ಆರ್‍ಟಿಇ ಅನುದಾನ ಸ್ಥಗಿತ..? ಖಾಸಗಿ ಶಾಲೆಗಳಿಗೆ ಸರ್ಕಾರದಿಂದ ಶಾಕ್..!

RTE--02

ಬೆಂಗಳೂರು,ಡಿ.8-ಮೂಲಭೂತ ಸೌಕರ್ಯಗಳಿಲ್ಲದೆ ಸರ್ಕಾರಿ ಶಾಲೆಗಳು ಶಾಶ್ವತ ಬಂದ್ ಆಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇನ್ನು ಮುಂದೆ ಖಾಸಗಿ ಶಾಲೆಗಳಿಗೆ ಶಿಕ್ಷಣ ಹಕ್ಕು ಕಾಯ್ದೆ(ಆರ್‍ಟಿಇ)ಅಡಿ ನೀಡುತ್ತಿದ್ದ ಆರ್ಥಿಕ ನೆರವನ್ನು ಪ್ರಸಕ್ತ ವರ್ಷದಿಂದಲೇ ಸ್ಥಗಿತಗೊಳಿಸುವ ಮಹತ್ವದ ತೀರ್ಮಾನ ಕೈಗೊಂಡಿದೆ. ಇದಕ್ಕಾಗಿ 2009ರ ಆರ್‍ಟಿಇ ಕಾಯ್ದೆಗೆ ಮುಂದಿನ ಅಧಿವೇಶನದಲ್ಲಿ ತಿದ್ದುಪಡಿ ಮಾಡಿ ವಿಧಾನಮಂಡಲದ ಉಭಯ ಸದನಗಳಲ್ಲಿ ಹೊಸ ಕಾಯ್ದೆಯನ್ನು ಮಂಡಿಸುವ ತೀರ್ಮಾನವನ್ನು ತೆಗೆದುಕೊಂಡಿದೆ.

ಆರ್‍ಟಿಇ ಕಾಯ್ದೆಯಡಿ ಖಾಸಗಿ ಶಾಲೆಗಳಲ್ಲಿ ಬಡತನ ರೇಖೆಗಿಂತ ಕೆಳಗಿರುವ(ಬಿಪಿಎಲ್) ಕುಟುಂಬಗಳಿಗೆ ಶೇ. 25ರಷ್ಟು ಸೀಟು ನೀಡಬೇಕೆಂಬ ನಿಯಮವಿದೆ. ಈ ಪ್ರಕಾರ ರಾಜ್ಯಾದ್ಯಂತ ಒಟ್ಟು 11,918 ಖಾಸಗಿ ಅನುದಾನ ಶಾಲೆಗಳಲ್ಲಿ 5,22,000 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಾರೆ. ಇದಕ್ಕಾಗಿ ರಾಜ್ಯ ಸರ್ಕಾರ ಪ್ರತಿ ವಿದ್ಯಾರ್ಥಿಗೆ ಒಂದು ವರ್ಷಕ್ಕೆ 16 ಸಾವಿರ ಹಣವನ್ನು ಖಾಸಗಿ ಶಾಲೆಗಳಿಗೆ ಮರು ಪಾವತಿಸಬೇಕು. ಇದರಿಂದ ವಾರ್ಷಿಕವಾಗಿ ಸರ್ಕಾರದ ಬೊಕ್ಕಸಕ್ಕೆ 850ರಿಂದ 900 ಕೋಟಿ ವೆಚ್ಚ ತಗಲುತ್ತದೆ.

