ಡಿ.15ಕ್ಕೆ ಜೆಡಿಎಸ್ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿ ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

JDS-Kumaraswamy--01

ಬೆಂಗಳೂರು,ಡಿ.7-ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಹುಮತದಿಂದ ಗೆದ್ದು ಅಧಿಕಾರ ಹಿಡಿಯಲೇಬೇಕೆಂದು ಪಣ ತೊಟ್ಟಿರುವ ಜೆಡಿಎಸ್ ಡಿಸೆಂಬರ್ 15ರಂದು ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿದೆ. ಸಂಭವನೀಯ ಅಭ್ಯರ್ಥಿಗಳ ಹೆಸರುಗಳನ್ನು ವರಿಷ್ಠರು ತೀರ್ಮಾನಿಸಿದ್ದು , 140ರಿಂದ 150 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ. ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಪಣತೊಟ್ಟಿರುವ ಜೆಡಿಎಸ್ ಈಗಾಗಲೇ ಶ್ರಮ ವಹಿಸಿ ಸಭೆಗಳು, ಸಮಾವೇಶ ಮತ್ತಿತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಉತ್ತರ ಕರ್ನಾಟಕ ಭಾಗದಲ್ಲಿ ಈಗಾಗಲೇ ಪ್ರವಾಸ ಮಾಡಿದ್ದಾರೆ. ವಿಧಾನಸಭಾ ಕ್ಷೇತ್ರವಾರು ಅಧ್ಯಕ್ಷರು, ಮುಖಂಡರು, ಪ್ರಮುಖರ ಸಭೆಗಳನ್ನು ನಡೆಸಲಾಗುತ್ತಿದೆ. ಇಂದು ನಗರದಲ್ಲಿ ಶಿವಾಜಿನಗರ, ಶಾಂತಿನಗರ, ದಾಸರಹಳ್ಳಿ , ಪುಲಿಕೇಶಿನಗರ, ಚಾಮರಾಜಪೇಟೆ, ಸರ್ವಜ್ಞನಗರ, ಸರ್.ಸಿ.ವಿ.ರಾಮನ್‍ನಗರ, ಬಿಟಿಎಂ ಲೇಔಟ್, ಬೊಮ್ಮನಹಳ್ಳಿ, ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರಗಳ ಅಧ್ಯಕ್ಷರು , ಮುಖಂಡರು , ಪ್ರಮುಖರನ್ನು ಒಳಗೊಂಡ ಸಭೆಯನ್ನು ಎಚ್.ಡಿ.ಕುಮಾರಸ್ವಾಮಿ ನಡೆಸಿದರು.
ಸಭೆಯಲ್ಲಿ ಯಾವುದೇ ಭಿನ್ನಮತಕ್ಕೆ ಅವಕಾಶ ನೀಡದೆ ಸರ್ವಸಮ್ಮತ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಎಚ್.ಡಿ.ಕುಮಾರಸ್ವಾಮಿ ಅವರು ನಿರಂತರವಾಗಿ ವಿಧಾನಸಭಾ ಕ್ಷೇತ್ರವಾರು ಪ್ರವಾಸ ಮಾಡಿ ಸಂಭವನೀಯ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳಿಸಿದ್ದಾರೆ. 33 ಹಾಲಿ ಶಾಸಕರಿಗೆ ಟಿಕೆಟ್ ನೀಡಲಾಗುತ್ತಿದೆ. ಒಂದೊಂದು ಕ್ಷೇತ್ರದಲ್ಲಿ ಹೆಚ್ಚು ಮಂದಿ ಆಕಾಂಕ್ಷಿಗಳಿದ್ದರೆ ಅಂಥವರಲ್ಲಿ ಒಬ್ಬರನ್ನು ಆಯ್ಕೆ ಮಾಡಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸರ್ವಸಮ್ಮತ ಅಭ್ಯರ್ಥಿಯನ್ನು ಅಖೈರುಗೊಳಿಸಲಾಗುತ್ತಿದೆ. ಚುನಾವಣೆಯಲ್ಲಿ ಬಹುಮತ ಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕೆಂಬ ಮಹಾದಾಸೆ ಹೊಂದಿರುವ ಜೆಡಿಎಸ್ 170 ಕ್ಷೇತ್ರಗಳನ್ನು ಹೆಚ್ಚು ಕೇಂದ್ರೀಕರಿಸಿ ಕಾರ್ಯ ಪ್ರಾರಂಭಿಸಿದೆ.

