ಕರ್ನಾಟಕದ ರಾಜ್ಯಪಾಲ ವಿ.ಆರ್.ವಾಲಾ ಗುಜರಾತ್‍ ಸಿಎಂ ಅಭ್ಯರ್ಥಿ..?!

ಈ ಸುದ್ದಿಯನ್ನು ಶೇರ್ ಮಾಡಿ

Vajubhai-Vala-01

ಬೆಂಗಳೂರು,ಡಿ.11-ಇಡೀ ರಾಷ್ಟ್ರದ ಗಮನವನ್ನೇ ತನ್ನತ್ತ ಸೆಳೆದುಕೊಂಡಿರುವ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ  ಕರ್ನಾಟಕದ ರಾಜ್ಯಪಾಲ ವಿ.ಆರ್.ವಾಲಾ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಮಾಡುವ ಲೆಕ್ಕಾಚಾರದಲ್ಲಿಯೇ…? ಹೌದೆನ್ನುತ್ತಿವೆ ಬಿಜೆಪಿ ಮೂಲಗಳು. ಕಳೆದ ಶನಿವಾರ ಗುಜರಾತ್‍ನಲ್ಲಿ ನಡೆದ ಮೊದಲ ಹಂತದ ಮತದಾನದ ವೇಳೆ ತಮ್ಮ ಹಕ್ಕು ಚಲಾಯಿಸಲು ತವರು ರಾಜ್ಯಕ್ಕೆ ಹೋಗಿದ್ದ ವಿ.ಆರ್.ವಾಲಾಗೆ ಇಂಥದ್ದೊಂದು ಅಚ್ಚರಿ ಸುದ್ದಿ ಬಿಜೆಪಿ ನಾಯಕರಿಂದಲೇ ಬಂದಿದೆ.

ಖುದ್ದು ಪ್ರಧಾನಿಯವರೆ ವಿ.ಆರ್.ವಾಲಾಗೆ ದೂರವಾಣಿ ಕರೆ ಮಾಡಿ ನಿಮಗೆ ಶೀಘ್ರದಲ್ಲೇ ಹೊಸ ಜವಾಬ್ದಾರಿಯನ್ನು ನೀಡಲಾಗುವುದು. ಮಾನಸಿಕವಾಗಿ ನೀವು ಸಿದ್ದರಾಗಿ ಎಂಬ ಸಂದೇಶವನ್ನು ರವಾನಿಸಿದ್ದಾರೆ. ನೀವು ಮುಖ್ಯಮಂತ್ರಿ ಅಭ್ಯರ್ಥಿ ರೇಸ್‍ನಲ್ಲಿದ್ದೀರಿ. ಎಲ್ಲ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿ ಬಿಜೆಪಿ ಅಧಿಕಾರಕ್ಕೆ ಬಂದರೆ ನೀವು ಜವಾಬ್ದಾರಿಯನ್ನು ವಹಿಸಿಕೊಳ್ಳಲು ಸಿದ್ದರಾಗಬೇಕೆಂದು ಖುದ್ದು ಮೋದಿಯವರೇ ಸೂಚಿಸಿದ್ದಾರೆ ಎಂದು ರಾಜಭವನದ ಮೂಲಗಳು ತಿಳಿಸಿವೆ.

ಈ ಹಿಂದೆಯೇ ನೀವು ಮುಖ್ಯಮಂತ್ರಿಯಾಗಬೇಕಿತ್ತು. ನಾನು ರಾಜೀನಾಮೆ ನೀಡಿದ ಬಳಿಕ ನೀವೇ ಈ ಜವಾಬ್ದಾರಿಯನ್ನು ವಹಿಸಬೇಕಿತ್ತು. ಆದರೆ ರಾಜಕೀಯ ತಪ್ಪು ಲೆಕ್ಕಾಚಾರದಿಂದ ನಿಮಗೆ ತಪ್ಪಿ ಹೋಗಿದೆ. ಇದೀಗ ಆ ಸುಯೋಗ ಬಂದಿರುವುದರಿಂದ ನೀವು ರಾಜ್ಯಪಾಲರ ಹುದ್ದೆಗೆ ಯಾವುದೇ ಕ್ಷಣದಲ್ಲೂ ರಾಜೀನಾಮೆ ನೀಡಬೇಕೆಂದು ಸೂಚಿಸಿದ್ದಾರೆ.

