ಮುಂಬೈನಲ್ಲೂ ಒಖಿ ಚಂಡಮಾರುತದ ಅಬ್ಬರ, ಶಾಲೆಗಳಿಗೆ ರಜೆ, ಹೈ ಅಲರ್ಟ್ ಘೋಷಣೆ

ಈ ಸುದ್ದಿಯನ್ನು ಶೇರ್ ಮಾಡಿ

Mumbai-Rain--01

ಮುಂಬೈ, ಡಿ.5-ದಕ್ಷಿಣ ರಾಜ್ಯಗಳಾದ ತಮಿಳುನಾಡು ಮತ್ತು ಕೇರಳದಲ್ಲಿ ಸಾವು-ನೋವು ಮತ್ತು ಅಪಾರ ಹಾನಿಗೆ ಕಾರಣವಾಗಿದ್ದ ಒಖಿ ಚಂಡಮಾರುತ ಈಗ ದೇಶದ ವಾಣಿಜ್ಯ ರಾಜಧಾನಿ ಮುಂಬೈಗೂ ಕಾಲಿಟ್ಟಿದೆ. ಸೈಕ್ಲೋನ್ ಪರಿಣಾಮ ಮುಂಬೈ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಬಿರುಗಾಳಿಯಿಂದ ಕೂಡಿದ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಮುಂಬೈ ಹವಾಮಾನ ವೀಕ್ಷಣಾಲಯ ನೀಡಿರುವ ಎಚ್ಚರಿಕೆಯನ್ನು ಮಹಾರಾಷ್ಟ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಎದುರಾಗಬಹುದಾದ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿರುವಂತೆ ರಕ್ಷಣಾ ಪಡೆಗಳಿಗೆ ಸೂಚನೆ ನೀಡಲಾಗಿದ್ದು, ಹೈ ಅಲರ್ಟ್ ಘೋಷಿಸಲಾಗಿದೆ. ಮುಂಬೈ ಮತ್ತು ಸುತ್ತಮುತ್ತಲ ಪ್ರದೇಶಗಳಾದ ಸಿಂಧುದುರ್ಗ, ರತ್ನಗಿರಿ, ಥಾಣೆ, ರಾಯಗಢ್ ಮತ್ತು ಪಾಲ್ಗಡ್ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ಮುಂಜಾಗ್ರತಾ ಕ್ರಮವಾಗಿ ರಜೆ ಘೋಷಿಸಲಾಗಿದೆ.

ಒಖಿ ಪರಿಣಾಮ ಸಮುದ್ರದಲ್ಲಿ ದೈತ್ಯಾಕಾರದ ಅಲೆಗಳ ಉಬ್ಬರ ಸಾಧ್ಯತೆಗಳಿರುವುದರಿಂದ ಕಡಲ ಕಿನಾರೆಗೆ ತೆರಳದಂತೆ ಜನರಿಗೆ ಮತ್ತು ಸಾಗರ ಪ್ರದೇಶದಲ್ಲಿ ಮೀನುಗಾರಿಕೆಗೆ ತೆರಳದಂತೆ ಬೃಹನ್‍ಮುಂಬೈ ನಗರಪಾಲಿಕೆಯ ವಿಪತ್ತು ನಿರ್ವಹಣಾ ವಿಭಾಗ ಎಚ್ಚರಿಕೆ ನೀಡಿದೆ. ತೀರ ಪ್ರದೇಶಗಳಲ್ಲಿ ಗಂಟೆಗೆ ಸುಮಾರು 70 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ. ಮುಂಬೈ ನೈರುತ್ಯ ದಿಕ್ಕಿನಲ್ಲಿದ್ದ ಒಖಿ ಈಗ ಈಶಾನ್ಯದತ್ತ ವೇಗವಾಗಿ ಚಲಿಸುತ್ತಿದ್ದು, ತೀವ್ರ ವಾಯುಭಾರ ಕುಸಿತದೊಂದಿಗೆ ಸಂಜೆ ಭಾರೀ ಗಾಳಿ ಮಳೆಯಾಗುವ ನಿರೀಕ್ಷೆ ಇದೆ. ಪಶ್ಚಿಮ ರೈಲ್ವೆಯು ಪ್ರಯಾಣಿಕರ ಅನುಕೂಲಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಜ್ಜಾಗಿದೆ.

Facebook Comments

Sri Raghav

Admin