ಕಲಬುರ್ಗಿ ಜಿಲ್ಲೆಯಲ್ಲಿ ಬೆಳ್ಳಂಬೆಳಿಗ್ಗೆ ಸದ್ದು ಮಾಡಿದ ಪೊಲೀಸರ ಗನ್

ಈ ಸುದ್ದಿಯನ್ನು ಶೇರ್ ಮಾಡಿ

Kalburgi--01

ಕಲಬುರ್ಗಿ, ಡಿ.15-ಜಿಲ್ಲೆಯಲ್ಲಿ ಮತ್ತೆ ಇಂದು ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಮೊರೆದಿದೆ. ಹಣಕ್ಕಾಗಿ ಜೀವ ತೆಗೆಯುತ್ತಿದ್ದ ಆರೋಪಿಯನ್ನು ಪೊಲೀಸರು ಫೈರಿಂಗ್ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಫೈರಿಂಗ್ ವೇಳೆ ಆರೋಪಿ ಯಶವಂತ, ಪೊಲೀಸ್ ಪೇದೆಗಳಾದ ಕುಪೇಂದ್ರ ಹಾಗೂ ಕುಶನ್ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಲೂಕಿನ ತಾವರೆಗೆರ ಕ್ರಾಸ್ ಬಳಿ ಇಂದು ಬೆಳ್ಳಂಬೆಳಗ್ಗೆ ಈ ಫೈರಿಂಗ್ ನಡೆದಿದ್ದು, ವಿವಿಧ ಕೊಲೆ ಪ್ರಕರಣದಲ್ಲಿ ಬೇಕಾಗಿದ್ದ ರೌಡಿಶೀಟರ್ ಯಶವಂತ್ ಮೇಲೆ ಗುಂಡಿನ ದಾಳಿ ನಡೆಸಿದ್ದು, ಆತನ ಎಡಗಾಲಿಗೆ ಗುಂಡು ತಗುಲಿದೆ. ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗುತ್ತಿದ್ದಾಗ ಗ್ರಾಮೀಣ ಠಾಣೆಯ ಪಿಎಸ್‍ಐ ಚಂದ್ರಶೇಖರ್ ತಿಗಡಿ ಗುಂಡಿನ ದಾಳಿ ನಡೆಸಿದ್ದು, ಈ ವೇಳೆ ಸ್ಥಳದಲ್ಲಿದ್ದ ಕುಪೇಂದ್ರ ಹಾಗೂ ಕುಶನ್ ಇಬ್ಬರು ಗಾಯಗೊಂಡಿದ್ದು ಅವರನ್ನು ಯುನಿಟೈಡ್ ಆಸ್ಪತ್ರೆಗೆ ಹಾಗೂ ಆರೋಪಿ ಯಶವಂತ್‍ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ನಾಡ ಪಿಸ್ತೂಲ್ ಮಾರಾಟ ಮಾಡುತ್ತಿದ್ದ, ಹಣಕ್ಕಾಗಿ ಕಿಡ್ನ್ಯಾಪ್ ಮಾಡುತ್ತಿದ್ದ ಯಶವಂತ್, ಕಲಬುರ್ಗಿಯ ತಾಜಾ ಸುಲ್ತಾನಾಪುರ್ ಗ್ರಾಮದವನಾಗಿದ್ದು, ಕೆಲ ದಿನಗಳ ಹಿಂದಷ್ಟೇ ಕೊಲೆಯಾಗಿದ್ದ ಮೋನಪ್ಪ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ. ಈ ಹಿಂದೆ ಕೊಲೆ, ದರೋಡೆ ಪ್ರಕರಣಗಳಲ್ಲಿ ಜೈಲು ವಾಸ ಅನುಭವಿಸಿದ್ದ. ಇಂದು ಬೆಳ್ಳಂಬೆಳಗ್ಗೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಯಶವಂತ್‍ಗೆ ಪೊಲೀಸರು ಗುಂಡಿನ ರುಚಿ ತೋರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin