ಬಡವರಿಗೆ, ಹಿಂದುಳಿದವರಿಗೆ 1 ಲಕ್ಷ ‘ಮನೆ ಭಾಗ್ಯ’

ಈ ಸುದ್ದಿಯನ್ನು ಶೇರ್ ಮಾಡಿ

CM-Siddaramaiah--01

ಬೆಂಗಳೂರು, ಡಿ.5- ಬಡವರಿಗೆ ಮತ್ತು ಹಿಂದುಳಿದ ವರ್ಗದವರಿಗೆ ಆನ್‍ಲೈನ್ ಮೂಲಕ 1 ಲಕ್ಷ ಮನೆ ಹಂಚುವ ಬಹುಮಹಡಿ ಬೆಂಗಳೂರು ವಸತಿ ಯೋಜನೆಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಗೃಹ ಕಚೇರಿ ಕೃಷ್ಣಾದಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಹಾಗೂ ವಸತಿ ರಹಿತ ಕುಟುಂಬಗಳಿಗೆ ಸರ್ಕಾರಿ ಜಮೀನಿನಲ್ಲಿ ನಿರ್ಮಿಸಿರುವ ಬಹುಮಹಡಿ ಕಟ್ಟಡಗಳಲ್ಲಿ ಮನೆ ನೀಡುವ ಯೋಜನೆ ಇಂದು ಅಧಿಕೃತವಾಗಿ ಜಾರಿಗೊಂಡಿತು.

ಸರ್ಕಾರದಿಂದ ನಿರ್ಮಿಸಲಾಗಿರುವ ಪ್ರತಿ ಮನೆ 30 ಚದರ ಮೀಟರ್ ವಿಸ್ತೀರ್ಣ ಹೊಂದಿದ್ದು, ಒಂದು ಕೊಠಡಿ, ಒಂದು ಹಾಲ್, ಒಂದು ಅಡುಗೆ ಕೋಣೆ, ಶೌಚಾಲಯ ಹಾಗೂ ಸ್ನಾನದ ಮನೆಯನ್ನು ಒಳಗೊಂಡಿರುತ್ತದೆ. ಕನಿಷ್ಟ ಐದು ವರ್ಷಗಳಿಗಿಂತ ಮೇಲ್ಪಟ್ಟು ಬೆಂಗಳೂರಿನ (ಬಿಡಿಎ ವ್ಯಾಪ್ತಿ) ನಿವಾಸಿಯಾಗಿರುವ ಬಡವರು ಹಾಗೂ ಹಿಂದುಳಿದ ವರ್ಗದವರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಇವರ ಕುಟುಂಬದ ವಾರ್ಷಿಕ ಆದಾಯ ಗರಿಷ್ಟ 87,600ರೂ. ಮೀರಿರಬಾರದು.
ಒಂದು ಕುಟುಂಬದಿಂದ ಒಂದು ಅರ್ಜಿಯನ್ನು ಮಾತ್ರ ಸಲ್ಲಿಸಲು ಅವಕಾಶವಿದ್ದು, ಅರ್ಜಿಯೊಂದಿಗೆ ಜಾತಿ, ಆದಾಯ ಪ್ರಮಾಣ ಪತ್ರ ಹಾಗೂ ವಾಸಸ್ಥಳದ ದೃಢೀಕರಣ ಪತ್ರಗಳ ಆರ್‍ಡಿ ಸಂಖ್ಯೆ, ಪಡಿತರ ಚೀಟಿ ಸಂಖ್ಯೆ, ಆಧಾರ್ ಕಾರ್ಡ್ ಸಂಖ್ಯೆ ನೀಡುವುದು ಕಡ್ಡಾಯ. ಇನ್ನುಳಿದ ಮಾಹಿತಿಯನ್ನು ಆನ್‍ಲೈನ್ ಮೂಲಕವೇ ಪಡೆದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.

