ಪ್ರಭಾವಿ ಮಹಿಳೆಯರಿಂದ ಹಫ್ತಾ ವಸೂಲಿಗೆ ಸಕ್ರಿಯವಾಗಿದೆ ದಾವೂದ್‍ನ ಲೇಡಿಸ್ ಗ್ಯಾಂಗ್..!

ಈ ಸುದ್ದಿಯನ್ನು ಶೇರ್ ಮಾಡಿ

Dawood-Ibarhim

ಮುಂಬೈ/ಕರಾಚಿ, ಡಿ.8-ಕುಖ್ಯಾತ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಡಿ-ಕಂಪನಿಯ ಅಕ್ರಮ-ಅವ್ಯವಹಾರಗಳು ಬೆಚ್ಚಿ ಬೀಳಿಸುತ್ತಿರುವಾಗಲೇ, ಚಿತ್ರತಾರೆಯರೂ ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರಭಾವಿ ಮಹಿಳೆಯರನ್ನು ಗುರಿಯಾಗಿಟ್ಟುಕೊಂಡು ಅವರಿಂದ ಹಣ ವಸೂಲಿ ಮಾಡುವ ಲೇಡಿಸ್ ಗ್ಯಾಂಗ್‍ನನ್ನು ಕುಪ್ರಸಿದ್ಧ ಭಯೋತ್ಪಾದಕ ಹೊಂದಿದ್ದಾನೆಂಬ ಆತಂಕಕಾರಿ ಸಂಗತಿಯೂ ಬೆಳಕಿಗೆ ಬಂದಿದೆ. ಡಿ-ಕಂಪನಿ ಈಗ ಪ್ರಭಾವಿ ವನಿತೆಯರನ್ನು ಗುರಿಯಾಗಿಟ್ಟುಕೊಂಡು ಹಫ್ತಾ ವಸೂಲಿ (ಸುಲಿಗೆ) ಮಾಡಲು ಮಹಿಳೆಯರ ಘಟಕವೊಂದನ್ನು ಬಳಸುತ್ತಿದೆ ಎಂಬ ಸಂಗತಿಯನ್ನು ಭದ್ರತಾ ಪಡೆಗಳು ದೂರವಾಣಿ ಕರೆಗಳ ಜಾಡನ್ನು ಹಿಡಿದು ಪತ್ತೆ ಮಾಡಿದೆ.

ತಮ್ಮ ಭೂಗತ ಚಟುವಟಿಕೆಗಳು ಮತ್ತು ಕುಕೃತ್ಯಗಳಲ್ಲಿ ಮಹಿಳೆಯರು ಮತ್ತು ಕುಟುಂಬ ಒಳಪಡಬಾರದೆಂಬ ಅಲಿಖಿತ ನಿಯಮವನ್ನು ಬಹುತೇಕ ಅಂಡರ್‍ವಲ್ಡ್ ಡಾನ್‍ಗಳು ಅನುಸರಿಸುತ್ತಾರೆ. ಆದರೆ ಮುಂಬೈ ಸರಣಿ ಸ್ಫೋಟದ ಸೂತ್ರಧಾರ ದಾವೂದ್ ಈಗ ತನ್ನ ಕರಾಳ ಕೃತ್ಯಗಳಿಗೆ ಮಹಿಳೆಯರನ್ನು ನಿಯೋಜಿಸುತ್ತಿರುವುದು ಹೊಸ ಬೆಳವಣಿಗೆಯಾಗಿದೆ.

ಉನ್ನತ ಮೂಲಗಳ ಪ್ರಕಾರ ದಾವೂದ್ ಇಬ್ರಾಹಿಂನ ಡಿ-ಕಂಪನಿ ಲೇಡಿಸ್ ವಿಂಗ್‍ನನ್ನು ರಚಿಸಿದ್ದು, ಮಹಿಳೆಯಿಂದ ಹಣ ವಸೂಲಿ ಮಾಡಲು ಮತ್ತು ಅವರ ರಹಸ್ಯ ಮಾಹಿತಿಗಳನ್ನು ಕಲೆ ಹಾಕಲು ಚಾಣಾಕ್ಷತನ ಹೊಂದಿರುವ ಆದರೆ ಅಷ್ಟೇ ಅಪಾಯಕಾರಿ ಗ್ಯಾಂಗ್‍ನನ್ನು ನಿಯೋಜಿಸಲಿದೆ ಎಂಬ ಸಂಗತಿ ಬಹಿರಂಗಗೊಂಡಿದೆ. ಡಿ-ಕಂಪನಿಯ ಚಲನವಲನಗಳು ಮತ್ತು ದೂರವಾಣಿ ಕರೆಗಳ ಮೇಲೆ ಕಣ್ಣಿಟ್ಟಿರುವ ತನಿಖಾ ಸಂಸ್ಥೆಗಳು ಇತ್ತೀಚೆಗೆ ಫೋನ್ ಕಾಲ್‍ನ ಜಾಡು ಹಿಡಿದಾಗ ಬೆಚ್ಚಿ ಬೀಳಿಸುವ ಸಂಗತಿಯೊಂದು ಪತ್ತೆಯಾಯಿತು. ದಾವೂದ್‍ನ ಕುಖ್ಯಾತ ಗ್ಯಾಂಗ್‍ನ ವಿಶೇಷ ಲೇಡಿಸ್ ಘಟಕವನ್ನು ಕೆಲವು ಪ್ರಭಾವಿ ಮಹಿಳೆಯರಿಂದ ಅಗಾಗ ಹಫ್ತಾ ಹಣ ವಸೂಲಿ ಮಾಡಲು ನಿಯೋಜಿಸಿರುವುದು ಕಂಡುಬಂದಿದೆ.