ಕಡತಗಳ ವಿಲೇವಾರಿ: ಹಾಗೆ ನೋಡಿದರೆ ಪ್ರಧಾನಿ ಕಚೇರಿಯಿಂದ ಇಂಥದೊಂದು ಸುದ್ದಿ ರಾಜಭವನಕ್ಕೆ ಕೆಲವು ದಿನಗಳ ಹಿಂದೆಯೇ ಬಂದಿತ್ತೆಂಬ ಮಾತು ಕೇಳಿಬರುತ್ತಿದೆ. ಹೀಗಾಗಿಯೇ ಅವರು ರಾಜಭವನದಲ್ಲಿರುವ ಕಡತಗಳನ್ನು ಶೀಘ್ರ ವಿಲೇವಾರಿ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ. ಈಗಾಗಲೇ ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳ ನೇಮಕಾತಿ, ಸರ್ಕಾರದ ಪ್ರಮುಖ ಮಸೂದೆಗಳಿಗೆ ಸಹಿ ಸೇರಿದಂತೆ ಅಗತ್ಯ ಕಡತಗಳನ್ನು ಶೀಘ್ರದಲ್ಲೇ ವಿಲೇವಾರಿ ಮಾಡುವತ್ತ ರಾಜ್ಯಪಾಲರು ಚಿತ್ತಹರಿಸಿದ್ದಾರೆ.

ರಾಜಭವನದ ಸಿಬ್ಬಂದಿಗೆ ಈಗಾಗಲೇ ಈ ಸುಳಿವು ನೀಡಿರುವ ರಾಜ್ಯಪಾಲರು ಇರುವಷ್ಟು ದಿನ ತಮ್ಮ ಕರ್ತವ್ಯಕ್ಕೆ ಸಹಕರಿಸಿದ ಎಲ್ಲರಿಗೂ ಅಭಿನಂದನೆಯನ್ನೂ ಈಗಾಗಲೇ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಡಿ. 18ರಂದು ಫಲಿತಾಂಶ ಹೊರಬಿದ್ದ ಬಳಿಕ ಗುಜರಾತ್‍ನ ಹಾಲಿ ಮುಖ್ಯಮಂತ್ರಿ ವಿಜಯ್‍ಕುಮಾರ್ ರುಪಾನಿಗೆ ಬೇರೊಂದು ಸ್ಥಾನಮಾನ ಕಲ್ಪಿಸಿ ವಜೂಭಾಯಿ ವಾಲಾ ಅವರನ್ನೇ ಗುಜರಾತ್ ಮುಖ್ಯಮಂತ್ರಿ ಅಭ್ಯರ್ಥಿ ಹುದ್ದೆಗೆ ಪರಿಗಣಿಸುವ ಸಾಧ್ಯತೆ ನಿಚ್ಚಳವಾಗಿದೆ.

ಯಾರು ಈ ವಾಲಾ: ಗುಜರಾತ್‍ನ ಬಿಜೆಪಿ ಹಿರಿಯ ನಾಯಕರಲ್ಲಿ ಒಬ್ಬರಾದ ವಿ.ಆರ್.ವಾಲಾ ರಾಜಕೋಟ್ ವಿಧಾನಸಭಾ ಕ್ಷೇತ್ರದಿಂದ ಹಲವಾರು ಬಾರಿ ಗೆದ್ದು ಬಂದವರು. ಆರ್‍ಎಸ್‍ಎಸ್ ಮೂಲಕ ತಮ್ಮ ರಾಜಕೀಯ ಜೀವನ ಆರಂಭಿಸಿದ ಅವರು, ಬಳಿಕ ಬಿಜೆಪಿಗೆ ಸೇರ್ಪಡೆಯಾದರು. ರಾಜ್‍ಕೋಟ್ ವಿಧಾನಸಭಾ ಕ್ಷೇತ್ರದಿಂದ ಸತತ ಗೆಲುವು ಕಂಡಿದ್ದ ವಾಲಾ ಅವರು ಗುಜರಾತ್‍ನಲ್ಲಿ ಹಣಕಾಸು ಸಚಿವರಾಗಿ ಅತಿಹೆಚ್ಚು ಬಜೆಟ್ ಮಂಡಿಸಿದ ಕೀರ್ತಿ ಸಲ್ಲಿಸುತ್ತದೆ.

