ನಾಳೆಯಿಂದ ಸಂಸತ್ ಚಳಿಗಾಲ ಅಧಿವೇಶನ ಆರಂಭ : ಆಡಳಿತ-ವಿಪಕ್ಷ ವಾಕ್ಸಮರಕ್ಕೆ ಅಖಾಡ ಸಜ್ಜು

ಈ ಸುದ್ದಿಯನ್ನು ಶೇರ್ ಮಾಡಿ

Session-Parliamne-t

ನವದೆಹಲಿ, ಡಿ.14-ಸಂಸತ್ತಿನ ಚಳಿಗಾಲದ ಅಧಿವೇಶನ ನಾಳೆಯಿಂದ ಆರಂಭವಾಗಲಿದ್ದು, ಕೆಲವು ಗಂಭೀರ ಮತ್ತು ಜ್ವಲಂತ ವಿಷಯಗಳಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ವಾಕ್ಸಮರಕ್ಕೆ ಅಖಾಡ ಸಜ್ಜಾಗಿದೆ. ರಾಷ್ಟ್ರ ರಾಜಕಾರಣದಲ್ಲಿ ಭಾರೀ ಸಂಚಲನ ಸೃಷ್ಟಿಸಿರುವ ಗುಜರಾತ್ ಮತ್ತು ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆ ಮುಗಿದ ನಂತರ ನಾಳೆಯಿಂದ ನಡೆಯಲಿರುವ ಸಂಸತ್ತಿನ ಉಭಯ ಸದನಗಳ ಅಧಿವೇಶನ ಸಹ ತೀವ್ರ ಕುತೂಹಲ ಕೆರಳಿಸಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರದ ನೋಟು ಅಮಾನ್ಯೀಕರಣ, ಜಿಎಸ್‍ಟಿ ಅನುಷ್ಠಾನ, ರೈತರ ಸಮಸ್ಯೆ, ಗೋರಕ್ಷಕರ ಗಲಭೆ, ಲವ್ ಜಿಹಾದ್, ದೇಶದ ವಿವಿಧೆಡೆ ಕೋಮು ಹಿಂಸಾಚಾರ, ಚಂಡಮಾರುತ, ಪ್ರವಾಹ ಸೇರಿದಂತೆ ನೈಸರ್ಗಿಕ ವಿಕೋಪಗಳು, ವಿವಿಧ ಯೋಜನೆಗಳಿಗೆ ಆಧಾರ್ ಕಾರ್ಡ್ ಸಂಪರ್ಕ ಗೊಂದಲ, ಅಂತರಾಜ್ಯ ಜಲವಿವಾದ, ವಿವಿಧ ರಾಜ್ಯಗಳಲ್ಲಿ ರಾಜಕೀಯ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರ ಕಗ್ಗೊಲೆ ಸೇರಿದಂತೆ ವಿವಿಧ ವಿಷಯಗಳು ಅಧಿವೇಶನದಲ್ಲಿ ಪ್ರಮುಖವಾಗಿ ಚರ್ಚೆಯಾಗಲಿವೆ.

