2000 ಕೋಟಿ ಮೌಲ್ಯದ ಭೂಮಿ ಜಿಲ್ಲಾಡಳಿತದ ವಶಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.7- ಚಮನ್‍ಲಾಲ್ ಸೇವಾ ಟ್ರಸ್ಟ್ ವಶದಲ್ಲಿದ್ದ ಬರೋಬ್ಬರಿ 2000 ಕೋಟಿ ಮೌಲ್ಯದ 354 ಎಕರೆ ಜಮೀನನ್ನು ನಗರ ಜಿಲ್ಲಾಡಳಿತ ಇಂದು ವಶಕ್ಕೆ ಪಡೆದುಕೊಂಡಿತು. ಮಾಗಡಿ ರಸ್ತೆಯ ಸುಂಕದಕಟ್ಟೆ ಸಮೀಪ ಶ್ರೀಗಂಧ ಕಾವಲ್, ಹೇರೋಹಳ್ಳಿ, ಗಿಡದಕೋನೇನಹಳ್ಳಿ ಗ್ರಾಮ ಗಳಲ್ಲಿ 354 ಎಕರೆ ಜಮೀನನ್ನು ಜಿಲ್ಲಾಧಿಕಾರಿ ವಿ.ಶಂಕರ್ ನೇತೃತ್ವದಲ್ಲಿಂದು ವಶಕ್ಕೆ ಪಡೆಯಲಾಯಿತು. ಈ ವೇಳೆ ಸುದ್ದಿಗಾರರೊಂದಿಗೆ ವಿ.ಶಂಕರ್ ಮಾತನಾಡಿ, ಕಾನೂನು ಪ್ರಕಾರ, ಚಮನ್‍ಲಾಲ್ ಸೇವಾ ಟ್ರಸ್ಟ್ ವಶದಲ್ಲಿದ್ದ 354 ಎಕರೆ ಭೂಮಿಯನ್ನು ವಶಪಡಿಸಿಕೊಂಡಿದ್ದೇವೆ. ಇದರಲ್ಲಿ ಒತ್ತುವರಿ ಮಾಡಿದ್ದ 39 ಎಕರೆಯಲ್ಲಿ ಮನೆಗಳು ನಿರ್ಮಾಣವಾಗಿವೆ. ಆದರೆ, ಅವುಗಳನ್ನು ನಾವು ತೆರವು ಮಾಡುವುದಿಲ್ಲ. ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಒತ್ತುವರಿ ಜಾಗದಲ್ಲಿ ಎರಡು ದೇವಸ್ಥಾನಗಳಿವೆ. ಈ ದೇವಾಲಯಗಳನ್ನು ಮುಜರಾಯಿ ಇಲಾಖೆ ವಶಕ್ಕೆ ಪಡೆದು ಅಭಿವೃದ್ಧಿಪಡಿಸುತ್ತೇವೆ ಎಂದು ಹೇಳಿದರು. ಇದೇ ರೀತಿ 36 ಎಕರೆ ಬಿ ಕರಾಬು ಜಮೀನನ್ನು ಸಾರ್ವಜನಿಕ ಉಪಯೋಗಕ್ಕೆ ಬಳಸಿಕೊಳ್ಳಲಾಗುವುದು ಎಂದರು. ಹಾಗೆಯೇ 16 ಎಕರೆ ಎ ಕರಾಬು ಜಮೀನಿದ್ದು, ಈ ಜಮೀನು ಬಳಕೆ ಕುರಿತು ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ವಿವರಿಸಿದರು.

ಏನಿದು ವಿವಾದ:

ಚಮನ್‍ಲಾಲ್ ಬಜಾಜ್ ಸೇವಾ ಟ್ರಸ್ಟ್ ಕರ್ನಾಟಕ ಭೂ ಸುಧಾರಣಾ ಕಾಯ್ದೆಯಲ್ಲಿ ನಿಗದಿಪಡಿಸಿದ್ದಕ್ಕಿಂತ ಹೆಚ್ಚುವರಿ ಭೂಮಿ ಹೊಂದಿತ್ತು. ಉಪವಿಭಾಗಾಧಿಕಾರಿ ಎಂ.ಕೆ.ಜಗದೀಶ್ ಅಧ್ಯಕ್ಷತೆಯಲ್ಲಿ ನಿನ್ನೆ ನಡೆದ ಭೂ ನ್ಯಾಯಮಂಡಳಿ ಸಭೆಯಲ್ಲಿ ಸಂಸ್ಥೆಯ ವಶದಲ್ಲಿದ್ದ 354 ಎಕರೆ ಜಮೀನು ವಶಪಡಿಸಿಕೊಳ್ಳಲು ತೀರ್ಮಾನಿಸಲಾಗಿತ್ತು. ಸಂಸ್ಥೆ ಹೆಚ್ಚುವರಿ ಭೂಮಿ ಹೊಂದಿದೆ. ಅದನ್ನು ಸರ್ಕಾರಕ್ಕೆ ಬಿಟ್ಟುಕೊಡಬೇಕೆಂದು ಭೂ ನ್ಯಾಯ ಮಂಡಳಿ ಆದೇಶ ನೀಡಿತ್ತು. ಈ ಆದೇಶವನ್ನು ಸಂಸ್ಥೆ ಹೈಕೋರ್ಟ್‍ನಲ್ಲಿ ಪ್ರಶ್ನೆ ಮಾಡಿತ್ತು. ವಾದ-ವಿವಾದ ಆಲಿಸಿದ ಹೈಕೋರ್ಟ್ ಕಳೆದ 2014 ಮಾರ್ಚ್ 3ರಂದು ಭೂ ನ್ಯಾಯಮಂಡಳಿಯಲ್ಲೇ ಪ್ರಕರಣ ಇತ್ಯರ್ಥಪಡಿಸಿಕೊಳ್ಳುವಂತೆ ಆದೇಶ ಹೊರಡಿಸಿತ್ತು.

ಹೈಕೋರ್ಟ್ ಆದೇಶದ ಮೇರೆಗೆ ನಿನ್ನೆ ಉಪವಿಭಾಗಾಧಿಕಾರಿಗಳು ಭೂ ನ್ಯಾಯಮಂಡಳಿ ಸಭೆಯಲ್ಲಿ ಭೂಮಿ ವಶಪಡಿಸಿಕೊಳ್ಳುವಂತೆ ಆದೇಶ ನೀಡಿದ್ದರು. ಈ ಆದೇಶದ ಮೇರೆಗೆ ಇಂದು ಜಿಲ್ಲಾಧಿಕಾರಿ ವಿ. ಶಂಕರ್ ಅಧಿಕಾರಿಗಳು ಹಾಗೂ ಪೊಲೀಸರ ಸಹಕಾರದೊಂದಿಗೆ 354 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Facebook Comments

Sri Raghav

Admin