ಆಟೋದಲ್ಲಿ ಬಾಲಕಿಯನ್ನು ಕರೆದೊಯ್ದು ಗ್ಯಾಂಗ್ ರೇಪ್ ಮಾಡಿದ್ದ ಇಬ್ಬರು ಕಾಮುಕರ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

tuma-1

ತುಮಕೂರು, ಡಿ.7- ಪರಿಚಯಸ್ಥ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಆಟೋದಲ್ಲಿ ಕರೆದೊಯ್ದ ಕಾಮುಕರು ಆಕೆ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ನಡೆಸಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಪ್ರಕರಣ ಸಂಬಂಧ ಘಟನೆ ನಡೆದ ಕೆಲವೇ ಘಂಟೆಗಳಲ್ಲಿ ಪ್ರಮುಖ ಆರೋಪಿ ಹರೀಶ ಹಾಗೂ ಚಿದಾನಂದ ಎಂಬುವರನ್ನು ಬಂಧಿಸಿದ್ದು, ಉಳಿದವರಿಗಾಗಿ ಶೋಧ ಮುಂದುವರಿದಿದೆ.
ಕೊರಟಗೆರೆ ತಾಲೂಕಿನ ಗ್ರಾಮವೊಂದರ ನಿವಾಸಿಯಾದ 13 ವರ್ಷದ ಬಾಲಕಿಗೆ ಹರೀಶ ಎಂಬುವನ ಪರಿಚಯವಿತ್ತು. ಹರೀಶ ಯಲ್ಲಾಪುರ ಬಳಿಯ ಕಾರ್ಖಾನೆಯೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಹಾಗೂ ಆಟೋ ಚಾಲಕ ವೃತ್ತಿ ಮಾಡುತ್ತಿದ್ದನು.

ಈತನಿಗೆ ಮದುವೆಯಾಗಿದ್ದು, ಪತ್ನಿ ಊರಿಗೆ ತೆರಳಿದ್ದರು. ಈ ವೇಳೆ ಹರೀಶ ಪರಿಚಯಸ್ಥ ಬಾಲಕಿಯನ್ನು ಮಾತನಾಡುವುದಾಗಿ ನಿನ್ನೆ ಸಂಜೆ ಕರೆಸಿಕೊಂಡಿದ್ದಾನೆ. ಬಾಲಕಿ ಬರುತ್ತಿದ್ದಂತೆ ಆಟೋದಲ್ಲಿ ಹತ್ತಿಸಿಕೊಂಡು ತಾನು ಕೆಲಸ ಮಾಡುತ್ತಿದ್ದ ಎಬಿ ಕಾರ್ಖಾನೆ (ಕೆಲ ತಿಂಗಳಿನಿಂದ ಮುಚ್ಚಿದೆ) ಬಳಿ ಕರೆದೊಯ್ದಿದ್ದಾನೆ. ಈ ಜಾಗಕ್ಕೆ ಆತನ ಸ್ನೇಹಿತರಾದ ಮಧು, ಕೇಶವ, ಚಿದಾನಂದ, ಚಂದು ಸಹ ಬಂದಿದ್ದು, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕಿಯನ್ನು ರಾತ್ರಿ 10 ಗಂಟೆಯಲ್ಲಿ ಯಲ್ಲಾಪುರದ ರಸ್ತೆ ಬಳಿ ಮಲಗಿಸಿ ಪರಾರಿಯಾಗಿದ್ದಾರೆ. 11 ಗಂಟೆ ಸಂದರ್ಭದಲ್ಲಿ ಈ ಮಾರ್ಗದಲ್ಲಿ ಹೋಗುತ್ತಿದ್ದವರು ನೋಡಿ ನೀರು ತಂದು ಚಿಮುಕಿಸಿ ಬಾಲಕಿಯನ್ನು ಎಬ್ಬಿಸಿ ತಕ್ಷಣ ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಸುದ್ದಿ ತಿಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಗೋಪಿನಾಥ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ, ಡಿವೈಎಸ್‍ಪಿ ನಾಗರಾಜ್, ಗ್ರಾಮಾಂತರ ಠಾಣೆ ವೃತ್ತನಿರೀಕ್ಷಕ ಕರಿತಿಮ್ಮಯ್ಯ, ಮಹಿಳಾ ಠಾಣೆ ಸಬ್‍ಇನ್ಸ್‍ಪೆಕ್ಟರ್ ನಿರ್ಮಲಾ ಆಸ್ಪತ್ರೆಗೆ ತೆರಳಿ ಬಾಲಕಿಯಿಂದ ಹೇಳಿಕೆ ಪಡೆದಿದ್ದಾರೆ. ಘಟನೆ ಸಂಬಂಧ ಬಾಲಕಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.  ತದನಂತರ ಕಾಮುಕರ ಬಂಧನಕ್ಕಾಗಿ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ಕೈಗೊಂಡು ಘಟನೆ ನಡೆದ ಕೆಲವೇ ಘಂಟೆಗಳಲ್ಲಿ ಪ್ರಮುಖ ಆರೋಪಿ ಹರೀಶ ಹಾಗೂ ಮತ್ತೊಬ್ಬ ಆರೋಪಿ ಚಿದಾನಂದ ಎಂಬಾತನನ್ನು ಬಂಧಿಸಿ ಉಳಿದವರ ಬಂಧನಕ್ಕೆ ಬಲೆ ಬೀಸಿದ್ದಾರೆ.

Facebook Comments