ಇದೀಗ ಇಷ್ಟು ದೊಡ್ಡ ಮೊತ್ತದ ಹಣವನ್ನು ಖಾಸಗಿ ಶಾಲೆಗಳಿಗೆ ನೀಡುವ ಬದಲು ಸರ್ಕಾರಿ ಶಾಲೆಗಳಿಗೆ ಆರ್ಥಿಕ ನೆರವು ನೀಡಿ ಉತ್ತಮ ಮೂಲಭೂತ ಸೌಕರ್ಯ ಕಲ್ಪಿಸಿ ಮೇಲ್ದರ್ಜೆಗೇರಿಸುವುದು ಸರ್ಕಾರದ ಉದ್ದೇಶವಾಗಿದೆ.  ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಸಾವಿರಾರು ಶಾಲೆಗಳು ಮೂಲಭೂತ ಸೌಕರ್ಯಗಳಿಲ್ಲದೆ ಬೀಗ ಹಾಕಿವೆ. ಶಾಲಾ ಕೊಠಡಿ, ಶಿಕ್ಷಕರ ಕೊರತೆ, ಆಟದ ಮೈದಾನ, ಪ್ರತ್ಯೇಕ ಶೌಚಾಲಯ, ಕಪ್ಪು ಹಲಗೆಯ ಕೊರತೆ ಸೇರಿದಂತೆ ಅನೇಕ ಸಮಸ್ಯೆಗಳಿಂದ ಶಾಲೆಗಳು ಬಂದ್ ಆಗಿವೆ. ಕೆಲವು ಕಡೆ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ತೊಂದರೆಯಾಗಬಾರದೆಂಬ ಕಾರಣಕ್ಕಾಗಿ ಪಕ್ಕದ ಊರಿನಲ್ಲಿರುವ ಶಾಲೆಗಳಲ್ಲಿ ವೀಲಿನ ಮಾಡಲಾಗಿದೆ.

ತೀವ್ರ ಆಕ್ಷೇಪ:

ಖಾಸಗಿ ಶಾಲೆಗಳಿಗೆ ಸರ್ಕಾರ ಪ್ರತಿ ವರ್ಷ 850ರಿಂದ 900 ಕೋಟಿ ಹಣವನ್ನು ಖರ್ಚು ಮಾಡುತ್ತಿರುವುದಕ್ಕೆ ಶಿಕ್ಷಣ ತಜ್ಞರು, ಸಾಹಿತಿಗಳು, ಕನ್ನಡ ಪ್ರೇಮಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಖಾಸಗಿ ಶಾಲೆಗಳಿಗೆ ಹಣ ನೀಡುವ ಬದಲು ಇದೇ ಹಣದಲ್ಲಿ ಸರ್ಕಾರಿ ಶಾಲೆಗಳಿಗೆ ಉತ್ತಮ ಮೂಲಭೂತ ಸೌಕರ್ಯ ಕಲ್ಪಿಸಿದರೆ ಖಾಸಗಿ ಶಾಲೆಗಳಿಗೆ ಪೈಪೋಟಿ  ನೀಡಬಹುದು ಎಂದು ಸರ್ಕಾರದ ಗಮನಕ್ಕೆ ತಂದಿದ್ದರು.

ಇದನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಅನುದಾನ ಸ್ಥಗಿತಗೊಳಿಸುವ ಸಂಬಂಧ ಚರ್ಚೆ ನಡೆಸಿದ್ದಾರೆ. ಹಾಲಿ ಇರುವ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕೆ ಒತ್ತು ನೀಡಿದ್ದಾರೆ. ಈ ಹಿಂದೆ 2009ರಲ್ಲಿ ಅಂದಿನ ಯುಪಿಎ ಸರ್ಕಾರ ದೇಶದ ಪ್ರತಿ ಮಗುವಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡುವ ಸದುದ್ದೇಶದಿಂದ ಶಿಕ್ಷಣ ಹಕ್ಕು ಕಾಯ್ದೆ ಜಾರಿ ಮಾಡಿತ್ತು.  ಈ ಕಾಯ್ದೆ ಪ್ರಕಾರ ಖಾಸಗಿ ಶಾಲೆಗಳು ಒಟ್ಟು ಸಂಖ್ಯೆಯ ಶೇ.25ರಷ್ಟು ಸೀಟುಗಳನ್ನು ಬಡ ಮಕ್ಕಳಿಗೆ ಮೀಸಲಿಡಬೇಕಿತ್ತು. ಕೇಂದ್ರ ಸರ್ಕಾರದ ಈ ಕಾಯ್ದೆಯನ್ನು ಸುಪ್ರೀಂಕೋರ್ಟ್ ಕೂಡ ಎತ್ತಿ ಹಿಡಿದಿತ್ತು.

Facebook Comments

Sri Raghav

Admin