ಜನವರಿ 1ರಿಂದ ಎಲ್ಲಾ ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟೀನ್ ಓಪನ್

ಈ ಸುದ್ದಿಯನ್ನು ಶೇರ್ ಮಾಡಿ

Indira-Canteen

ಬೆಂಗಳೂರು,ಡಿ,16 : ಜನವರಿ 1 ರಿಂದ ಗುಲ್ಬರ್ಗಾ ಜಿಲ್ಲೆಯ ಸೇಡಂ ಒಳಗೊಂಡು ರಾಜ್ಯದ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲೂ `ಇಂದಿರಾ ಕ್ಯಾಂಟೀನ್’ ಪ್ರಾರಂಭಗೊಳ್ಳಲಿದೆ ಎಂದು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ರಾಜ್ಯದ ಎಲ್ಲ ಪ್ರದೇಶಗಳಲ್ಲೂ ಬಡವರು, ಶ್ರಮಿಕರು ಕೇವಲ 5 ರೂ.ಗೆ ತಿಂಡಿ ಹಾಗೂ 10 ರೂ.ಗೆ ಭೋಜನ ದೊರೆಯಲಿದೆ ಎಂದರು.

ಸೇಡಂ ತಾಲೂಕಿನಲ್ಲಿ ಸುವರ್ಣ ಕರ್ನಾಟಕ ಭವನ ಹಾಗೂ ಸರ್ಕಾರಿ ಆಸ್ಪತ್ರೆಗಳಿಗೆ ಶಂಕುಸ್ಥಾಪನೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಎಲ್ಲ ಕಾರ್ಯಕ್ರಮಗಳು ಚುನಾವಣೆಗಾಗಿ ಅಲ್ಲ. ನಮ್ಮ ಸರ್ಕಾರ ಪ್ರಾರಂಭವಾದ ದಿನದಿಂದಲೂ ಇಲ್ಲಿಯವರೆಗೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸತತವಾಗಿ ನಡೆಸುತ್ತಾ ಬಂದಿದ್ದೇವೆ ಎಂದರು. ನಾನು ಮೇ 13, 2013ರಂದು ಪ್ರಮಾಣ ವಚನ ಸ್ವೀಕರಿಸಿದ ಅರ್ಧ ಗಂಟೆಯಲ್ಲಿ ಆರು ಅನ್ನಭಾಗ್ಯ, ಕ್ಷೀರಭಾಗ್ಯ ಒಳಗೊಂಡು ಆರು ಕಾರ್ಯಕ್ರಮಗಳಿಗೆ ಚಾಲನೆ ನೀಡಿದೆ. ಇಲ್ಲಿಯವರೆಗೂ ನಾವು ನುಡಿದಂತೆ ನಡೆದಿದ್ದೇವೆ ಎಂದರು.

ದೇವರಾಜ್ ಅರಸ್ ಅಭಿವೃದ್ಧಿ ಮಂಡಳಿ, ಅಂಬೇಡ್ಕರ್ ಅಭಿವೃದ್ಧಿ ಮಂಡಳಿ, ವಾಲ್ಮೀಕಿ ಅಭಿವೃದ್ಧಿ ಮಂಡಳಿ, ಅಲ್ಪಸಂಖ್ಯಾತರ ಅಭಿವೃದ್ಧಿ ಮಂಡಳಿಗಳಲ್ಲಿ ತೆಗೆದುಕೊಂಡ ಸಾಲಗಳನ್ನು ಮನ್ನಾ ಮಾಡುವ ಮೂಲಕ ಬಡಜನರು ಸಾಲಮುಕ್ತರಾಗಿಸುವ ಕೆಲಸ ಮಾಡಿದ್ದೇವೆ ಎಂದರು. ಹಾಗೆಯೇ ಸೊಸೈಟಿಗಳ ಮೂಲಕ ಪಡೆದ 8165 ಕೋಟಿ ರೂ. ಸಾಲ ಮನ್ನಾ ಮಾಡಿದ್ದೇವೆ ಎಂದರು.

