ಗುಜರಾತ್ ಮೆಘಾ ಫೈಟ್ : ಮೊದಲ ಹಂತದ ಚುನಾವಣಾ ಪ್ರಚಾರಕ್ಕೆ ತೆರೆ, ಅಬ್ಬರಿಸಿದ ಮೋದಿ, ರಾಹುಲ್

ಈ ಸುದ್ದಿಯನ್ನು ಶೇರ್ ಮಾಡಿ

Modi-vs-Rahul--02

ಅಹಮದಾಬಾದ್, ಡಿ.7-ಇಡೀ ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಗುಜರಾತ್ ವಿಧಾನಸಭಾ ಮೊದಲ ಹಂತದ ಚುನಾವಣಾ ಪ್ರಚಾರಕ್ಕೆ ಇಂದು ಸಂಜೆ ತೆರೆ ಬಿದ್ದಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷರಾಗಲಿರುವ ರಾಹುಲ್‍ಗಾಂಧಿ ಅವರಿಗೆ ಪ್ರತಿಷ್ಠೆಯ ಪ್ರಶ್ನೆಯ ಕಣವಾಗಿರುವ ಈ ಚುನಾವಣೆಗೆ ಡಿ.9 ಶನಿವಾರ ಮತದಾನ ನಡೆಯಲಿದೆ. ಚುನಾವಣಾ ಪ್ರಚಾರದ ಅಂತಿಮ ದಿನವಾದ ಇಂದು ಕೂಡ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಇತರ ಪ್ರಮುಖ ರಾಜಕೀಯ ಪಕ್ಷಗಳ ಅಗ್ರ ನಾಯಕರು ಬಿರುಸಿನ ಮತಯಾಚನೆ ನಡೆಸಿದರು. ಅನೇಕ ರ್ಯಾಲಿ ಮತ್ತು ಸಾರ್ವಜನಿಕ ಸಭೆಗಳಲ್ಲಿ ಮತದಾರರ ಓಲೈಕೆ ನಡೆಯಿತು.

ಒಟ್ಟು 182 ಸದಸ್ಯ ಬಲದ ಗುಜರಾತ್ ವಿಧಾನಸಭೆಯ 89 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್ ಪ್ರಾಂತ್ಯಗಳಲ್ಲಿ ಏರ್ಪಟ್ಟಿರುವ ಹೈವೋಲ್ಟೇಜ್ ಚುನಾವಣೆಯಲ್ಲಿ ಒಟ್ಟು ಮುಖ್ಯಮಂತ್ರಿ ವಿಜಯ್‍ಭಾಯ್ ರೂಪಾನಿ ಸೇರಿದಂತೆ 977 ಅಭ್ಯರ್ಥಿಗಳ ಹಣೆಬರಹ ನಿರ್ಧಾರವಾಗಲಿದೆ.
ಪ್ರಥಮ ಹಂತಕ್ಕಾಗಿ ಮೋದಿ ಮತ್ತು ರಾಹುಲ್ ಪೈಪೋಟಿಗೆ ಬಿದ್ದವರಂತೆ ಬಿರುಸಿನ ಚುನಾವಣಾ ಪ್ರಚಾರಗಳನ್ನು ನಡೆಸಿದ್ದರು. ಪ್ರಧಾನಿ 14 ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ಪಕ್ಷವನ್ನು ಮತ್ತು ರಾಹುಲ್‍ರನ್ನು ತರಾಟೆಗೆ ತೆಗೆದುಕೊಂಡಿದ್ದರೆ, ಕಾಂಗ್ರೆಸ್ ಮುಖ್ಯಸ್ಥರಾಗಲಿರುವ ರಾಹುಲ್, ಮೋದಿ ಅಭಿವೃದ್ದಿ ಕಾರ್ಯಗಳಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿ ವಾಗ್ದಾಳಿ ನಡೆಸಿದ್ದರು.

ನೋಟು ಅಮಾನ್ಯೀಕರಣ ಮತ್ತು ಜಿಎಸ್‍ಟಿಗಳ ನಕರಾತ್ಮಕ ಅಂಶಗಳು ಈ ಚುನಾವಣೆಯಲ್ಲಿ ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದರೆ, ಕಮಲದ ಭದ್ರ ಕೋಟೆಯನ್ನು ಧ್ವಂಸಗೊಳಿಸಿ ಕೈ ಅಧಿಪತ್ಯ ಸ್ಥಾಪಿಸಬೇಕೆಂಬುದು ಕಾಂಗ್ರೆಸ್‍ನ ಹೆಗ್ಗುರಿಯಾಗಿದೆ. ರಾಜಕೀಯ ಕುರುಕ್ಷೇತ್ರ ಎನಿಸಿರುವ ಈ ಚುನಾವಣೆ ಕದನ ಕೌತುಕ ಕೆರಳಿಸಿದೆ.  ಡಿ.14ರಂದು ಎರಡನೇ ಹಂತದ ಚುನಾವಣೆ ನಡೆಯಲಿದ್ದು, ಡಿ.18ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

Facebook Comments

Sri Raghav

Admin