ನಂಬಲೇಬೇಕು, ನೀವು ಈ ದೇಗುಲದಲ್ಲಿ ಒಂದು ರಾತ್ರಿ ಇದ್ದರೆ ಶಿಲೆಯಾಗಿಬಿಡುತ್ತೀರಾ..!

ಈ ಸುದ್ದಿಯನ್ನು ಶೇರ್ ಮಾಡಿ

Temple--01

ಬರ್ಮರ್(ರಾಜಸ್ತಾನ), ಡಿ.11-ಭಾರತ ಅನೇಕ ನಿಗೂಢ ಸಂಗತಿಗಳ ಒಡಲು. ಇಲ್ಲಿ ನಂಬಲಸಾಧ್ಯವಾದ ಆದರೆ ನಂಬಲೇಬೇಕಾದ ಎಷ್ಟೋ ಅಚ್ಚರಿಯ ಸಂಗತಿಗಳಿವೆ. ವಿಜ್ಞಾನ ಮತ್ತು ತಂತ್ರಜ್ಞಾನ ಎಷ್ಟೇ ಮುಂದುವರಿದ್ದರೂ ಕೆಲವೊಂದು ವಿದ್ಯಮಾನ ಆಧುನಿಕ ಜಗತ್ತಿಗೇ ಸವಾಲೊಡ್ಡಿ ನಿಂತಿವೆ. ಇಂಥ ಒಂದು ವಿಸ್ಮಯ ಮತ್ತು ಭಯ ಹುಟ್ಟಿಸುವ ಸ್ಥಳವೊಂದು ಮರುಭೂಮಿ ರಾಜ್ಯ ರಾಜಸ್ತಾನದಲ್ಲಿದೆ. ಇಲ್ಲಿನ ಶಾಪಗ್ರಸ್ತ ಎನ್ನಲಾದ ಈ ದೇವಾಲಯದಲ್ಲಿ ಯಾರಾದರೂ ಒಂದು ದಿನ ಇದ್ದರೆ ಅಥವಾ ಸೂರ್ಯಾಸ್ತದ ನಂತರ ಅಲ್ಲಿಗೆ ಭೇಟಿ ನೀಡಿದರೆ ಕಲ್ಲಾಗುತ್ತಾರೆ ಎಂದೇ ಬಲವಾದ ನಂಬಿಕೆ ಇದೆ.  ರಾಜಸ್ತಾನ ಬರ್ಮರ್ ಜಿಲ್ಲೆಯಿಂದ 40 ಕಿ.ಮೀ.ದೂರದಲ್ಲಿರುವ ಹತ್ಮಾ ಗ್ರಾಮದ ಥಾರ್ ಮರುಭೂಮಿಯಲ್ಲಿ ಐದು ಸುಂದರ ದೇವಾಲಯಗಳಿವೆ. ಒಂದು ಕಾಲದಲ್ಲಿ ಕಿರಾದ್‍ಕೋಟ್ (ಕಿರಾಡ್‍ಕೋಟೆ) ಎಂದೇ ಇತಿಹಾಸ ಪ್ರಸಿದ್ದವಾದ ಈ ಸ್ಥಳವನ್ನು ಶಾಪಗ್ರಸ್ತ ಕಿರಾಡು ದೇವಸ್ಥಾನಗಳು ಎಂದೇ ಕರೆಯಲಾಗುತ್ತದೆ. ರಾಜಸ್ತಾನದ ಖಜುರಾಹೋ ಎಂಬ ಅನ್ವರ್ಥನಾಮವೂ ಇದಕ್ಕಿದೆ.