224 ವಿಧಾನಸಭಾ ಕ್ಷೇತ್ರಗಳ ಪೈಕಿ ಎ, ಬಿ ಮತ್ತು ಸಿ ಎಂದು ಮೂರು ವರ್ಗಗಳಾಗಿ ವಿಂಗಡನೆ ಮಾಡಲಾಗಿದೆ. ಎ ವಿಭಾಗದಲ್ಲಿ ಜೆಡಿಎಸ್ ಪ್ರಾಬಲ್ಯವಿರುವ 80 ಕ್ಷೇತ್ರಗಳಿದ್ದು , ಇವು ಹೆಚ್ಚಾಗಿ ಹಳೆಮೈಸೂರು ಭಾಗವಾಗಿದೆ. ಈ ಕ್ಷೇತ್ರಗಳ ಮೇಲೆ ಅತಿಹೆಚ್ಚಿನ ನಿಗಾ ಇರಿಸಲು ಪಕ್ಷದ ವರಿಷ್ಠರಾದ ಎಚ್.ಡಿ.ದೇವೇಗೌಡರು ಹಾಗೂ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ನಿರ್ಧರಿಸಿದ್ದಾರೆ. ಈ ಭಾಗದಲ್ಲಿ ಶೇ.100ರಷ್ಟು ಗೆಲ್ಲುವ ಅವಕಾಶವಿದೆ ಎಂದು ವರಿಷ್ಠರು ತೀರ್ಮಾನಿಸಿದ್ದಾರೆ. ಹಾಗಾಗಿ ಶತಾಯಗತಾಯ ಶ್ರಮವಹಿಸಿ ಈ 80 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳ ಗೆಲುವಿಗೆ ಬೇಕಾದ ಕಾರ್ಯ ತಂತ್ರಗಳನ್ನು ರೂಪಿಸಿದ್ದಾರೆ.

ಬಿ ವರ್ಗದಲ್ಲಿ 90 ವಿಧಾನಸಭಾ ಕ್ಷೇತ್ರಗಳನ್ನು ಗುರುತಿಸಲಾಗಿದೆ. ಈ ಭಾಗಗಳಲ್ಲಿ ಸೋಲು-ಗೆಲುವು ಸಮವಾಗಿದೆ. ಇವು ಹೆಚ್ಚಾಗಿ ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ ಭಾಗದ ವಿಧಾನಸಭಾ ಕ್ಷೇತ್ರಗಳಾಗಿದ್ದು , 2ನೇ ಹಂತದ ನಾಯಕರಿಗೆ ಹೊಣೆ ನೀಡಲು ತೀರ್ಮಾನಿಸಲಾಗಿದೆ ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ. ಸಿ ವರ್ಗದಲ್ಲಿ 54 ವಿಧಾನಸಭಾ ಕ್ಷೇತ್ರಗಳನ್ನು ಗುರುತಿಸಲಾಗಿದ್ದು , ಇವು ಕರಾವಳಿ ಭಾಗವಾಗಿದೆ. ಇಲ್ಲಿ ಜೆಡಿಎಸ್‍ಗೆ ಅಷ್ಟಾಗಿ ನೆಲೆಯಿಲ್ಲ. ಆಕಾಂಕ್ಷಿಗಳ ನಡುವೆ ಪೈಪೂಟಿಯೂ ಇಲ್ಲ. ಹಾಗಾಗಿ ಸ್ಥಳೀಯ ಮುಖಂಡರಿಗೆ ಹೊಣೆಗಾರಿಕೆ ನೀಡಲು ಉದ್ದೇಶಿಸಲಾಗಿದೆ. ಜೆಡಿಎಸ್ ಭದ್ರಕೋಟೆಯಾಗಿರುವ ಹಳೇ ಮೈಸೂರು ಭಾಗವನ್ನು ಕೇಂದ್ರೀಕರಿಸಿಗೆಲುವಿಗೆ ಕಾರ್ಯ ತಂತ್ರಗಳನ್ನು ಹೆಣೆಯಲಾಗಿದೆ. ಪೈಪೋಟಿ ಹೆಚ್ಚಾಗಿರುವ ಕ್ಷೇತ್ರಗಳಲ್ಲಿ ಹಾಗೂ ಆಕಾಂಕ್ಷಿಗಳು ಹೆಚ್ಚಾಗಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಗುರುತಿಸಿ ಸರ್ವಸಮ್ಮತ ಅಭ್ಯರ್ಥಿಯನ್ನು ಹಾಕಲು ಕಸರತ್ತು ನಡೆಸಲಾಗುತ್ತಿದೆ.

Facebook Comments

Sri Raghav

Admin