ಮಾತೃಪೂರ್ಣ ಯೋಜನೆ ಪರಾಮರ್ಶೆಗೆ ಆಗ್ರಹಿಸಿ ವಿಧಾನಸೌಧ ಚಲೋ

ಈ ಸುದ್ದಿಯನ್ನು ಶೇರ್ ಮಾಡಿ

Anganawadi--02

ಬೆಂಗಳೂರು, ಡಿ.5- ಮಾತೃಪೂರ್ಣ ಯೋಜನೆ ಬಗ್ಗೆ ಸರ್ಕಾರ ಪರಾಮರ್ಶೆ ನಡೆಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಯುಕ್ತ ಸಂಘರ್ಷ ಸಮಿತಿ ಇಂದು ವಿಧಾನಸೌಧ ಚಲೋ ಹಮ್ಮಿಕೊಂಡಿತ್ತು. ಸಮಗ್ರವಾದ ಅಧ್ಯಯನ, ಸಮೀಕ್ಷೆ, ಅಭಿಪ್ರಾಯಗಳನ್ನು ಕ್ರೂಢೀಕರಿಸದೆ ಮಾತೃಪೂರ್ಣ ಯೋಜನೆಯನ್ನು ಜಾರಿಗೊಳಿಸಿರುವುದರಿಂದ ಫಲಾನುಭವಿಗಳಿಗೆ ಸವಲತ್ತು ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಈ ಹಿಂದೆ ಇದ್ದ ಮಾದರಿಯಲ್ಲೇ ಪೌಷ್ಠಿಕ ಆಹಾರವನ್ನು ಗರ್ಭಿಣಿಯರು, ಬಾಣಂತಿಯರಿಗೆ ತಲುಪಿಸುವ ಯೋಜನೆಗಳನ್ನು ಜಾರಿಗೊಳಿಸುವಂತೆ ಒತ್ತಾಯಿಸಿದರು.

ರಾಜ್ಯದಲ್ಲಿ 65,911 ಅಂಗನವಾಡಿ ಕೇಂದ್ರಗಳಿವೆ. ಅ.2ರಿಂದ ಜಾರಿಗೊಂಡಿರುವ ಮಾತೃಪೂರ್ಣ ಯೋಜನೆ ಇದುವರೆಗೂ ಶೇ.60ರಷ್ಟು ಅನುಷ್ಠಾನಗೊಂಡಿಲ್ಲ. ಗರ್ಭಿಣಿ ಮತ್ತು ಬಾಣಂತಿಯರು ಸುಮಾರು 2ರಿಂದ 3 ಕಿ.ಮೀ. ದೂರವಿರುವ ಅಂಗನವಾಡಿ ಕೇಂದ್ರಗಳಿಗೆ ನಡೆದು ಬಂದು ಊಟ ಮಾಡಿ ಮತ್ತೆ ಹಿಂದಿರುಗಲು ಕಷ್ಟವೆಂಬ ಕಾರಣಕ್ಕೆ ಇದರಲ್ಲಿ ಭಾಗವಹಿಸುತ್ತಿಲ್ಲ. ಹೀಗಾಗಿ ಪೌಷ್ಠಿಕ ಆಹಾರದ ದುರುಪಯೋಗ ವಿವಿಧ ಹಂತಗಳಲ್ಲಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಈ ಯೋಜನೆಯ ಬಗ್ಗೆ ಪರಾಮರ್ಶೆ ನಡೆಯ ಬೇಕಿದೆ ಎಂದು ಆಗ್ರಹಿಸಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರಿಗೆ ಕನಿಷ್ಠ 18 ಸಾವಿರ ವೇತನ ನಿಗದಿಗೊಳಿಸಬೇಕು. ವಿಸ್ತರಣೆಯಾಗಿರುವ ಅಂಗನವಾಡಿ ಕೆಲಸಗಳ ಸಮಯವನ್ನು ಕಡಿತಗೊಳಿಸಬೇಕು ಎಂದು ಒತ್ತಾಯಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಅವರಿಗೆ ಮನವಿ ಮಾಡಿದ್ದೇವೆ ಎಂದು ಕಾರ್ಯಕರ್ತೆ ರತ್ನಕಲಂದಾನಿ ತಿಳಿಸಿದರು. ಅಂಗನವಾಡಿ ಕಾರ್ಯಕರ್ತೆ ಜಯಲಕ್ಷ್ಮಿ ಮಾತನಾಡಿ, ಕಾರ್ಯಕರ್ತೆಯರು ಬೆಳಗ್ಗೆ 7ಗಂಟೆಗೆ ಬರಬೇಕಾಗಿದೆ. ಸಮಯ ವಿಸ್ತರಣೆಯಾಗಿದೆ. ಇಂತಹ ಸಮಸ್ಯೆಗಳನ್ನು ಕೂಡಲೇ ಸರ್ಕಾರ ಬಗೆಹರಿಸಬೇಕು ಎಂದು ಮನವಿ ಮಾಡಿದರು.

ಪ್ರತಿಭಟನಾ ಸ್ಥಳಕ್ಕಾಗಮಿಸಿದ ಜಂಟಿ ನಿರ್ದೇಶಕಿ ರತ್ನಕಮ್ರಾರಾಣಿ, ಮಹತ್ವಪೂರ್ಣವಾದ ಮಾತೃಪೂರ್ಣ ಯೋಜನೆಯಲ್ಲಿ ಸಾಕಷ್ಟು ಲೋಪ ಇರುವ ಬಗ್ಗೆ ತಿಳಿಸಿದ್ದೀರಿ. ಆದರೆ, ಏಕಕಾಲದಲ್ಲಿ ಇಬ್ಬರಿಗೆ ಬಿಸಿಯೂಟ ತಲುಪಿಸಲು ಮಾಡಿರುವ ಯೋಜನೆ ಇದಾಗಿದ್ದು, ನೀವು ನೀಡಿರುವ ಮನವಿಯನ್ನು ಸರ್ಕಾರಕ್ಕೆ ತಲುಪಿಸಿ ನೂನ್ಯತೆ ಸರಿಪಡಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು. ಇಂದು ಬೆಳಗ್ಗೆ ನಗರದ ರೈಲ್ವೆ ನಿಲ್ದಾಣದಿಂದ ಪ್ರೀಡಂಪಾರ್ಕ್‍ವರೆಗೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 5ಸಾವಿರಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರು ಬೃಹತ್ ರ್ಯಾಲಿ ನಡೆಸಿದರು.

Facebook Comments

Sri Raghav

Admin