ಅತ್ಯಂತ ಆಕರ್ಷಕ ಶಿಲೆಗಳ ದೇವಸ್ಥಾನಗಳು ಪುರಾತನ ಕಾಲದಿಂದಲೂ ಕೆಲವು ನಿಗೂಢ ಸಂಗತಿಗಳನ್ನು ಬಚ್ಚಿಚ್ಚುಕೊಂಡಿದೆ. ಈ ದೇವಸ್ಥಾನಕ್ಕೆ ಸೂರ್ಯ ಮುಳುಗಿದ ನಂತರ ಯಾರೂ ಹೋಗಬಾರದು ಅಥವಾ ಅಲ್ಲಿರಬಾರದು. ಯಾರಾದರೂ ಆ ಧೈರ್ಯ ಮಾಡಿದರೆ ಅವರು ಕಲ್ಲಾಗುತ್ತಾರೆ ಅಥವಾ ಶಿಲೆಯಾಗುತ್ತಾರೆ ಎಂಬ ನಂಬಿಕೆ ಅನಾದಿ ಕಾಲದಿಂದಲೂ ಇದೆ. ಈಗಲೂ ಆ ಬಲವಾದ ನಂಬಿಕೆ ಮುಂದುವರಿದಿದೆ.  ಈ ಸ್ಥಳಕ್ಕೆ ತನ್ನದೇ ಆದ ಇತಿಹಾಸ ಮತ್ತು ಐತಿಹ್ಯವಿದೆ. 6 ರಿಂದ 8ನೇ ಶತಮಾನದ ವೇಳೆ ರಜಪೂತ ಕುಲದ ಕಿರಾಡ್ ಸಾಮಂತರು ಆಳುತ್ತಿದ್ದ ಈ ಪ್ರಾಂತ್ಯಕ್ಕೆ ಕಿರಾಡು ಎಂಬ ಹೆಸರಿದೆ. ಇದನ್ನು ಕಿರಾಡುಕೋಟೆ ಎಂದು ಕರೆಯಲಾಗುತ್ತಿತ್ತು. 11 ಮತ್ತು 12ನೇ ಶತಮಾನದಲ್ಲಿ ಈ ಪ್ರದೇಶ ಅತ್ಯಂತ ಸಮೃದ್ಧವಾಗಿತ್ತು. ಪರ್ಮರ್ ವಂಶದ ಸೋಮೇಶ್ವರ ಎಂಬ ರಾಜನ ಆಳ್ವಿಕೆಯಲ್ಲಿ ಈ ಪ್ರದೇಶ ಸಾಕಷ್ಟು ಅಭಿವೃದ್ದಿಯಾಯಿತು. ಇದು ಪರ್ಮರ್ ಕುಲದ ರಾಜಧಾನಿಯೂ ಆಗಿತ್ತು. ಶಿವ ಮತ್ತು ವಿಷ್ಣು ದೇಗುಲ ಸೇರಿದಂತೆ ಅನೇಕ ಮಂದಿರಗಳು ಇಲ್ಲಿ ನಿರ್ಮಾಣವಾಗಿದ್ದವು. ಮರಳುಶಿಲೆಯಿಂದ ದೇಗುಲಗಳ ಶಿಲ್ಪಗಳನ್ನು ರಚಿಸಲಾಗಿದ್ದು, ಅವುಗಳಲ್ಲಿ ಕೆಲವು ಈಗಲೂ ಉತ್ತಮ ಸ್ಥಿತಿಯಲ್ಲಿವೆ. ಸೋಲಂಕಿ ಶೈಲಿಯ ದೇವಾಲಯಗಳ ವಾಸ್ತುಶಿಲ್ಪವನ್ನು ಇದು ಹೋಲುತ್ತದೆ.

