ಅಧಿಸೂಚನೆಗೆ ಮುನ್ನವೇ ಪ್ರವೇಶಾತಿ ಪ್ರಕ್ರಿಯೆ ಪೂರ್ಣಗೊಳಿಸಿದ ಧನದಾಹಿ ಶಿಕ್ಷಣ ಸಂಸ್ಥೆಗಳು..!

ಈ ಸುದ್ದಿಯನ್ನು ಶೇರ್ ಮಾಡಿ

Admission-02

ಬೆಂಗಳೂರು,ಡಿ.7-ಕೂಸು ಹುಟುವುದಕ್ಕೂ ಮುನ್ನವೇ ಕುಲಾವಿ ಹೊಲಿಸಿದರು ಎಂಬ ಗಾದೆಯಂತೆ ಶೈಕ್ಷಣಿಕ ವರ್ಷ ಪ್ರಾರಂಭವಾಗುವ ಮುನ್ನವೇ ಆಗಲೇ ಪ್ರವೇಶಾತಿ ಮುಗಿಯುವ ಹಂತ ತಲುಪಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಪ್ರತಿಷ್ಠಿತ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ 2018-19ರ ಎಲ್‍ಕೆಜಿ, ಯುಕೆಜಿ ಹಾಗೂ ಪ್ರಥಮ ಪಿಯುಸಿ ಪ್ರವೇಶಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ.

ಸರ್ಕಾರದ ನಿಯಮದಂತೆ ಶೈಕ್ಷಣಿಕ ವರ್ಷ ಪ್ರಾರಂಭವಾಗುವ ಮುನ್ನ ಯಾವುದೇ ಸರ್ಕಾರಿ ಅನುದಾನ ಹಾಗೂ ಅನುದಾನರಹಿತ ಶಾಲಾ ಕಾಲೇಜುಗಳು ಪ್ರವೇಶ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತಿಲ್ಲ. ಮಾರ್ಚ್ ಇಲ್ಲವೇ ಏಪ್ರಿಲ್‍ನಲ್ಲಿ ಸರ್ಕಾರ ವಾರ್ಷಿಕ ಶುಲ್ಕಕ್ಕೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಿದ ಬಳಿಕವೇ ಪ್ರವೇಶಾತಿ ಆರಂಭಿಸಬೇಕು. ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಸೂಚನೆ ಹೊರಡಿಸಿದ ಬಳಿಕ ಶುಲ್ಕ ಸಂಬಂಧ ಅಭಿಪ್ರಾಯ ಪಡೆದ ನಂತರವೇ ಅಂತಿಮ ಅಧಿಸೂಚನೆ ಹೊರಡುತ್ತದೆ. ಬಳಿಕವಷ್ಟೇ ಶಾಲಾಕಾಲೇಜುಗಳು ವಿದ್ಯಾರ್ಥಿಗಳಿಗೆ ಪ್ರವೇಶಾತಿಗೆ ಅನುಮತಿ ನೀಡಬೇಕು.

