ಗುಜರಾತ್’ನಲ್ಲಿ ನಾಳೆ ಮೊದಲ ಹಂತದ ಮತದಾನ, ಸಿಎಂ ಸೇರಿ 977 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

ಈ ಸುದ್ದಿಯನ್ನು ಶೇರ್ ಮಾಡಿ

Gujarat--01

ಅಹಮದಾಬಾದ್, ಡಿ.8-ಇಡೀ ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಗುಜರಾತ್ ವಿಧಾನಸಭಾ ಮೊದಲ ಹಂತದ ಚುನಾವಣೆಗೆ ನಾಳೆ 89 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ.  ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್ ಪ್ರಾಂತ್ಯಗಳಲ್ಲಿ ನಡೆಯಲಿರುವ ಹೈವೋಲ್ಟೇಜ್ ಚುನಾವಣೆಯಲ್ಲಿ ಒಟ್ಟು ಮುಖ್ಯಮಂತ್ರಿ ವಿಜಯ್‍ಭಾಯ್ ರೂಪಾನಿ ಸೇರಿದಂತೆ 977 ಅಭ್ಯರ್ಥಿಗಳ ಹಣೆಬರಹ ನಿರ್ಧಾರವಾಗಲಿದೆ. ಅಖಾಡಕ್ಕೆ ಇಳಿದಿರುವವರಲ್ಲಿ 57 ಮಹಿಳೆಯರೂ ಇದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷರಾಗಲಿರುವ ರಾಹುಲ್‍ಗಾಂಧಿ ಅವರಿಗೆ ಪ್ರತಿಷ್ಠೆಯ ಕಣವಾಗಿರುವ ಈ ಚುನಾವಣೆಗಾಗಿ ಕೊನೆ ಹಂತದ ಸಿದ್ಧತೆ ಕಾರ್ಯಗಳು ಭರದಿಂದ ನಡೆದಿವೆ.  ಒಟ್ಟು 182 ಸದಸ್ಯ ಬಲದ ಗುಜರಾತ್ ವಿಧಾನಸಭೆಯ 89 ಕ್ಷೇತ್ರಗಳಲ್ಲಿ ನಾಳೆ ಬೆಳಗ್ಗೆ 8 ರಿಂದ ಸಂಜೆ 5ರವರೆಗೆ ನಡೆಯುವ ಚುನಾವಣೆಯಲ್ಲಿ ಸುಗಮ ಮತ್ತು ಶಾಂತಿಯುತ ಮತದಾನಕ್ಕಾಗಿ ಬಿಗಿ ಭದ್ರತೆ ಮಾಡಲಾಗಿದೆ. ಬಿಜೆಪಿ ಎಲ್ಲ 89 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೆ, ಕಾಂಗ್ರೆಸ್ 87 ಸ್ಥಾನಗಳಲ್ಲಿ ಕಣಕ್ಕಿಳಿದಿದೆ. ಬಹುಜನ ಸಮಾಜ ಪಕ್ಷ 64 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಅಖಾಡಕ್ಕೆ ಇಳಿಸಿದೆ.

24,689 ಮತಕೇಂದ್ರಗಳಲ್ಲಿ ಮತದಾನ ನಡೆಯಲಿದ್ದು, 27,158 ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಗುತ್ತಿದೆ.  ನಾಳೆ ನಡೆಯಲಿರುವ ಚುನಾವಣೆಯಲ್ಲಿ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ರಾಜ್‍ಕೋಟ್(ಪಶ್ಚಿಮ) ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದು, ಇವರಿಗೆ ಕಾಂಗ್ರೆಸ್‍ನ ಇಂದ್ರನಿಲ್ ರಾಜ್ಯಗುರು ಪ್ರಬಲ ಪ್ರತಿಸ್ಪರ್ಧಿಯಾಗಿದ್ದಾರೆ.   ರಾಜಪೂತ್ ಪ್ರಭಾವಿ ನಾಯಕ ಶಕ್ತಿಸಿಂಗ್ ಗೋಹಿಲ್(ಮಾಂಡ್ವಿ), ಕಾಂಗ್ರೆಸ್ ಮುಖಂಡ ಪರೇಶ್ ಧನಾವಿ(ಅಮೇಲ್ರಿ) ಮೊದಲಾದ ಪ್ರಮುಖರ ಹಣೆಬರಹ ನಾಳೆ ನಿರ್ಧಾರವಾಗಲಿದೆ.

ಪ್ರಥಮ ಹಂತದ ಚುನಾವಣೆಯಲ್ಲಿ 2,12,31,652 ಮಂದಿ ಮತದಾನದ ಹಕ್ಕು ಪಡೆದಿದ್ದಾರೆ. ಇವರಲ್ಲಿ 1,11,05,033 ಪುರುಷರು ಮತ್ತು 1,01,25,472 ಮಂದಿ ಮಹಿಳಾ ಮತದಾರರಿದ್ದಾರೆ. ಪ್ರಥಮ ಹಂತಕ್ಕಾಗಿ ಮೋದಿ ಮತ್ತು ರಾಹುಲ್ ಅವರುಗಳು ಪೈಪೋಟಿ ಗೆ ಬಿದ್ದವರಂತೆ ಬಿರುಸಿನ ಚುನಾವಣಾ ಪ್ರಚಾರಗಳನ್ನು ನಡೆಸಿದ್ದರು. ಪ್ರಧಾನಿ 14 ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿ ಕಾಂಗ್ರೆಸ್ ಪಕ್ಷವನ್ನು ಮತ್ತು ರಾಹುಲ್‍ರನ್ನು ತರಾಟೆಗೆ ತೆಗೆದುಕೊಂಡಿದ್ದರೆ, ಕಾಂಗ್ರೆಸ್ ಮುಖ್ಯಸ್ಥರಾಗಲಿರುವ ರಾಹುಲ್ ಮೋದಿ ಅಭಿವೃದ್ದಿ ಕಾರ್ಯಗಳಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿ ವಾಗ್ದಾಳಿ ನಡೆಸಿದ್ದರು.

ನೋಟು ಅಮಾನ್ಯೀಕರಣ ಮತ್ತು ಜಿಎಸ್‍ಟಿಗಳ ನಕರಾತ್ಮಕ ಅಂಶಗಳು ಈ ಚುನಾವಣೆಯಲ್ಲಿ ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದರೆ, ಕಮಲದ ಭದ್ರ ಕೋಟೆಯನ್ನು ಧ್ವಂಸಗೊಳಿಸಿ ಕೈ ಅಧಿಪತ್ಯ ಸ್ಥಾಪಿಸಬೇಕೆಂಬುದು ಕಾಂಗ್ರೆಸ್‍ನ ಹೆಗ್ಗುರಿಯಾಗಿದೆ. ರಾಜಕೀಯ ಕುರುಕ್ಷೇತ್ರ ಎನಿಸಿರುವ ಈ ಚುನಾವಣೆ ಕದನ ಕೌತುಕ ಕೆರಳಿಸಿದೆ.   ಡಿ.14ರಂದು ಎರಡನೇ ಹಂತದ ಚುನಾವಣೆ ನಡೆಯಲಿದ್ದು, ಡಿ.18ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

Facebook Comments

Sri Raghav

Admin