ಪ್ರತಿಷ್ಠೆಗಾಗಿ ಪಕ್ಷ ಹಾಳು ಮಾಡಬೇಡಿ : ‘ಕೈ’ನಾಯಕರಿಗೆ ವೇಣುಗೋಪಾಲ್ ವಾರ್ನಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

Venugopal--02

ಬೆಂಗಳೂರು, ಡಿ.7- ಯಾವುದೇ ಪ್ರತಿಷ್ಠೆಗಳಿಂದಾಗಿ ಯಾರಾದರೂ ಪಕ್ಷಕ್ಕೆ ಹಾನಿ ಮಾಡಿದರೆ ಸಹಿಸುವುದಿಲ್ಲ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಇಂದೂ ಕೂಡ ಮುಂದುವರೆದ ಕಾಂಗ್ರೆಸ್ ಸರಣಿ ಸಭೆಯಲ್ಲಿ ಬೆಳಗಾವಿ ಹಾಗೂ ಗುಲ್ಬರ್ಗ ಕಂದಾಯ ವಿಭಾಗ ಜಿಲ್ಲೆಗಳ ಮುಖಂಡರು, ಜನಪ್ರತಿನಿಧಿಗಳು, ವಿಧಾನ ಸಭೆ, ವಿಧಾನ ಪರಿಷತ್ ಸೇರಿದಂತೆ ಇನ್ನಿತರ ಚುನಾವಣೆಗಳಲ್ಲಿ ಸ್ಪರ್ಧಿಸಿ ಸೋತವರು , ಜಿಲ್ಲಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಮೇಯರ್‍ಗಳೊಂದಿಗೆ ನಡೆಸಿದ ಸಭೆಯಲ್ಲಿ ಯಾವುದೇ ಪ್ರತಿಷ್ಠೆಗಳಿಗೆ ಅಂಟಿಕೊಳ್ಳದೆ ಪಕ್ಷದ ಸಂಘಟನೆ ಹಾಗೂ ಬಲವರ್ಧನೆಗೆ ಶ್ರಮಿಸುವಂತೆ ಸೂಚಿಸಿದರು.

ಪಕ್ಷವನ್ನು ಅಧಿಕಾರಕ್ಕೆ ತರುವುದೇ ನಮ್ಮ ಮೊದಲ ಆದ್ಯತೆಯಾಗಬೇಕು. ನಮ್ಮ ಪಕ್ಷ ಅಧಿಕಾರಕ್ಕೆ ಬರಬೇಕು. ಅಧಿಕಾರದ ಗದ್ದುಗೆ ಹಿಡಿಯಲು ಯಾವುದೇ ಒಳ ಜಗಳಗಳು, ಒಣ ಪ್ರತಿಷ್ಠೆಗಳು ಕಾರಣವಾಗಬಾರದು. ಇದರಿಂದ ಪಕ್ಷಕ್ಕೂ ಹಾನಿಯಾಗಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಕಾರ್ಯ ಪ್ರವೃತ್ತರಾಗಿ ಎಂದು ಸಲಹೆ ಮಾಡಿದರು. ಈ ಹಿಂದೆಯೂ ಒಂದು ಬಾರಿ ಸಭೆ ನಡೆಸಿದ್ದೆವು. ಆಗ ಚರ್ಚಿತವಾದ ಯಾವ ಯಾವ ಅಂಶಗಳನ್ನು ಜಾರಿಗೊಳಿಸಿದ್ದಾರೆ. ಯಾವ ರೀತಿಯ ಯೋಜನೆಗಳನ್ನು ಹಮ್ಮಿಕೊಂಡು ಕಾರ್ಯರೂಪಕ್ಕೆ ತಂದಿದ್ದಾರೆ ಎಂಬ ಎಲ್ಲಾ ವಿವರಣೆಗಳನ್ನು ಪಡೆದ ಅವರು, ಮುಂದಿನ ದಿನಗಳಲ್ಲಿ ನಡೆಯುವ ಮತ್ತೊಂದು ಸುತ್ತಿನ ಸಭೆಯಲ್ಲಿ ಈ ಯೋಜನೆಗಳ ಫಲಿತಾಂಶ ಕಂಡು ಬರಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರೂ ಶ್ರಮ ವಹಿಸಿ ಎಂದು ಹೇಳಿದರು. ಬೆಳಗಾವಿ ಗ್ರಾಮೀಣ ಭಾಗ , ಧಾರವಾಡ, ಹುಬ್ಬಳ್ಳಿ ನಗರ, ಉತ್ತರ ಕನ್ನಡ, ಬಾಗಲಕೋಟೆ, ಚಿಕ್ಕೋಡಿ, ಗದಗ, ಬಿಜಾಪುರ ಜಿಲ್ಲೆಗಳ ಮುಖಂಡರ ಜತೆ ಇಂದು ಕೆ.ಸಿ.ವೇಣುಗೋಪಾಲ್ ನಡೆಸಿದ ಚರ್ಚೆ ವೇಳೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಪ್ರಚಾರ ಸಮಿತಿ ಅಧ್ಯಕ್ಷ ಎಸ್.ಆರ್.ಪಾಟೀಲ್ ಸೇರಿದಂತೆ ಇನ್ನಿತರ ಮುಖಂಡರು ಹಾಜರಿದ್ದರು.

Facebook Comments

Sri Raghav

Admin