1997ರಿಂದ 2012ರವರೆಗೆ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ವೇಳೆ ಹಣಕಾಸು, ಕಾರ್ಮಿಕ, ಉದ್ಯೋಗ ಹಾಗೂ ಸ್ಪೀಕರ್ ಹುದ್ದೆಯನ್ನು ಅಲಂಕರಿಸಿದ್ದರು. ಸಂಘ ಹಾಗೂ ಪಕ್ಷ ನಿಷ್ಠೆ ಅವರನ್ನು ಬಹು ಎತ್ತರಕ್ಕೆ ಕೊಂಡೊಯ್ದಿತ್ತು. ಮೋದಿ ಪ್ರಧಾನಿಯಾದ ಮೇಲೆ ಸೇವಾ ಹಿರಿತನದಲ್ಲಿ ಅವರನ್ನೇ ಮುಖ್ಯಮಂತ್ರಿ ಮಾಡುತ್ತಾರೆ ಎಂಬ ನಿರೀಕ್ಷೆ ಎಲ್ಲರಲ್ಲೂ ಇತ್ತು. ಆದರೆ ಮೋದಿ ಅಚ್ಚರಿ ಎಂಬಂತೆ ಅವರನ್ನು ಕರ್ನಾಟಕದ ರಾಜ್ಯಪಾಲರನ್ನಾಗಿ ನೇಮಕ ಮಾಡಿದರು.

ರಾಜ್ಯಪಾಲರಾದ ಬಳಿಕ ಸರ್ಕಾರದ ಜೊತೆ ಸಂಘರ್ಷಕ್ಕಿಳಿಯಲಿಲ್ಲ. ಕೆಲವು ಸಂದರ್ಭಗಳಲ್ಲಿ ಛಾಟಿ ಬೀಸುವುದರಲ್ಲೂ ಹಿಂದೆ ಬೀಳುತ್ತಿರಲಿಲ್ಲ. ಉಪಲೋಕಾಯುಕ್ತ ನೇಮಕಾತಿ, ಕೆಪಿಎಸ್‍ಸಿ ಅಧ್ಯಕ್ಷರು ಹಾಗೂ ಸದಸ್ಯರ ನೇಮಕಾತಿ, ಕೆಲವು ವಿವಾದಾತ್ಮಕ ಮಸೂದೆಗಳು, ವಿಶ್ವವಿದ್ಯಾನಿಲಯಗಳಿಗೆ ಉಪಕುಲಪತಿಗಳ ನೇಮಕಾತಿ ಸೇರಿದಂತೆ ಸರ್ಕಾರ ತಪ್ಪು ಹೆಜ್ಜೆ ಇಟ್ಟಾಗ ಕಾರ್ಯಾಂಗದ ಮುಖ್ಯಸ್ಥರಾಗಿ ಯಾರ ಮುಲಾಜಿಗೂ ಒಳಗಾಗದೆ ಖಡಕ್ ನಿರ್ಧಾರ ಕೈಗೊಳ್ಳುತ್ತಿದ್ದರು.

ಬಿಜೆಪಿ ಹಿನ್ನೆಲೆಯಿಂದ ಬಂದಿದ್ದರೂ ರಾಜ್ಯ ಬಿಜೆಪಿ ನಾಯಕರ ಜೊತೆ ಒಡನಾಟ ಅಷ್ಟಕ್ಕಷ್ಟೆ . ಅರ್ಕಾವತಿ ಲೇಔಟ್, ಹೋಬ್ಲೊಟ್ ವಾಚ್ ಪ್ರಕರಣ ಸೇರಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತದಲ್ಲಿ ದೂರು ಸಲ್ಲಿಸಲು ಅನುಮತಿ ನೀಡಬೇಕೆಂದು ಖುದ್ದು ರಾಜ್ಯ ಬಿಜೆಪಿ ನಾಯಕರೇ ಭೇಟಿ ನೀಡಿದ್ದರೂ ವಾಲಾ ಕ್ಯಾರೆ ಎಂದಿರಲಿಲ್ಲ. ನಾನು ಯಾವುದೇ ಪಕ್ಷದ ಪ್ರತಿನಿಧಿಯಾಗಿ ರಾಜಭವನದಲ್ಲಿ ಕುಳಿತಿಲ್ಲ. ಕಾರ್ಯಾಂಗದ ಮುಖ್ಯಸ್ಥನಾಗಿ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವುದಷ್ಟೇ ನನ್ನ ಕರ್ತವ್ಯ ಎಂದು ಮುಖಕ್ಕೆ ಹೊಡೆದಂತೆ ಹೇಳುತ್ತಿದ್ದರು.

Facebook Comments

Sri Raghav

Admin