ತುಮಕೂರಲ್ಲಿ ನಾಳೆ ಜೆಡಿಎಸ್ ಶಕ್ತಿ ಪ್ರದರ್ಶನ

ಈ ಸುದ್ದಿಯನ್ನು ಶೇರ್ ಮಾಡಿ

jds
ಬೆಂಗಳೂರು, ಡಿ.9- ಶಕ್ತಿ ಪ್ರದರ್ಶನಕ್ಕೆ ಮುಂದಾಗಿರುವ ಜೆಡಿಎಸ್ ನಾಳೆ ತುಮಕೂರಿನಲ್ಲಿ ಅಲ್ಪ ಸಂಖ್ಯಾತರ ಬೃಹತ್ ಸಮಾವೇಶ ಆಯೋಜಿಸಿದೆ.  ಬೆಳಗ್ಗೆ 11 ಗಂಟೆಗೆ ತುಮಕೂರಿನ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುವ ಸಮಾವೇಶಕ್ಕೆ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಚಾಲನೆ ನೀಡಲಿದ್ದಾರೆ. ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರುಕ್ ಅಬ್ದುಲ್ಲ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ. ಜೆಡಿಎಸ್ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್ ಆಲಿ ಮತ್ತಿತರ ಗಣ್ಯರು ಭಾಗವಹಿಸುತ್ತಿದ್ದು, ಒಂದು ಲಕ್ಷಕ್ಕೂ ಹೆಚ್ಚು ಮಂದಿ ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾಖಾನ್ ತಿಳಿಸಿದ್ದಾರೆ.

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ರಾಜ್ಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸಯ್ಯದ್ ಅಲ್ತಾಫ್, ಜೆಡಿಎಸ್ ನಾಯಕ ಫಾರೂಕ್, ಶಾಸಕರಾದ ಸುರೇಶ್‍ಬಾಬು, ಗುಬ್ಬಿ ಶ್ರೀನಿವಾಸ್, ಕೃಷ್ಣಪ್ಪ, ಮಧು ಬಂಗಾರಪ್ಪ, ಮಾಜಿ ಸಚಿವ ಬಂಡೆಪ್ಪ ಕಾಶಂಪೂರ್ ಸೇರಿದಂತೆ ಪ್ರಮುಖರು ಸಮಾವೇಶದಲ್ಲಿ ಉಪಸ್ಥಿತರಿರುವರು. ಈ ಬೃಹತ್ ಸಮಾವೇಶಕ್ಕಾಗಿ ಕಾಲೇಜು ಆವರಣದಲ್ಲಿ ದೊಡ್ಡ ವೇದಿಕೆ ಸಜ್ಜುಗೊಳಿಸಲಾಗಿದ್ದು, 60 ಸಾವಿರಕ್ಕೂ ಹೆಚ್ಚು ಆಸನಗಳ ವ್ಯವಸ್ಥೆ ಮಾಡಲಾಗಿದೆ. ಸಮಾವೇಶದ ಮೂಲಕ ಜನರನ್ನು ಸೆಳೆಯುವ ಕಾರ್ಯತಂತ್ರ ರೂಪಿಸಿರುವ ಜೆಡಿಎಸ್ ನಾಳಿನ ಸಮಾವೇಶದ ಮೂಲಕ ಅಲ್ಪಸಂಖ್ಯಾತರ ಮನಗೆಲ್ಲಲು ಮುಂದಾಗಿದೆ. ಇದರ ಬೆನ್ನಲ್ಲೆ ರಾಜ್ಯಾದ್ಯಂತ ಇನ್ನಿತರ ಸಮಾವೇಶ ಕೈಗೊಳ್ಳಲು ಉದ್ದೇಶಿಸಿದ್ದು, ಅದರಲ್ಲಿ ಪ್ರಮುಖವಾಗಿ ದಲಿತ ಸಮಾವೇಶ, ಮಂಗಳೂರಿನಲ್ಲಿ ಸೌಹಾರ್ದ ಸಮಾವೇಶ, ವಿಜಯಪುರದಲ್ಲಿ ಬೃಹತ್ ರೈತರ ಸಮಾವೇಶ ನಡೆಸಲು ಕಾರ್ಯಕ್ರಮ ರೂಪಿಸಿದೆ.

Facebook Comments