ಅನ್ನಭಾಗ್ಯದಲ್ಲಿ ರಾಜ್ಯದ 4ಕೋಟಿಗೂ ಹೆಚ್ಚು ಜನರು ತಲಾ ಏಳು ಕೆಜಿ ಅಕ್ಕಿಯನ್ನು ಉಚಿತವಾಗಿ ಪಡೆಯುತ್ತಿದ್ದಾರೆ. ಉಚಿತವಾಗಿ ಅಕ್ಕಿ ನೀಡುವ ಕಾರ್ಯಕ್ರಮವನ್ನು ದೇಶದಲ್ಲಿ ಯಾವ ರಾಜ್ಯವೂ ಮಾಡಿಲ್ಲ. ಯಾರೂ ಹಸಿದು ಮಲಗಬಾರದು ಎನ್ನುವುದು ನಮ್ಮ ಉದ್ದೇಶ. ಪ್ರತಿಯೊಬ್ಬರೂ ಪೌಷ್ಠಿಕಯುಕ್ತ ಆಹಾರ ಸೇವಿಸಬೇಕು ಎನ್ನುವ ಉದ್ದೇಶದಿಂದ ಇಂದಿರಾ ಕ್ಯಾಂಟೀನ್ ಮಾಡಿದ್ದೇವೆ. ಗುಲ್ಬರ್ಗಾ ಜಿಲ್ಲೆಯಲ್ಲಿ 1780 ಕೋಟಿ ರೂ.ಗಳನ್ನು ನೀರಾವರಿಗಾಗಿಯೇ ಖರ್ಚು ಮಾಡಿದ್ದೇವೆ ಎಂದರು.

ಎಸ್‍ಸಿಪಿಟಿಎಸ್‍ಪಿ ಹಣವನ್ನು ಜನಸಂಖ್ಯೆಗೆ ಅನುಗುಣವಾಗಿ ಖರ್ಚು ಮಾಡುತ್ತಿರುವ ರಾಜ್ಯಗಳಲ್ಲಿ ಕರ್ನಾಟಕ ಎರಡನೆಯ ರಾಜ್ಯವಾಗಿದೆ. ಹೀಗೆ ಜನಸಂಖ್ಯೆ ಆಧರಿಸಿ ಹಣ ಖರ್ಚು ಮಾಡುತ್ತಿರುವುದು ಆಂಧ್ರ ಪ್ರದೇಶ ಮಾತ್ರ. ಕರ್ನಾಟಕದಲ್ಲಿ ಶೇ.24.1ರಷ್ಟು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರಿದ್ದಾರೆ. ಈ ವರ್ಗದ ಅಭಿವೃದ್ಧಿಗೆ ಒಟ್ಟು 86,000 ಕೋಟಿ ರೂ. ಖರ್ಚು ಮಾಡುತ್ತಿದ್ದೇವೆ. ಗುತ್ತಿಗೆ ಉದ್ಯೋಗದಲ್ಲೂ ಮೀಸಲಾತಿ ನೀಡಲು ಅವಕಾಶ ಕಲ್ಪಿಸಿದ್ದೇವೆ.

ದೇವರಾಜ್ ಅರಸ್ `ಉಳುವವನೇ ಭೂ ಒಡೆಯ’ ಎಂಬ ಕಾರ್ಯಕ್ರಮದಂತೆ ಹಾಡಿಗಳು, ಹಟ್ಟಿ, ಲಂಬಾಣಿ ತಾಂಡಾಗಳಲ್ಲಿ ವಾಸಿಸುವವರಿಗೆ `ವಾಸಿಸುವವನೇ ಮನೆ ಒಡೆಯ’ ಎಂಬ ಯೋಜನೆ ತಂದು ಹಕ್ಕುಪತ್ರಗಳನ್ನು ನೀಡುತ್ತಿರುವ ಏಕೈಕ ಸರ್ಕಾರ ನಮ್ಮದಾಗಿದೆ ಎಂದರು. ದಲಿತರು, ಹಿಂದುಳಿದವರು ಹಾಗೂ ಮಹಿಳೆಯರ ಆರ್ಥಿಕ, ಸಾಮಾಜಿಕ ಅಭಿವೃದ್ಧಿಯೇ ನಮ್ಮ ಗುರಿ ಎಂದರು. ಕ್ಷೀರಬಾಗ್ಯ, ಅನ್ನಭಾಗ್ಯ, ಕ್ಷೀರಧಾರೆ, ಮಾತೃಪೂರ್ಣ, ಇಂದಿರಾ ಕ್ಯಾಂಟೀನ್ ಇತ್ಯಾದಿ ಶ್ರೀಸಾಮಾನ್ಯರ ಅನುಕೂಲಕ್ಕೆ ಅಸಂಖ್ಯ ಕಾರ್ಯಕ್ರಮಗಳನ್ನು ನಮ್ಮ ಸರ್ಕಾರ ಹಮ್ಮಿಕೊಂಡಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್, ನೀರಾವರಿ ಸಚಿವ ಎಂ.ಬಿ.ಪಾಟೀಲ್, ಐಟಿ, ಬಿಟಿ ಹಾಗೂ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ, ಚಿಂಚೋಳಿ ಶಾಸಕ ಉಮೇಶ್ ಜಾಧವ್ ಉಪಸ್ಥಿತರಿದ್ದರು.

Facebook Comments

Sri Raghav

Admin