ಹರಿದ ಧ್ವಜ ರಾಜಸ್ತಾನದಲ್ಲೊಂದು ಲವ್ ಜಿಹಾದ್ : ಯುವಕನ ಸಜೀವ ದಹನ

ಈ ಸುದ್ದಿಯನ್ನು ಶೇರ್ ಮಾಡಿ

Love-Jihad--02

ಜೈಪುರ, ಡಿ.7-ಲವ್ ಜಿಹಾದ್ ಪ್ರಕರಣದ ಸಂಬಂಧ ಮುಸ್ಲಿಂ ಯುವಕನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಜೀವಂತ ದಹನ ಮಾಡಿರುವ ಭೀಕರ ಘಟನೆ ರಾಜಸ್ತಾನದ ರಾಜ್‍ಸಮಂದ್‍ನಲ್ಲಿ ಬೆಳಕಿಗೆ ಬಂದಿದೆ. ಈ ಘಟನೆಯಿಂದಾಗಿ ಆ ಪ್ರದೇಶದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ. ಮರುಭೂಮಿ ಪ್ರದೇಶವಾದ ರಾಜ್‍ಸಮಂದ್‍ನ ರಾಜ್‍ನಗರ್ ಪ್ರದೇಶದ ದೇವ್ ಹೆರಿಟೇಜ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಯುವಕನ ಮೇಲೆ ಆಕ್ರಮಣ ನಡೆಸಿ ಆತನಿಗೆ ಬೆಂಕಿ ಹಚ್ಚಿ ಕೊಂದಿರುವ ದೃಶ್ಯಗಳನ್ನು ದುಷ್ಕರ್ಮಿಗಳು ಚಿತ್ರೀಕರಿಸಿ ವೈರಲ್ ಮಾಡಿದ್ದಾರೆ. ಈ ಹೀನ ಕೃತ್ಯದ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಭುನಾಥ್ ರಾಯ್‍ಗರ್ ಎಂಬ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ. ಘಟನೆ ಬಗ್ಗೆ ತನಿಖೆ ನಡೆಸುವ ಹೊಣೆಯನ್ನು ರಾಜಸ್ತಾನ ಸರ್ಕಾರ ವಿಶೇಷ ತನಿಖಾ ತಂಡಕ್ಕೆ (ಎಸ್‍ಐಟಿ) ವಹಿಸಿದೆ.  ಸ್ಥಳೀಯ ಯುವತಿಯನ್ನು ಲವ್ ಜಿಹಾದ್ ಬಲೆಗೆ ಕೆಡವಿಕೊಂಡಿದ್ದಾನೆ ಎಂಬ ಆರೋಪದ ಮೇಲೆ ಶಂಭುನಾಥ್ ಮತ್ತಿತರರು ಮಹಮದ್ ಭಟ್ಟಾ ಶೇಖ್ ಎಂಬ ಯುವಕನನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ನಂತರ ಸೀಮೆಎಣ್ಣೆ ಸುರಿತು ಬೆಂಕಿ ಹಚ್ಚಿ ಸಜೀವ ದಹನ ಮಾಡಿದರು ಎನ್ನಲಾಗಿದೆ. ನಂತರ ದೃಶ್ಯಗಳನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಬಿಟ್ಟಿದ್ದಾರೆ.

ಈ ಭೀಕರ ಕೃತ್ಯ ಎಸಗಿದ ನಂತರ ದುಷ್ಕರ್ಮಿಗಳು ಲವ್ ಜಿಹಾದ್‍ನಲ್ಲಿ ತೊಡಗುವವರಿಗೆ ಇದೇ ಗತಿ ಆಗುತ್ತದೆ ಎಂದು ವೀಡಿಯೋದಲ್ಲಿ ಎಚ್ಚರಿಕೆ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ರಸ್ತೆ ಬದಿಯಲ್ಲಿ ಮಹಮದ್‍ನ ಅರೆಬೆಂದ ಶವ ಪತ್ತೆಯಾಗಿದೆ ಎಂದು ಪೊಲೀಸ್ ಉನ್ನತಾಧಿಕಾರಿಗಳು ತಿಳಿಸಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಕುಮಾರ್, ಎಎಸ್‍ಪಿ ಮಾನಿಷ್ ತ್ರಿಪಾಠಿ, ಮತ್ತು ಡಿಎಸ್‍ಪಿ ರಾಜೇಂದ್ರ ಸಿಂಗ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರನ್ನೂ ಸ್ಥಳಕ್ಕೆ ಕರೆಸಿ ತಪಾಸಣೆ ನಡೆಸಲಾಗಿದೆ. ಈ ಕಗ್ಗೊಲೆ ನಂತರ ಕೋಮು ಗಲಭೆ ಭುಗಿಲೆಳುವ ಆತಂಕವಿದ್ದು, ರಾಜ್ಯದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.

Facebook Comments

Sri Raghav

Admin