಳೆಗೆ ದುರ್ಬಲಗೊಳ್ಳುವ ಸಾಧ್ಯತೆಗಳಿವೆ ಎಂದರು.

ಮಲೆನಾಡು ಭಾಗದಲ್ಲಿ ಒಂದೆರಡು ದಿನ ಚದುರಿದಂತೆ ಮಳೆಯಾಗುವ ಲಕ್ಷಣಗಳು ಕಂಡುಬರುತ್ತಿವೆ. ನಿನ್ನೆ ತುಮಕೂರು, ಮೈಸೂರು, ಚಾಮರಾಜನಗರ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾದ ವರದಿಯಾಗಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ತೀವ್ರ ವಾಯುಭಾರ ಕುಸಿತ, ಆಂಧ್ರ ಪ್ರದೇಶದ ಉತ್ತರ ಭಾಗ ಹಾಗೂ ಒಡಿಶಾ ಕಡೆ ಚಲಿಸುತ್ತಿರುವುದರಿಂದ ರಾಜ್ಯದ ಮೇಲೆ ಹೆಚ್ಚಿನ ಪರಿಣಾಮ ಉಂಟಾಗುವುದಿಲ್ಲ. ಆದರೆ, ಮೂರು ದಿನಗಳ ಕಾಲ ಇದೇ ರೀತಿ ಮೋಡ ಕವಿದ ವಾತಾವರಣ ಕಂಡುಬರಲಿದ್ದು, ಕೆಲವೊಮ್ಮೆ ಸಾಧಾರಣ ಮಳೆಯಾಗುವ ಸಂಭವವಿದೆ. ಈಗ ಮೋಡ ಕವಿದ ವಾತಾವರಣ ಉಂಟಾಗಿ ತಂಪಾದ ಮೇಲ್ಮೈ ಗಾಳಿ ಬೀಸುತ್ತಿರುವುದರಿಂದ ಚಳಿ ಹಗಲು ವೇಳೆಯೂ ಹೆಚ್ಚಾಗಿದೆ. ಕೆಲವೆಡೆ ಹಗುರ ಇಲ್ಲವೆ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ ಎಂದು ಅವರು ತಿಳಿಸಿದರು.

Facebook Comments