ಕಾಶ್ಮೀರ ಕಣಿವೆ ಸೇರಿದಂತೆ ದೇಶದ ವಿವಿಧೆಡೆ ಉಗ್ರಗಾಮಿಗಳ ದಾಳಿ, ಗಡಿಯಲ್ಲಿ ಪಾಕಿಸ್ತಾನ ಸೇನೆಯ ಯುದ್ಧ ವಿರಾಮ ಉಲ್ಲಂಘನೆ, ಚೀನಾದ ಡೋಕ್ಲಂ ಬಿಕ್ಕಟ್ಟು ಸೇರಿದಂತೆ ಜ್ವಲಂತ ಸಮಸ್ಯೆಗಳು ಕೂಡ ಚರ್ಚೆಗೆ ಬರಲಿವೆ.  ಈ ಅಧಿವೇಶನ ಆಡಳಿತ ಮತ್ತು ಪ್ರತಿಪಕ್ಷಗಳ ಪರಸ್ಪರ ನಿಂದನೆ, ಆರೋಪ-ಪ್ರತ್ಯಾರೋಪ, ಟೀಕೆ, ವಾದ-ವಾಗ್ವಾದ ಮತ್ತು ವಾಗ್ದಾಳಿಗಳಿಗೆ ವೇದಿಕೆಯಾಗಲಿದೆ. ಎರಡೂ ರಾಜ್ಯಗಳ ಚುನಾವಣಾ ಫಲಿತಾಂಶ ಅಧಿವೇಶನ ನಡೆಯುವಾಗಲೇ ಡಿ.18ರಂದು ಪ್ರಕಟಗೊಳ್ಳಲಿದ್ದು, ಬಿಜೆಪಿ ಗೆಲುವು ಸಾಧಿಸಿದರೆ ಪ್ರಧಾನಿ ಮೋದಿ ಅವರ ಪ್ರತಿಷ್ಠೆ ಮತ್ತು ವರ್ಚಸ್ಸು ಇಮ್ಮಡಿಯಾಗಲಿದೆ. ಒಂದು ವೇಳೆ ಬಿಜೆಪಿಗೆ ವಿರುದ್ಧವಾಗಿ ಫಲಿತಾಂಶ ಘೋಷಣೆಯಾದರೆ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳಿಗೆ ಆನೆ ಬಲ ಲಭಿಸಲಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ನಡುವೆ ಜಿದ್ದಾಜಿದ್ದಿನ ಹೋರಾಟ ಎಂದೇ ಪರಿಗಣಿಸಲಾಗಿರುವ ಎರಡೂ ರಾಜ್ಯಗಳ ಚುನಾವಣಾ ಫಲಿತಾಂಶ ಯಾವುದೇ ಪಕ್ಷದ ಪರವಾಗಿ ಬಂದರೂ ಅಧಿವೇಶನದಲ್ಲಿ ಕಾವೇರಿದ ಚರ್ಚೆಗೆ ಗ್ರಾಸವಾಗಲಿದೆ. ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷರಾಗಿರುವ ಯುವ ನಾಯಕ ರಾಹುಲ್ ಗಾಂಧಿ ಅವರಿಗೆ ಈ ಅಧಿವೇಶನ ರಾಜಕೀಯವಾಗಿ ಮತ್ತು ಸಂಘಟನಾತ್ಮವಾಗಿ ಅತಿ ಮುಖ್ಯ ಎನಿಸಿದೆ.

ಅಧಿವೇಶನಕ್ಕೆ ಮುನ್ನ ಎಲ್ಲ 17 ವಿವಿಧ ವಿರೋಧ ಪಕ್ಷಗಳ ನಾಯಕರು ಸಭೆ ಸೇರಿ ರಾಜ್ಯ ರಾಜಕಾರಣದ ಪ್ರಚಲಿತ ವಿದ್ಯಮಾನಗಳು ಮತ್ತು ಆಗುಹೋಗುಗಳ ಬಗ್ಗೆ ಗಹನ ಚರ್ಚೆ ನಡೆಸಲಿದ್ದಾರೆ. ಎನ್‍ಡಿಎ ಸರ್ಕಾರದ ವಿರುದ್ಧ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಎಡಪಕ್ಷಗಳು, ಡಿಎಂಕೆ, ಆರ್‍ಜೆಡಿ, ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಸೇರಿದಂತೆ ವಿವಿಧ ಪಕ್ಷಗಳ ಧುರೀಣರು ಸಭೆಯಲ್ಲಿ ಭಾಗವಹಿಸಿ ಸರ್ಕಾರದ ಮೇಲೆ ವಾಗ್ದಾಳಿಗೆ ಕಾರ್ಯತಂತ್ರ ರೂಪಿಸಲಿದ್ದಾರೆ.

Facebook Comments

Sri Raghav

Admin