ಈ ಕುಖ್ಯಾತ ಲೇಡಿಸ್ ಗ್ಯಾಂಗ್ ದಾವೂದ್ ಜೊತೆ ನಿರಂತರ ಸಂಪರ್ಕದಲ್ಲಿದ್ದು, ತಮಗೆ ನಿಯೋಜಿಸಿರುವ ಕಾರ್ಯಗಳು ಹಾಗೂ ವಿಶೇಷ ಕಾರ್ಯಾಚರಣೆಗಳ ಬಗ್ಗೆ ಅಪ್-ಡೇಟ್ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿದೆ. ಅಲ್ಲದೇ ತಮ್ಮ ಕಾರ್ಯವನ್ನು ಯಶಸ್ವಿಯಾಗಿ ಪೂರೈಸಿ ಮುಂದಿನ ಕೃತ್ಯ ಎಸಗಲು ಆದೇಶ ಪಡೆಯುತ್ತಿವೆ ಎಂಬ ಸಂಗತಿಗಳೂ ಬೆಳಕಿಗೆ ಬಂದಿವೆ.

ದಾವೂದ್ ಬಲಗೈ ಬಂಟ ಛೋಟಾ ಶಕೀಲ್‍ಗೆ ಲೇಡಿಸ್ ಗ್ಯಾಂಗ್‍ನನ್ನು ನಿರ್ವಹಣೆ ಮಾಡುವ ಹಾಗೂ ಅವರಿಗೆ ಇಂತಿಂಥ ಕಾರ್ಯಗಳನ್ನು ನಿಯೋಜಿಸುವ ಹೊಣೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಛೋಟಾ ಶಕೀಲ್ ತನ್ನ ಆಪ್ತ ಸಹಚರ ಉಸ್ತಾನ್ ಎಂಬಾತನ ಮೂಲಕ ಲೇಡಿಸ್ ವಿಂಗ್‍ನನ್ನು ನಿಭಾಯಿಸುತ್ತಿದ್ದಾನೆ.
ಈ ಸಂಗತಿ ಆಘಾತಕಾರಿಯಾದುದು. ಪೊಲೀಸ್ ಇಲಾಖೆಯಲ್ಲಿ ಇಷ್ಟು ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿರುವ ನನಗೆ ಮಹಿಳಾ ಗ್ಯಾಂಗ್‍ಗಳನ್ನು ಇಂಥ ಕೃತ್ಯಕ್ಕೆ ಬಳಸಿದ ಪ್ರಕರಣವನ್ನು ಕಂಡು, ಕೇಳಿಲ್ಲ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಪಿ.ಕೆ ಜೈನ್ ಆತಂಕ ವ್ಯಕ್ತಪಡಿಸಿದ್ಧಾರೆ.

ಡಿ-ಕಂಪನಿ ಕುಖ್ಯಾತ ಲೇಡಿಸ್ ಗ್ಯಾಂಗ್ ಹೊಂದಿರುವುದನ್ನು ಸಾಬೀತು ಮಾಡುವಂಥ ಪ್ರಕರಣಗಳೂ ವರದಿಯಾಗುತ್ತಿವೆ. ಮಹಿಳೆಯೊಬ್ಬರು ತೀರಾ ಇತ್ತೀಚೆಗೆ ಪಶ್ಚಿಮ ಮುಂಬೈನ ಖಾರ್ ಪೊಲೀಸ್ ಠಾಣೆಗೆ ದೂರು ನೀಡಿ ಪಾಕಿಸ್ತಾನದಿಂದ ತಮಗೆ ದೂರವಾಣಿ ಕರೆ ಮಾಡಿ 1 ಕೋಟಿ ರೂ. ನೀಡುವಂತೆ ಪ್ರಾಣ ಬೆದರಿಕೆ ಹಾಕಲಾಗಿದೆ ಎಂದು ತಿಳಿಸಿದ್ದಾರೆ. ಅನೇಕ ಬಾರಿ ಕರೆ ಮಾಡಿ ಹಫ್ತಾ ನೀಡದಿದ್ದರೆ ಕೊಲ್ಲುವುದಾಗಿ ಹೆದರಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ತನ್ನ ಹಳೆ ಶೈಲಿಯ ಭೂಗತ ದಂಧೆಗಳನ್ನು ನಡೆಸುವುದರ ಬದಲು ಹೊಸ ವಿಧಾನದ ಅಕ್ರಮ-ಅವ್ಯವಹಾರ ಕೃತ್ಯಗಳನ್ನು ನಡೆಸಲು ಡಿ-ಕಂಪನಿ ಮುಂದಾಗಿರುವಾಗಲೇ ದಾವೂದ್‍ನ ಲೇಡಿಸ್ ಗ್ಯಾಂಗ್ ಸಂಗತಿ ಬಹಿರಂಗಗೊಂಡಿದೆ. ತನ್ನ ಕಾಳದಂಧೆ ನಡೆಸಲು ದಾವೂದ್ ಕರೆನ್ಸಿಗಳನ್ನು ಬಳಸುವ ಬದಲು ಬಿಟ್‍ಕಾಯಿನ್‍ಗಳ ವಹಿವಾಟಿಗೆ ಶಿಫ್ಟ್ ಆಗಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

Facebook Comments

Sri Raghav

Admin