ಸದಾನಂದಗೌಡರು ನನ್ನ ಮಗನ ವಿರುದ್ಧ ಸ್ಪರ್ಧಿಸಲಿ : ಸಿದ್ದರಾಮಯ್ಯ ಸವಾಲ್

ಈ ಸುದ್ದಿಯನ್ನು ಶೇರ್ ಮಾಡಿ

Siddarmaiah--02

ಬೆಂಗಳೂರು, ಡಿ.10- ಕೇಂದ್ರ ಸಚಿವ ಸದಾನಂದಗೌಡರಿಗೆ ವರುಣ ಕ್ಷೇತ್ರದ ಬಗ್ಗೆ ಏನೇನೂ ಗೊತ್ತಿಲ್ಲ. ಅವರಿಗೆ ಉಸ್ತುವಾರಿ ಕೊಟ್ಟಾಕ್ಷಣ ಏನೂ ಬದಲಾವಣೆ ಯಾಗುವುದಿಲ್ಲ. ಬೇರೆಯವರನ್ನು ಆ ಕ್ಷೇತ್ರಕ್ಕೆ ನಿಲ್ಲಿಸಿ ಬಲಿ ಕೊಡುವುದಕ್ಕಿಂತ ಅವರೇ ಸ್ಪರ್ಧಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು.
ಸದಾನಂದಗೌಡರು ಮೈಸೂರು ಇನ್‍ಚಾರ್ಜ್ ತೆಗೆದುಕೊಂಡ ಮೇಲೆ ಯಾರಿಗೂ ಯಾವುದೇ ನಡುಕ ಉಂಟಾಗಿಲ್ಲ. ವರುಣ ಕ್ಷೇತ್ರದ ಬಗೆಗೆ ಅವರಿಗೆ ಏನೂ ಗೊತ್ತಿಲ್ಲ. ಕಳೆದ ಚುನಾವಣೆಯಲ್ಲಿ 32 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದೇನೆ. ಈ ಬಾರಿ ನನ್ನ ಮಗ ಆ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲುತ್ತಾನೆ. ನಾನು ಅಲ್ಲಿ ಸ್ಪರ್ಧಿಸುವುದಿಲ್ಲ ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ದಿ.ಎಸ್.ನಿಜಲಿಂಗಪ್ಪ ಅವರ 115ನೆ ಹುಟ್ಟುಹಬ್ಬದ ಅಂಗವಾಗಿ ವಿಧಾನಸೌಧದ ಮುಂದಿರುವ ಅವರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರುಣ ಕ್ಷೇತ್ರದ ಮೂಲವೇ ಬಿಜೆಪಿಯವರಿಗೆ ಗೊತ್ತಿಲ್ಲ.  ಸದಾನಂದಗೌಡರಿಗೆ ಉಸ್ತುವಾರಿ ಕೊಟ್ಟ ತಕ್ಷಣ ಜನ ಅಲ್ಲಿ ಬದಲಾಗುವುದಿಲ್ಲ. ಅವರಿವರನ್ನು ತಂದು ಚುನಾವಣೆಗೆ ನಿಲ್ಲಿಸುವುದಕ್ಕಿಂತ ಸದಾನಂದಗೌಡರೇ ಸ್ಪರ್ಧಿಸಲಿ ಎಂದು ಅವರು ಹೇಳಿದರು.
ಎಸ್.ನಿಜಲಿಂಗಪ್ಪ ಅವರು ಸಮರ್ಥ ಆಡಳಿತ ನಡೆಸಿದರು. ಅವರು ಈ ದೇಶ, ರಾಜ್ಯ ಕಂಡ ಅಪ್ರತಿಮ ನಾಯಕ.

ಭ್ರಷ್ಟಾಚಾರ ರಹಿತವಾಗಿ ಆಡಳಿತ ನಡೆಸಿದವರು. ರಾಜ್ಯದ ನೀರಾವರಿ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದವರು. ಅವರಿಗೆ ಇನ್ನಷ್ಟು ಉನ್ನತ ಸ್ಥಾನಗಳು ದೊರೆಯಬೇಕಿತ್ತು ಎಂದು ಹೇಳಿದರು. ನಿಜಲಿಂಗಪ್ಪ ಅವರು ಜುಬ್ಬ, ಕಚ್ಚೆಪಂಚೆ ಧರಿಸುತ್ತಿದ್ದರು. ಆದರೆ, ಅವರ ಪ್ರತಿಮೆ ಸೂಟು-ಬೂಟಿನಲ್ಲಿದೆ. ಪ್ರಸ್ತುತ ಇರುವ ಪ್ರತಿಮೆ ನಿಜಲಿಂಗಪ್ಪ ಅವರನ್ನು ಹೋಲುತ್ತಿಲ್ಲ. ಅವರ ಪ್ರತಿಮೆ ಬದಲಿಸಬೇಕೆಂದು ವಾಟಾಳ ನಾಗರಾಜ್ ಅವರು ಮನವಿ ಕೊಟ್ಟಿದ್ದಾರೆ. ಆ ಹಿನ್ನೆಲೆಯಲ್ಲಿ ಪ್ರತಿಮೆ ಬದಲಾವಣೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಸಂಸತ್ ಭವನದ ಮುಂದೆ ಅವರ ಪ್ರತಿಮೆ ಅನಾವರಣ ಮಾಡಲು ಹಾಗೂ ಭಾರತ ರತ್ನಕ್ಕೆ ಆವರ ಹೆಸರನ್ನು ಶಿಫಾರಸು ಮಾಡಲಾಗುವುದು ಎಂದು ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.  ಮುಂಬೈನಲ್ಲಿ ಕನಕ ಜಯಂತಿ ಹಮ್ಮಿಕೊಳ್ಳಲಾಗಿದ್ದು, ಅದರಲ್ಲಿ ಪಾಲ್ಗೊಳ್ಳಲು ತೆರಳುತ್ತಿರುವುದಾಗಿ ಸಿಎಂ ತಿಳಿಸಿದರು. ಕಳೆದ ಮೂರು ತಿಂಗಳಿಂದ ನನಗೆ ಅಲ್ಲಿನ ಕನ್ನಡಿಗರು ಆಹ್ವಾನಿಸುತ್ತಿದ್ದು, ಮಂಡ್ಯ ಹಾಗೂ ಇನ್ನಿತರೆಡೆ ಇರುವವರು ಅಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅದರಲ್ಲಿ ಪಾಲ್ಗೊಳ್ಳಲು ತೆರಳುತ್ತಿರುವುದಾಗಿ ಹೇಳಿದರು.  ಇದಕ್ಕೂ ಮುನ್ನ ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಅವರು ನಿಜಲಿಂಗಪ್ಪ ಪ್ರತಿಮೆ ಬದಲಾವಣೆ ಮಾಡಬೇಕೆಂದು, ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಮನವಿ ಸಲ್ಲಿಸಿದರು.  ಕೇಂದ್ರ ಮಾಜಿ ಸಚಿವ ಎಂ.ವಿ.ರಾಜಶೇಖರನ್, ಮೇಯರ್ ಸಂಪತ್‍ರಾಜ್, ಸರ್ಕಾರದ ಹಿರಿಯ ಅಧಿಕಾರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Facebook Comments

Sri Raghav

Admin