ಇಸ್ರೇಲ್ ರಾಜಧಾನಿಯನ್ನಾಗಿ ಜೆರುಸಲೆಂ ಘೋಷಣೆ : ನಾಳೆ ವಿಶ್ವಸಂಸ್ಥೆ ಮಹತ್ವದ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

UN--02

ವಾಷಿಂಗ್ಟನ್, ಡಿ.7-ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಸ್ರೇಲ್ ರಾಜಧಾನಿಯನ್ನಾಗಿ ಜೆರುಸಲೆಂನನ್ನು ಮಾನ್ಯ ಮಾಡಲು ಘೋಷಿಸಿರುವ ಹಿನ್ನೆಲೆಯಲ್ಲಿ ಉದ್ಭವಿಸಬಹುದಾದ ಬಿಕ್ಕಟ್ಟು ಕುರಿತು ಚರ್ಚಿಸಲು ವಿಶ್ವಸಂಸ್ಥೆ ಭದ್ರತಾ ಮಂಡಳಿ ನಾಳೆ ಮಹತ್ವದ ಸಭೆಯೊಂದನ್ನು ಕರೆದಿದೆ. ನ್ಯೂಯಾರ್ಕ್‍ನಲ್ಲಿರುವ ವಿಶ್ವಸಂಸ್ಥೆ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಈ ವಿಶೇಷ ಸಭೆ ನಡೆಯಲಿದ್ದು, ಭದ್ರತಾ ಮಂಡಳಿಯ 15 ಸದಸ್ಯ ರಾಷ್ಟ್ರಗಳಲ್ಲಿ ಎಂಟು ದೇಶಗಳ ಮನವಿ ಮೇರೆಗೆ ಭದ್ರತಾ ಮಂಡಳಿ ಸಮಾವೇಶಗೊಳ್ಳಲಿದೆ.

ಎರಡು ಖಾಯಂ ಸದಸ್ಯ ದೇಶಗಳಾದ ಬ್ರಿಟನ್ ಮತ್ತು ಫ್ರಾನ್ಸ್ ಹಾಗೂ ಇತರ ಶಾಶ್ವತರಹಿತ ರಾಷ್ಟ್ರಗಳಾದ ಬೊಲಿವಿಯಾ, ಈಜಿಪ್ಟ್, ಇಟಲಿ, ಸೆನೆಗಲ್, ಸ್ವೀಡನ್ ಮತ್ತು ಉರುಗ್ವೆ ವಿಶೇಷ ಸಭೆ ಕರೆಯುವಂತೆ ಕೋರಿದ್ದವು.  ವಿಶ್ವಸಂಸ್ಥೆ ಮುಖ್ಯಸ್ಥ ಅಂಟೊನಿಯೊ ಗುಟೆರ್ರೆಸ್ ಭದ್ರತಾ ಮಂಡಳಿಯನ್ನು ಉದ್ದೇಶಿಸಿ ಮಾತನಾಡುವರು. ಈ ವಿಷಯವನ್ನು ನೇರ ಮಾತುಕತೆ ಮೂಲಕ ಇತ್ಯರ್ಥಗೊಳಿಸಬೇಕೆಂದು ಅವರು ಈ ಹಿಂದೆ ಮನವಿ ಮಾಡಿದ್ದರು.   ಟ್ರಂಪ್ ನಿನ್ನೆ ರಾತ್ರಿ ಇಸ್ರೇಲ್ ರಾಜಧಾನಿಯನ್ನಾಗಿ ಜೆರುಸಲೆಂನನ್ನು ಮಾನ್ಯ ಮಾಡಿರುವುದಾಗಿ ಘೋಘಿಸಿದ್ದು ಅಮೆರಿಕದ ರಾಯಭಾರಿ ಕಚೇರಿಯನ್ನು ಟೆಲ್‍ಅವಿವ್‍ನಿಂದ ಜೆರುಸಲೆಂಗೆ ಸ್ಥಳಾಂತರಿಸಲು ವಿದೇಶಾಂಗ ಇಲಾಖೆಗೆ ಸೂಚನೆ ನೀಡಿದ್ದಾರೆ.

ಪ್ರಾಚೀನ ಕಾಲದಿಂದಲೂ ಜೆರುಸಲೆಂ ಯಹೂದಿಯರಿಗೆ ರಾಜಧಾನಿಯಾಗಿದೆ. ಅಲ್ಲದೇ ಈಗಲೂ ಅಲ್ಲಿ ಸರ್ಕಾರದ ಕೇಂದ್ರ ಕಚೇರಿ, ಪ್ರಮುಖ ಸಚಿವಾಲಯಗಳು ಮತ್ತು ಸುಪ್ರೀಂಕೋರ್ಟ್ ಇದೆ. ಹೀಗಾಗಿ ಟ್ರಂಪ್ ಟೆಲ್‍ಅವಿವ್ ಬದಲು ಜೆರುಸಲೆಂನನ್ನೇ ಇಸ್ರೇಲ್ ರಾಜಧಾನಿಯಾಗಿ ಪರಿಗಣಿಸಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.   ಟ್ರಂಪ್‍ರ ಈ ನಡೆಯಿಂದ ಇಸ್ರೇಲ್‍ನಲ್ಲಿ ರಾಜತಾಂತ್ರಿಕ ಬಿಕ್ಕಟ್ಟುಗಳು ಉಲ್ಬಣಗೊಳ್ಳುವ ಸಾಧ್ಯತೆ ಇದೆ. ಅರಬ್ ರಾಷ್ಟ್ರಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಐತಿಹಾಸಿಕ ನಿರ್ಧಾರ: ಜೆರುಸಲೆಂನನ್ನು ಇಸ್ರೇಲ್ ರಾಜಧಾನಿಯನ್ನಾಗಿ ಮಾನ್ಯ ಮಾಡಿರುವುದು ಟ್ರಂಪ್ ಅವರ ಚಾರಿತ್ರಿಕ ನಿರ್ಧಾರ ಎಂದು ವಿಶ್ವಸಂಸ್ಥೆಗೆ ಅಮೆರಿಕ ರಾಯಭಾರಿಯಾಗಿರುವ ನಿಕ್ಕಿ ಹ್ಯಾಲಿ ಪ್ರಶಂಸಿಸಿದ್ದಾರೆ.

Facebook Comments

Sri Raghav

Admin