ಖರ್ಚಾಗದೆ ಉಳಿದ 406 ಕೋಟಿ ರೂ. ಶಾಸಕರ ನಿಧಿ ಅಭಿವೃದ್ಧಿ ಕಾರ್ಯಗಳಿಗೆ ಬಳಕೆ

ಈ ಸುದ್ದಿಯನ್ನು ಶೇರ್ ಮಾಡಿ

MR-Seetaraman--01

ಬೆಂಗಳೂರು,ಡಿ.14-ಕಳೆದ 2002ರಿಂದ 2013 ಮಾರ್ಚ್ 31ರವರೆಗೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಖರ್ಚಾಗದೆ 406 ಕೋಟಿ ರೂ. ಉಳಿಕೆಯಾಗಿದ್ದು , ಇದನ್ನು ಶಿಕ್ಷಣ , ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಯೋಜನಾ ಮತ್ತು ಸಾಂಖಿಕ ಹಾಗೂ ತಂತ್ರಜ್ಞಾನ ಸಚಿವ ಎಂ.ಆರ್.ಸೀತಾರಾಮ್ ಇಂದಿಲ್ಲಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಬಳಕೆಯಾಗದೆ ಉಳಿದಿರುವ 406 ಕೋಟಿ ರೂ.ಗಳಲ್ಲಿ ಶಿಕ್ಷಣ ಇಲಾಖೆಗೆ 243 ಕೋಟಿ ರೂ.ಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಇದರಲ್ಲಿ 2,719 ಶಾಲಾ ಕೊಠಡಿಗಳ ನಿರ್ಮಾಣ ಮಾಡಲು ಮುಂದಾಗಿರುವುದಾಗಿ ತಿಳಿಸಿದರು.  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತುರ್ತು ಕಾಮಗಾರಿಗಳಿಗೆ 122 ಕೋಟಿ ರೂ.ಗಳನ್ನು ಮೀಸಲಿರಿಸಿದ್ದು, ಇದರಲ್ಲಿ 309 ಆಸ್ಪತ್ರೆಗಳಿಗೆ ಮೂಲ ಸೌಲಭ್ಯಗಳನ್ನು ಒದಗಿಸುವುದು ಹಾಗೂ ಆಸ್ಪತ್ರೆಗೆ ಅಗತ್ಯ ಕಟ್ಟಡಗಳ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುವುದು ಎಂದು ಹೇಳಿದರು.
ಇದರಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಗೆ 40 ಕೋಟಿ ರೂ.ಗಳನ್ನು ನೀಡಿದ್ದು , ಸರ್ಕಾರಿ ಜಾಗಗಳಲ್ಲಿ 346 ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಬಹುದಾಗಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮಕ್ಕೆ ಸಿದ್ದು ಸರ್ಕಾರ ಸೇವೆ ಕಡೆಗೆ ಎಂಬ ಹೆಸರಿಡಲಾಗಿದೆ. ಜಿಲ್ಲಾಧಿಕಾರಿಗಳು ಈ ಕಾರ್ಯಕ್ರಮದ ಉಸ್ತುವಾರಿ ವಹಿಸಲಿದ್ದಾರೆ. ಶಾಸಕರ ಪ್ರದೇಶಾಭಿವೃದ್ಧಿ , ಉಳಿಕೆಯ ಹಣ, ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿದ್ದು ಇದನ್ನು ಒಂದು ಬಾರಿ ವೆಚ್ಚವಾಗಿ ಭರಿಸಲು ತೀರ್ಮಾನಿಸಲಾಗಿದೆ. ಆಯಾಯ ಇಲಾಖೆ ಕಾರ್ಯದರ್ಶಿಗಳು ಕಡ್ಡಾಯವಾಗಿ ಕಾಮಗಾರಿಗಳ ನಿರ್ವಹಣೆ ಮಾಡಬೇಕೆಂದು ಸೂಚಿಸಲಾಗಿದೆ.  ಇದಲ್ಲದೆ 2013ರಿಂದ ಸೆಪ್ಟಂಬರ್ ಅಂತ್ಯದವರೆಗೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಖರ್ಚಾಗದೆ ಒಂದು ಸಾವಿರ ಕೋಟಿ ರೂ. ಬಾಕಿ ಉಳಿದಿದೆ. ಈ ವರ್ಷದ ಹಣ ಬಿಡುಗಡೆ ಮಾಡುವುದು ಸೇರಿದಂತೆ 1300 ಕೋಟಿ ರೂ. ಆಗಲಿದೆ ಎಂದ ಅವರು, ಯಾವ ಜಿಲ್ಲೆಯಲ್ಲೂ ಶಾಸಕರ ಹಣ ಸಂಪೂರ್ಣ ಬಳಕೆಯಾಗಿಲ್ಲ. ಉತ್ತರ ಕನ್ನಡದಲ್ಲಿ ಅತಿ ಕಡಿಮೆ ಬಳಕೆಯಾಗಿದೆ ಎಂದು ಅವರು ತಿಳಿಸಿದರು.

ಕಳೆದ ಐದು ವರ್ಷಗಳಲ್ಲಿ 600 ಕೋಟಿ ರೂ. ವೆಚ್ಚವಾಗಿದ್ದು, 700 ಕೋಟಿ ರೂ. ಉಳಿಕೆಯಾಗಿದೆ. ನಿಗದಿತ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುವ ಸಂದರ್ಭದಲ್ಲಿ ಶಾಸಕರು ಹೆಚ್ಚುವರಿ ಕಾಮಗಾರಿಗಳ ಪ್ರಾರಂಭಕ್ಕೆ ಅನುಮತಿ ಪಡೆಯಲು ಆಗುವ ಕಾಲಾವಕಾಶದಿಂದ ಅನುದಾನ ಬಳಕೆ ವಿಳಂಬವಾಗುತ್ತದೆ ಎಂದು ಅವರು ಹೇಳಿದರು.  ಸಂಸದರ ನಿಧಿಯೂ ಕೂಡ ನಿರೀಕ್ಷೆಯಂತೆ ಬಳಕೆಯಾಗಿಲ್ಲ. ಈ ಬಗ್ಗೆ ನಂತರ ವಿವರಗಳನ್ನು ನೀಡುವುದಾಗಿ ಸಚಿವ ಸೀತಾರಾಂ ಹೇಳಿದರು.

Facebook Comments

Sri Raghav

Admin