ಆದರೆ ಬೆಂಗಳೂರು ಸೇರಿದಂತೆ ಮೈಸೂರು, ಮಂಗಳೂರು, ತುಮಕೂರು, ದಾವಣಗೆರೆ, ಶಿವಮೊಗ್ಗ , ಬಳ್ಳಾರಿ, ಕಲಬುರಗಿ, ಬೀದರ್, ವಿಜಯಪುರ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಸೇರಿದಂತೆ ಬಹುತೇಕ ಎಲ್ಲ ಕಡೆ ಆಗಲೇ ಪ್ರವೇಶಾತಿ ಪ್ರಕ್ರಿಯೆಯನ್ನೇ ಆಡಳಿತ ಮಂಡಳಿ ಪೂರ್ಣಗೊಳಿಸಿದೆ. ನವೆಂಬರ್ ತಿಂಗಳಿನಿಂದಲೇ ಪೆÇೀಷಕರು ತಮಗೆ ಬೇಕಾದ ಶಾಲಾಕಾಲೇಜುಗಳಲ್ಲಿ ಆಡಳಿತ ಮಂಡಳಿ ನಿಗದಿಪಡಿಸಿದ ಶುಲ್ಕವನ್ನು ಭರ್ತಿ ನೀಡಿ ತಮ್ಮ ಮಕ್ಕಳಿಗೆ ಪ್ರವೇಶಾತಿ ದೊರಕಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರತಿಷ್ಠಿತ ಶಾಲಾಕಾಲೇಜುಗಳಲ್ಲೇ ಮಕ್ಕಳನ್ನು ಓದಿಸಬೇಕೆಂಬ ಹಠಕ್ಕೆ ಬಿದ್ದಿರುವ ಐಟಿ-ಬಿಟಿ, ಐಎಎಸ್, ಐಪಿಎಸ್, ಕೆಎಸ್ ಸೇರಿದಂತೆ ಖಾಸಗಿ ಹಾಗೂ ಸರ್ಕಾರಿ ವಲಯದ ಅಧಿಕಾರಿಗಳು ಲಕ್ಷ ಲಕ್ಷ ವಂತಿಗೆ ನೀಡಿ ಪ್ರವೇಶಾತಿ ಪಡೆದಿದ್ದಾರೆ. ಒಂದೆಡೆ ಖಾಸಗಿ ಶಾಲೆಗಳಲ್ಲಿ ಹೆಚ್ಚುತ್ತಿರುವ ಶುಲ್ಕಕ್ಕೆ ಕಡಿವಾಣ ಹಾಕಲು ಸರ್ಕಾರ ನಾನಾ ರೀತಿಯ ಸರ್ಕಸ್ ನಡೆಸುತ್ತಿದೆ. ಆದರೆ ಪೆÇೀಷಕರು ಮಕ್ಕಳನ್ನು ಪ್ರತಿಷ್ಠಿತ ಸಂಸ್ಥೆಗೆ ಸೇರಿಸಲೇಬೇಕೆಂಬ ಹಠಕ್ಕೆ ಬಿದ್ದವರಂತೆ ಮುಗಿಬಿದ್ದು ದಾಖಲಿಸುತ್ತಿದ್ದಾರೆ.

ಆರ್‍ಟಿಇ ಸೀಟು ಭರ್ತಿ: ಇನ್ನು ಸುಪ್ರೀಂಕೋರ್ಟ್ ನಿರ್ದೇಶನದಂತೆ ಎಲ್ಲ ಅನುದಾನಿತ ಮತ್ತು ಅನುದಾನ ರಹಿತ ಶೈಕ್ಷಣಿಕ ಸಂಸ್ಥೆಗಳಲ್ಲಿ ಬಡತನರೇಖೆಗಿಂತ ಕೆಳಗಿರುವ(ಬಿಪಿಎಲ್) ಕುಟುಂಬಗಳಿಗೆ ಶೇ.25ರಷ್ಟು ಮೀಸಲಾತಿ ನೀಡಬೇಕೆಂಬ ನಿಯಮವಿದೆ. ಹಣದ ಹಪಾಹಪಿಗೆ ಬಿದ್ದಿರುವ ಶಿಕ್ಷಣ ಸಂಸ್ಥೆಗಳು ಕೇವಲ ಬೆರಳೆಣಿಕೆಯಷ್ಟು ಸೀಟುಗಳನ್ನು ಬಿಟ್ಟು ಆರ್‍ಟಿಇ ಸೀಟುಗಳನ್ನು ಭರ್ತಿ ಮಾಡಿಕೊಂಡಿದ್ದಾರೆ. ಸುಪ್ರೀಂಕೋರ್ಟ್ ನಿಯಮದಂತೆ ಶೇ.25ರಷ್ಟು ಸೀಟುಗಳನ್ನು ಮೀಸಲಿಡಬೇಕು. ಆದರೆ ಆಡಳಿತ ಮಂಡಳಿ ಮತ್ತು ಕೆಲವು ಅಧಿಕಾರಿಗಳ ಕುಮ್ಮಕ್ಕಿನಿಂದಾಗಿ ಇದು ಸಹ ಭರ್ತಿಯಾಗಿದೆ.