ಯಾವುದೇ ದಾಖಲೆಗಳನ್ನು ಅರ್ಜಿಯೊಂದಿಗೆ ಲಗತ್ತಿಸುವ ಅಗತ್ಯವಿಲ್ಲ. ಅಲ್ಲದೆ, ಆನ್‍ಲೈನ್ ಬಿಟ್ಟು ಮುದ್ರಿತ ಅಥವಾ ಕೈ ಬರಹದ ಅರ್ಜಿ ಸಲ್ಲಿಕೆ ಅರ್ಹತೆ ಪಡೆಯುವುದಿಲ್ಲ. ಪರಿಶಿಷ್ಟ ಜಾತಿಯವರಿಗೆ ಶೇ.30ರಷ್ಟು, ಪರಿಶಿಷ್ಟ ಪಂಗಡದವರಿಗೆ ಶೇ.10ರಷ್ಟು, ಅಲ್ಪಸಂಖ್ಯಾತರಿಗೆ ಶೇ.10ರಷ್ಟು , ಸಾಮಾನ್ಯ ವರ್ಗದವರಿಗೆ ಶೇ.50ರಷ್ಟು ಮೀಸಲಾತಿ ಕಲ್ಪಿಸಿ ಮನೆ ಹಂಚಿಕೆಗೆ ಕ್ರಮ ವಹಿಸಲಾಗುವುದು.  ಪರಿಶಿಷ್ಟ ಜಾತಿ, ಪಂಗಡದವರಿಗೆ 3.50 ಲಕ್ಷ ಹಾಗೂ ಸಾಮಾನ್ಯ ವರ್ಗಗಳಿಗೆ 2.70ಲಕ್ಷ ಸಹಾಯ ಧನ ನೀಡಲಾಗುತ್ತಿದ್ದು, 250ರೂ. ಇದ್ದ ಅರ್ಜಿ ಶುಲ್ಕವನ್ನು 100ರೂ.ಗೆ ಇಳಿಸಲಾಗಿದೆ. ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವವರು ಶುಲ್ಕವನ್ನು ಡೆಬಿಟ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬಹುದು. ನಗದು ಪಾವತಿಸುವವರು ಬೆಂಗಳೂರು ಒನ್ ಕೇಂದ್ರಗಳು, ಆಕ್ಸಿಸ್, ಎಚ್‍ಡಿಎಫ್‍ಸಿ ಬ್ಯಾಂಕ್‍ಗಳ ಮೂಲಕ ಹಣ ಪಾವತಿಸಬಹುದಾಗಿದೆ.

ಅರ್ಜಿ ಸಲ್ಲಿಕೆಗೆ ಬಿಬಿಎಂಪಿಯ ಎಲ್ಲ ವಾರ್ಡ್, ಕಚೇರಿಗಳಲ್ಲಿ ಮತ್ತು ಬೆಂಗಳೂರು ಒನ್ ಕೇಂದ್ರಗಳಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಇದರೊಂದಿಗೆ ಯಾವುದೇ ಬ್ರೌಸಿಂಗ್ ಸೆಂಟರ್‍ನಲ್ಲಿಯೂ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, 2018ರ ಜನವರಿ 5 ಅರ್ಜಿ ಸಲ್ಲಿಕೆಗೆ ಕಡೆಯ ದಿನವಾಗಿದೆ.
ಬಹುಮಹಡಿ ಕಟ್ಟಡದಲ್ಲೂ ನೆಲಮಹಡಿ ಸೇರಿದಂತೆ ಮೂರು ಅಂತಸ್ತುಗಳನ್ನು ಒಳಗೊಂಡು 1 ಲಕ್ಷ ಮನೆಗಳನ್ನು ನಿರ್ಮಿಸಲಾಗಿದ್ದು, ಅರ್ಜಿ ಸಲ್ಲಿಸುವವರು ಹೆಚ್ಚಿನ ಮಾಹಿತಿಗೆ http://www.ashraya.kar.nic.in/cmonelakh ಅಥವಾ ದೂರವಾಣಿ ಸಂಖ್ಯೆ 080-23118888 ಸಂಪರ್ಕಿಸುವಂತೆ ಕೋರಲಾಗಿದೆ.

Facebook Comments

Sri Raghav

Admin