ತುರುಷ್ಕ್ ಆಕ್ರಮಣಕಾರರು ಈ ಪ್ರಾಂತ್ಯದ ಮೇಲೆ ದಾಳಿ ಮಾಡಿ ಧ್ವಂಸಗೊಳಿಸಿದ್ದರು. ನಂತರ ನೆಲಸಮವಾದ ಸ್ಥಳದಲ್ಲಿ ಪುನರ್‍ನಿರ್ಮಾಣ ಕಾರ್ಯಗಳು ನಡೆದವು. ಆ ಬಳಿಕ ವಿದೇಶ ಆಕ್ರಮಣಕಾರರಿಗೆ ಈ ಸ್ಥಳವು ಅಸುರಕ್ಷಿತವಾಗಿ ಪರಿಣಮಿಸಿದ್ದು ಕಾಕತಾಳೀಯ. ಒಂದೇ ಮರಳುಗಾಡು ಮತ್ತೊಂದೆಡೆ ಪರ್ವತಗಳಿಂದ ಸುತ್ತುವರಿದಿರುವ ಪ್ರದೇಶ ಭಯಮಿಶ್ರಿತ ಕುತೂಹಲಕ್ಕೂ ಕಾರಣವಾಗಿದೆ.  ಈ ದೇವಸ್ಥಾನಗಳಲ್ಲಿ ಒಂದು ರಾತ್ರಿ ವಾಸ್ತವ್ಯ ಹೂಡಿದರೆ ಅಥವಾ ಸೂರ್ಯ ಮುಳುಗಿದ ನಂತರ ಇಲ್ಲಿಗೆ ಭೇಟಿ ನೀಡಿದರೆ ಕಲ್ಲಾಗುತ್ತಾರೆ ಎಂಬ ನಂಬಿಕೆಗೂ ಒಂದು ಕಥೆ ಇದೆ. ಇಲ್ಲಿ ತನ್ನ ಶಿಷ್ಯರೊಂದಿಗೆ ಸಂತನೊಬ್ಬ ವಾಸವಾಗಿದ್ದ. ಈ ಕುತೂಹಲ ಮೂಡಿಸಿದ್ದ ಈ ಸ್ಥಳದ ಬಗ್ಗೆ ಹೆಚ್ಚಿನ ಅನ್ವೇಷಣೆ ಮಾಡಲು ಸಂತನು ಒಂದು ದಿನ ತನ್ನ ಶಿಷ್ಯರಿಗೆ ತಿಳಿಸದೇ ಗುಪ್ತ ಸ್ಥಳವೊಂದಕ್ಕೆ ತೆರಳಿದ. ತಮ್ಮ ಗುರು ಹಿಂದಿರುಗದೆ ಇರುವುದರಿಂದ ಶಿಷ್ಯರು ಚಿಂತಾಕ್ರಾಂತರಾದರು. ಅನೇಕ ದಿನಗಳ ಕಾಲ ಗುರುವಿನ ನಿರೀಕ್ಷೆಯಲ್ಲಿದ್ದರು. ಈ ಮಧ್ಯೆ ಶಿಷ್ಯರು ಭಯಾನಕ ರೋಗದಿಂದ ಬಳಲುತ್ತಿದ್ದರು. ಹತ್ತಿರದ ಗ್ರಾಮಸ್ಥರಲ್ಲಿ ಯಾರೊಬ್ಬರೂ ಇವರಿಗೆ ಚಿಕಿತ್ಸೆ ನೀಡಲು ಮುಂದೆ ಬರಲಿಲ್ಲ. ಆದರೆ ಕುಂಬಾರನ ಪತ್ನಿಯೊಬ್ಬಳು ಪ್ರತಿದಿನ ಅಲ್ಲಿಗೆ ತೆರಳಿ ರೋಗಗ್ರಸ್ತ ಶಿಷ್ಯರ ಆರೈಕೆ ಮಾಡುತ್ತಿದ್ಧಳು. ಅಚ್ಚರಿ ಎಂಬಂತೆ ಕೆಲವೇ ದಿನಗಳಲ್ಲಿ ಶಿಷ್ಯರು ಭಯಾನಕ ರೋಗದಿಂದ ಗುಣಮುಖರಾದರು.

