ಧಗ ಧಗ ಹೊತ್ತಿ ಉರಿದಿದ್ದ ಉತ್ತರ ಕನ್ನಡ ಸಹಜ ಸ್ಥಿತಿಯತ್ತ

ಈ ಸುದ್ದಿಯನ್ನು ಶೇರ್ ಮಾಡಿ

Uttara-Kannada--03

ಬೆಂಗಳೂರು, ಡಿ.13- ಉತ್ತರ ಕನ್ನಡ ಜಿಲ್ಲೆಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ಕ್ರಮ ವಹಿಸಿದ್ದಾರೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.ಈ ಸಂಜೆಯೊಂದಿಗೆ ಮಾತನಾಡಿದ ಅವರು, ಹೊನ್ನಾವರದ ಪರೇಶ್ ಮೇಸ್ತಾ ನಿಗೂಢ ಸಾವು ಘಟನೆ ಖಂಡಿಸಿ ಉತ್ತರ ಕನ್ನಡದ ಕರಾವಳಿಯಲ್ಲಿ ನಡೆದ ಹಲವು ಹಿಂಸಾಚಾರ ಘಟನೆಗಳ ಸಂಬಂಧ ಪೊಲೀಸರು ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು.

ಐಜಿಪಿ ಹೇಮಂತ್ ನಿಂಬಾಳ್ಕರ್ ಅವರ ಕಾರಿಗೆ ಬೆಂಕಿ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲಾಗುತ್ತಿದೆ. ಘಟನೆ ಸಂದರ್ಭದಲ್ಲಿ 150ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ವಾಹನಗಳ ಮಾಲೀಕರ ಮಾಹಿತಿ ಕಲೆ ಹಾಕಿ ವಿಚಾರಣೆ ಮಾಡಲಾಗುತ್ತಿದೆ. ಪೊಲೀಸರು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಿ ಘಟನೆ ಬಗ್ಗೆ ಕೂಲಂಕಶ ವರದಿ ನೀಡಲಿದ್ದು, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡಬಾರದು ಎಂದ ಸಚಿವ ರಾಮಲಿಂಗಾರೆಡ್ಡಿಯವರು, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಬಿಜೆಪಿ ಸಂಘ ಪರಿವಾರದವರು ರಾಜಕೀಯ ಪ್ರೇರಿತ ಬಂದ್, ಪ್ರತಿಭಟನೆ ಮಾಡಿ ಕೋಮು ಸಂಘರ್ಷ ಉಂಟುಮಾಡುತ್ತಾರೆ. ಯಾವುದೋ ಒಂದು ಘಟನೆ ಮುಂದಿಟ್ಟುಕೊಂಡು ಅನಗತ್ಯವಾಗಿ ಅಮಾಯಕ ಜನರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಾರೆ. ಇದರಿಂದ ಶಾಂತಿ-ಸುವ್ಯವಸ್ಥೆಗೆ ಧಕ್ಕೆಯಾಗುತ್ತದೆ. ಸಾರ್ವಜನಿಕರು ಈ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಅವರು ಹೇಳಿದರು. ಪರೇಶ್ ಮೇಸ್ತಾ ಸಾವಿನ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖಾ ವರದಿ ಬಂದ ನಂತರ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

Facebook Comments

Sri Raghav

Admin