ಗುಜರಾತ್ ಮತ್ತು ಹಿ.ಪ್ರ. ಚುನಾವಣಾ ಫಲಿತಾಂಶ ರಾಜ್ಯದ ಮೇಲೂ ಪರಿಣಾಮ ಬೀರುತ್ತೆ : ಬಿಎಸ್ವೈ

ಈ ಸುದ್ದಿಯನ್ನು ಶೇರ್ ಮಾಡಿ

yadiyurappa--1

ಬೆಂಗಳೂರು,ಡಿ.18-ಗುಜರಾತ್ ಮತ್ತು ಹಿಮಾಚಲಪ್ರದೇಶ ವಿಧಾನಸಭಾ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ಭಾರೀ ಪರಿಣಾಮ ಬೀರಲಿದ್ದು , ಬಿಜೆಪಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೀವ್ರ ಆಡಳಿತ ವಿರೋಧಿ ಅಲೆಯ ನಡುವೆಯೂ ಎರಡು ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದು ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನಾಯಕತ್ವಕ್ಕೆ ಜನ ಬೆಂಬಲ ಇದೆ ಎಂಬುದು ಸಾಬೀತಾಗಿದೆ ಎಂದರು.

ಆಡಳಿತಾರೂಢ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯನವರ ನಾಯಕತ್ವದ ವಿರುದ್ಧ ಅಸಮಾಧಾನಗೊಂಡಿರುವ ಕೆಲವು ಶಾಸಕರು ಪಕ್ಷ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಜನವರಿ ತಿಂಗಳ ನಂತರ ಅವರ ಹೆಸರ ಬಹಿರಂಗಪಡಿಸುವುದಾಗಿ ತಿಳಿಸಿದರು.  ರಾಜ್ಯದಲ್ಲೂ ಮೋದಿ ಮತ್ತು ಅಮಿತ್ ಷಾ ನಾಯಕತ್ವವನ್ನು ಮತದಾರ ಒಪ್ಪಿಕೊಂಡು ಪಕ್ಷವನ್ನು ಅಧಿಕಾರಕ್ಕೆ ತರುವುದರಲ್ಲಿ ಯಾವುದೇ ಅನುಮಾನವಿಲ್ಲ. ವಿರೋಧ ಪಕ್ಷಗಳು ಎಷ್ಟೇ ಕುಹುಕವಾಡಿದರೂ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ನಮ್ಮ ಗುರಿಯನ್ನು ತಲುಪಲು ಬೇಕಾದ ಕಾರ್ಯತಂತ್ರವನ್ನು ರೂಪಿಸುತ್ತೇವೆ ಎಂದರು.

ನರೇಂದ್ರ ಮೋದಿ ಅಲೆ ಇಲ್ಲ ಎನ್ನುವುದಾದರೆ ಎರಡು ರಾಜ್ಯಗಳಲ್ಲಿ ಬಿಜೆಪಿ ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ. ಐದು ಬಾರಿ ಆಡಳಿತ ನಡೆಸಿದ್ದರಿಂದ ಒಂದಿಷ್ಟು ಆಡಳಿತ ವಿರೋಧಿ ಅಲೆ ಎದುರಾಗಿತ್ತು. ಪ್ರತಿ ಪಕ್ಷಗಳು ನಮ್ಮ ಪಕ್ಷದ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದವು. ಇದರ ಜೊತೆಗೆ ಅಲ್ಲಿ ಮೀಸಲಾತಿ ಹೋರಾಟ ಕೊಂಚ ಹಿನ್ನಡೆಯಾಗಿದೆ. ಆದರೂ 6ನೇ ಬಾರಿಗೆ ಅಧಿಕಾರಕ್ಕೆ ಬಂದಿರುವುದು ಸಾಮಾನ್ಯ ಮಾತಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ನಮ್ಮದೇ ಆದ ರಣತಂತ್ರವನ್ನು ರೂಪಿಸಿದ್ದೇವೆ. ಮಿಷನ್ 150 ಈಡೇರುವುದರಲ್ಲಿ ಯಾವುದೇ ಅನುಮಾನವಿಲ್ಲ. ಮುಂದಿನ ದಿನಗಳಲ್ಲಿ ಪರಿವರ್ತನಾ ರಥಯಾತ್ರೆ, ಸಂಘಟನೆಗೆ ವಿಶೇಷ ಒತ್ತು ನೀಡಲಾಗುವುದು. ಹೋಬಳಿ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಪಕ್ಷವನ್ನು ಸಂಘಟಿಸುವತ್ತ ಎಲ್ಲ ನಾಯಕರಿಗೆ ಸೂಚಿಸಲಾಗುವುದು ಎಂದು ಹೇಳಿದರು.

Facebook Comments

Sri Raghav

Admin