ಟ್ರ್ಯಾಕ್ಟರ್ ಗೆ ಹಿಂದಿನಿಂದ ಕಾರು ಡಿಕ್ಕಿ : ಸ್ಥಳದಲ್ಲೇ ಮೂವರ ದುರ್ಮರಣ
ಕೋಲಾರ, ಡಿ.8- ಮುಂದೆ ಹೋಗುತ್ತಿದ್ದ ಟ್ರ್ಯಾಕ್ಟರ್ ಟ್ರ್ಯಾಲಿಗೆ ಹಿಂದಿನಿಂದ ಅತಿ ವೇಗವಾಗಿ ಮುನ್ನುಗ್ಗಿದ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತರನ್ನು ಮುಳಬಾಗಿಲು ತಾಲೂಕಿನ ಹುಸನಹಳ್ಳಿ ಗ್ರಾಮದ ಸುರೇಶ್, ಆದಿನಾರಾಯಣ, ಕುಮಾರ್ ಎಂದು ಗುರುತಿಸಲಾಗಿದೆ.
ತಡರಾತ್ರಿ ರಾಷ್ಟ್ರೀಯ ಹೆದ್ದಾರಿ-75ರ ಕೋಲಾರ ತಾಲೂಕಿನ ತಂಬಿಹಳ್ಳಿ ಗೇಟ್ ಬಳಿ ಮುಳಬಾಗಿಲು ಕಡೆಯಿಂದ ಕೋಲಾರದ ಕಡೆಗೆ ಮರಳು ತುಂಬಿಕೊಂಡು ಟ್ರ್ಯಾಕ್ಟರ್ ತೆರಳುತ್ತಿತ್ತು. ಟ್ರ್ಯಾಕ್ಟರ್ಗೆ ಹಿಂಬದಿ ಟ್ರ್ಯಾಲಿ ಅಳವಡಿಸಲಾಗಿತ್ತು. ಹಿಂದಿನಿಂದ ಬರುತ್ತಿದ್ದ ಕಾರಿನ ಚಾಲಕನಿಗೆ ಟ್ರ್ಯಾಲಿ ಇರುವುದು ಗಮನಕ್ಕೆ ಬಂದಿಲ್ಲ. ಪರಿಣಾಮವಾಗಿ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ.
ಸುದ್ದಿ ತಿಳಿದ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಕಾರಿನೊಳಗೆ ಸಿಕ್ಕಿಕೊಂಡಿದ್ದ ಮೂವರ ಮೃತ ದೇಹಗಳನ್ನು ಹೊರತೆಗೆದು ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಅಪಘಾತದಿಂದಾಗಿ ಮುಂಜಾನೆ ಈ ಮಾರ್ಗದಲ್ಲಿ ಸಂಚಾರದಲ್ಲಿ ಕೆಲಕಾಲ ಅಸ್ತವ್ಯಸ್ತವಾಗಿತ್ತು. ಸಂಚಾರಿ ಪೊಲೀಸರು ವಾಹನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಅಪಘಾತದ ರಭಸಕ್ಕೆ ಕಾರು ಟ್ರ್ಯಾಕ್ಟರ್ನ ಟ್ರ್ಯಾಲಿಗೆ ಸಿಕ್ಕಿಕೊಂಡು ಸಂಪೂರ್ಣ ಜಖಂಗೊಂಡಿದೆ. ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.