ಏತನ್ಮಧ್ಯೆ ಸಂತನು ಬಹುದಿನಗಳ ನಂತರ ಇಲ್ಲಿಗೆ ಬಂದಾಗ ತನ್ನ ಶಿಷ್ಯರು ವಿಚಿತ್ರ ಆಕೃತಿಯಲ್ಲಿರುವುದನ್ನು ನೋಡಿ ಕುಪಿತನಾದ. ಇದೇ ಸಂದರ್ಭದಲ್ಲಿ ಆ ಸಾಧ್ವಿಯೂ ಅಲ್ಲಿಯೇ ಇದ್ದಳು. ತನ್ನ ಶಿಷ್ಯರನ್ನು ಈ ಸ್ಥಿತಿಗೆ ತಂದ ಇಡೀ ಪ್ರದೇಶ ನಾಶವಾಗಲಿ ಇಲ್ಲಿನ ಜನರೆಲ್ಲರೂ ಕಲ್ಲಾಗಲಿ ಎಂದು ಶಾಪ ನೀಡಿದ. ತನ್ನ ಶಿಷ್ಯರಿಗೆ ಉಪಚಾರ ಮಾಡಿ ರೋಗ ಗುಣಪಡಿಸಿದ ಕುಂಬಾರ ಪತ್ನಿಗೆ ಶಾಪದಿಂದ ವಿನಾಯಿತಿ ನೀಡಿದ. ಅಲ್ಲದೇ ಇಲ್ಲಿಂದ ತಕ್ಷಣ ಹಿಂದಿರುಗುವಂತೆ ಇನ್ನೆಂದಿಗೂ ಇಲ್ಲಿಗೆ ಬರದಂತೆ ಸಂತ ಸೂಚಿಸಿದ. ಅದರಂತೆ ಆಕೆ ಗ್ರಾಮದತ್ತ ಪ್ರಯಾಣ ಬೆಳೆಸುವಾಗ ಸಂಜೆಯಾಗುತ್ತಿತ್ತು. ಕೊನೆಯ ಬಾರಿ ಈ ಸ್ಥಳವನ್ನು ನೋಡಲು ಆಕೆ ತಿರುಗಿ ನೋಡಿದಾಗ ಆ ಸಾಧ್ವಿ ಕಲ್ಲಾದಳು. ಈಗಲೂ ಆ ಪ್ರದೇಶದಲ್ಲಿ ಕಲ್ಲಿನ ಮಹಿಳಾ ಶಿಲೆಯೊಂದು ನಿಂತಿದೆ. ಆಗಿನಿಂದ ಗ್ರಾಮಸ್ಥರು ಸಂಜೆಯಾದ ಮೇಲೆ ಈ ದೇವಸ್ಥಾನಕ್ಕೆ ಹೋಗುವುದಿಲ್ಲ. ಈ ಹಿಂದೆ ಧೈರ್ಯ ಮಾಡಿ ಈ ಸ್ಥಳಕ್ಕೆ ಹೋದವರು ಹಿಂದಿರುಗದೇ ಕಲ್ಲಾಗಿದ್ದಾರೆ ಎಂದು ಹಳ್ಳಿಗರು ಹೇಳುತ್ತಾರೆ.
ಈಗಲೂ ಈ ಸ್ಥಳವು ಆಸಕ್ತಿ ಮೂಡಿಸುವ ಸ್ಥಳವಾಗಿದೆ. ಕಲ್ಲಾಗುವ ಭಯದಿಂದ ಯಾರೂ ಅಲ್ಲಿ ರಾತ್ರಿ ವಾಸ್ತವ್ಯ ಹೂಡುವ ಅಥವಾ ಸೂರ್ಯ ಮುಳುಗಿದ ನಂತರ ಅಲ್ಲಿಗೆ ಹೋಗುವ ಧೈರ್ಯ ಮಾಡುತ್ತಿಲ್ಲ. ಅದು ಅನಾದಿ ಕಾಲದಿಂದಲೂ ಮುಂದುವರಿದಿದೆ.

Facebook Comments

Sri Raghav

Admin