ಬಿಜೆಪಿಯವರು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದಾರೆ : ರಾಮಲಿಂಗಾರೆಡ್ಡಿ

ಈ ಸುದ್ದಿಯನ್ನು ಶೇರ್ ಮಾಡಿ

Ramalingareddy-Session--01

ಬೆಂಗಳೂರು, ಡಿ.12-ಪರೇಶ್ ಮೇಸ್ತಾ ಸಾವಿನ ಹಿನ್ನೆಲೆಯಲ್ಲಿ ನಡೆಯುತ್ತಿರುವ ಗಲಭೆ ರಾಜಕೀಯ ಪ್ರೇರಿತವಾಗಿದೆ. ಬಿಜೆಪಿಯವರು ಕಾನೂನು ಸುವ್ಯವಸ್ಥೆ ಧಕ್ಕೆ ತರುತ್ತಿದ್ದಾರೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಇಂದಿಲ್ಲಿ ಆರೋಪಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಜಿಪಿಯೊಂದಿಗೆ ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊನ್ನಾವರ ಗಲಭೆ ಹಾಗೂ ಕಾನೂನು ಸುವ್ಯವಸ್ಥೆ ನಿಟ್ಟಿನಲ್ಲಿ ಇಲಾಖೆ ಕೈಗೊಂಡ ಕ್ರಮಗಳ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಿದ್ದೇನೆ ಎಂದರು.

ಬಿಜೆಪಿ ನಾಯಕರು ಈ ಪ್ರಕರಣದ ರಾಜಕೀಯ ಲಾಭ ಪಡೆಯಲು ಹವಣಿಸುತ್ತಿದ್ದಾರೆ. ಉದ್ದೇಶಪೂರ್ವಕವಾಗಿ ಗಲಾಟೆ ನಡೆಸಲಾಗುತ್ತಿದೆ. ಇದಕ್ಕೂ ಅಗತ್ಯ ಕ್ರಮಕೈಗೊಳ್ಳಲಿದ್ದೇವೆ ಎಂದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಗಲಭೆಯನ್ನು ಸೃಷ್ಟಿಸುತ್ತಿದ್ದಾರೆ. ಸಂಸದ ಪ್ರತಾಪ್‍ಸಿಂಹ ಅವರು ಬಿಡುಗಡೆಗೊಳಿಸಿರುವ ವಿಡಿಯೋದಲ್ಲಿರುವ ಮಾಹಿತಿಯಿಂದ ಅವರ ಉದ್ದೇಶ ಏನೆಂಬುದು ಅರ್ಥವಾಗುತ್ತದೆ. ಹೊನ್ನಾವರದಲ್ಲಿ ಕಲ್ಲು ಹೊಡೆಯುವುದು ಸರಿಯೇ ಎಂದು ವಾಗ್ದಾಳಿ ಮಾಡಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿದೆ. ಆದರೆ ಅದನ್ನು ಹಾಳು ಮಾಡಲು ಹೊರಟಿದ್ದಾರೆ. ಪ್ರತಾಪ್‍ಸಿಂಹ, ಈಶ್ವರಪ್ಪ ಏನು ಮಾತಾಡಿದ್ದಾರೆ. ಏನು ಮಾಡುತ್ತಿದ್ದಾರೆ ಎಂಬುದನ್ನೆಲ್ಲಾ ರಾಜ್ಯದ ಜನ ಗಮನಿಸುತ್ತಿದ್ದಾರೆ. ಬಂದ್‍ನ್ನು ಶಾಂತಿಯುತವಾಗಿ ಮಾಡಬೇಕು. ಆದರೆ ಕಲ್ಲು ತೂರಾಟ ನಡೆಸಿದ್ದಾರೆ ಎಂದರೆ ಏನರ್ಥ? ಎಂದು ಆಕ್ಷೇಪಿಸಿದರು.

Facebook Comments

Sri Raghav

Admin