ಸೀಟು ಸಿಗುವುದಿಲ್ಲ: ಈ ಬಗ್ಗೆ ಪೆÇೀಷಕರನ್ನು ಕೇಳಿದರೆ ನಮಗೆ ಮಾರ್ಚ್ ನಂತರ ಬೇಕಾದ ಶಾಲಾಕಾಲೇಜುಗಳಲ್ಲಿ ಸೀಟು ಸಿಗುವುದಿಲ್ಲ. ಮಗುವಿಗೆ ಎಲ್‍ಕೆಜಿ ಇಲ್ಲವೇ ಪಿಯುಸಿ ಪ್ರವೇಶಾತಿಗೆ ಸೀಟು ಪಡೆಯಬೇಕೆಂದರೆ ಹರಸಾಹಸ ಮಾಡಬೇಕು. ಆ ವೇಳೆ ದುಪ್ಪಟ್ಟು ಹಣ ನೀಡಿದರೂ ಸೀಟು ಕೊಡುವುದಿಲ್ಲ. ಈಗಲೇ ಆಡಳಿತ ಮಂಡಳಿ ನಿಗದಿ ಮಾಡಿದ ಶುಲ್ಕವನ್ನು ನೀಡಿದರೆ ನಮಗೆ ಸೀಟು ಖಾತರಿಯಾಗುತ್ತದೆ. ಮಕ್ಕಳಿಗೆ ಸೀಟು ಸಿಕ್ಕಿಲ್ಲ ಎಂಬ ತಾಪತ್ರಯವು ನಿವಾರಣೆಯಾಗುತ್ತದೆ ಎಂಬ ಮಾತು ಕೇಳಿಬರುತ್ತದೆ.

ಪಿಯುಸಿಗೂ ಭರ್ತಿ: ಹೋಗಲಿ ಎಲ್‍ಕೆಜಿ, ಯುಕೆಜಿಗೆ ಪ್ರವೇಶಾತಿ ಪಡೆದಿದ್ದಾರೆ ಎಂದುಕೊಂಡರೆ ಇನ್ನು ಒಂದು ಹೆಜ್ಜೆ ಮುಂದು ಹೋಗಿರುವ ಪೆÇೀಷಕರು ಪ್ರಥಮ ಪಿಯುಸಿಗೂ ಕಾಲೇಜಿನಲ್ಲಿ ಪ್ರವೇಶಾತಿ ಪಡೆದಿದ್ದಾರೆ.
ತಮ್ಮ ಮಗ/ಮಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ ಎಂಬ ದೃಢಸಂಕಲ್ಪ ಇಟ್ಟುಕೊಂಡಿರುವ ಪೆÇೀಷಕರು ಆಗಲೇ ಪ್ರತಿಷ್ಟಿತ ಕಾಲೇಜುಗಳಲ್ಲಿ ಸೀಟನ್ನು ಭರ್ತಿ ಮಾಡಿಕೊಂಡಿದ್ದಾರೆ. ಒಂದೆಡೆ ಎಲ್ಲಾ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡುತ್ತೇವೆ ಎಂದು ಸರ್ಕಾರ ಬೊಬ್ಬೆ ಹಾಕುತ್ತದೆ. ಇನ್ನೊಂದೆಡೆ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಮುಚ್ಚುವ ಹಂತ ತಲುಪಿವೆ.
ಇನ್ನು ಶೈಕ್ಷಣಕ ವರ್ಷ ಆರಂಭವಾಗುವ ಮುನ್ನವೇ ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರವೇಶಾತಿ ಪ್ರಕ್ರಿಯೆ ಮುಗಿಸಿದರೆ, ಸರ್ಕಾರಿ ಶಾಲಾಕಾಲೇಜುಗಳಿಗೆ ಶಾಶ್ವತ ಬೀಗ ಬೀಳುವ ದಿನಗಳು ದೂರ ಇಲ್ಲ.

Facebook Comments

Sri Raghav

Admin