ದೇಶದಲ್ಲೇ ಕರ್ನಾಟಕ ಪೊಲೀಸ್ ಇಲಾಖೆ ನಂ.1 : ಗೃಹ ಸಚಿವ ರಾಮಲಿಂಗಾರೆಡ್ಡಿ

ಈ ಸುದ್ದಿಯನ್ನು ಶೇರ್ ಮಾಡಿ

RamalingaReddy--02

ಬೆಳಗಾವಿ, ಡಿ.6- ದೇಶದಲ್ಲಿ ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ನಂ.1 ಆಗಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಇಂದಿಲ್ಲಿ ಹೇಳಿದರು. ನಗರದ ಎಪಿಎಂಸಿ ಪೊಲೀಸ್ ಇಲಾಖೆಯ ಎದುರಿನ ಕೆಎಸ್‍ಆರ್‍ಪಿ ತರಬೇತಿ ಶಾಲೆ ಆವರಣದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಮಹಿಳಾ ಮತ್ತು ಪುರುಷ ಸ್ಪೆಷಲ್ ರಿಸರ್ವ್ ಪೊಲೀಸ್ ಕಾನ್‍ಸ್ಟೆಬಲ್ ಪ್ರ-ಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ 1 ಲಕ್ಷಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಬರುತ್ತಿದ್ದಾರೆ. ಜನಸಂಖ್ಯೆ ಹೆಚ್ಚಾಗಿದೆ. ಅದಕ್ಕೆ ತಕ್ಕಂತೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಸೈಬರ್ ಕ್ರೈಮ್ ಸೇರಿದಂತೆ ವಿವಿಧ ಅಪರಾಧಗಳ ತಡೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ನಾಲ್ಕೂವರೆ ವರ್ಷಗಳಲ್ಲಿ 11 ಸಾವಿರ ಮನೆಗಳನ್ನು ಪೊಲೀಸ್ ಸಿಬ್ಬಂದಿಗಳಿಗೆ ನಿರ್ಮಿಸಲಾಗಿದೆ. 2020ರ ವೇಳೆಗೆ ಇನ್ನೂ 4 ಸಾವಿರ ಮನೆಗಳನ್ನು ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಪೊಲೀಸ್ ಸಿಬ್ಬಂದಿಗಳಿಗೆ ಇನ್ನೂ ಸಾಕಷ್ಟು ಮೂಲಭೂತ ಸೌಕರ್ಯಗಳನ್ನು ನೀಡುವುದಾಗಿ ಅವರು ಭರವಸೆ ನೀಡಿದರು.
1963ರಲ್ಲಿ ಕೆಎಸ್‍ಆರ್‍ಪಿ ಅಸ್ತಿತ್ವಕ್ಕೆ ಬಂದಿದ್ದು, ಪ್ರಸ್ತುತ ಅದರಲ್ಲಿ 9000 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. 344 ಸಿಬ್ಬಂದಿಗಳ ಪೈಕಿ 200 ಮಂದಿ ಪದವೀಧರರಿರುವುದು ಹೆಮ್ಮೆಯ ಸಂಗತಿ ಎಂದರು.

ಪೊಲೀಸ್ ಮಹಾನಿರ್ದೇಶಕರಾದ ನೀಲಮಣಿ ರಾಜು ಅವರು ಮಾತನಾಡಿ, ಪೊಲೀಸ್ ಪ್ರ-ಶಿಕ್ಷಣ ಶಿಬಿರದಲ್ಲಿ ಒಟ್ಟು 344 ಮಂದಿ ತರಬೇತಿ ಪಡೆದಿದ್ದಾರೆ. ಪ್ರತಿ ಆರು ತಿಂಗಳಿಗೊಮ್ಮೆ ಪುನರಾವರ್ತನೆಗೊಳಿಸಲಾಗುವುದು. ಕರ್ತವ್ಯದಲ್ಲಿ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುವಂತೆ ಅವರಿಗೆ ಶುಭ ಹಾರೈಸಿದರು.
ಸಮಾರಂಭದಲ್ಲಿ ಕೆಎಸ್‍ಆರ್‍ಪಿಯ ಎಡಿಜಿಪಿ ಭಾಸ್ಕರ್‍ರಾವ್, ಐಜಿಪಿಗಳಾದ ಚರಣರೆಡ್ಡಿ, ರಾಮಚಂದ್ರರಾವ್, ಡಿಸಿಪಿಗಳಾದ ಸೀಮಾ ಲಾಟ್ಕರ, ಅಮರನಾಥ ರೆಡ್ಡಿ, ಪ್ರಾದೇಶಿಕ ಆಯುಕ್ತರಾದ ಶಿವಯೋಗಿ ಕಳಸದ, ಜಿಲ್ಲಾಧಿಕಾರಿ ಜಿಯಾವುಲ್ಲಾ, ಜಿಪಂ ಸಿಇಒ ರಾಮಚಂದ್ರನ್, ಡಿಎಫ್‍ಒ ಬಸವರಾಜು ಪಾಟೀಲ, ಎಸ್‍ಪಿ ಡಾ.ರವಿಕಾಂತೇಗೌಡ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Facebook Comments

Sri Raghav

Admin