ಅಸ್ಪತ್ರೆಯಲ್ಲಿ ಜಯಲಲಿತಾ ಚಿಕಿತ್ಸೆ ಪಡೆಯುತ್ತಿದ್ದ ವಿಡಿಯೋ ಬಿಡುಗಡೆ ಮಾಡಿದ ದಿನಕರನ್ ಬಣ

ಈ ಸುದ್ದಿಯನ್ನು ಶೇರ್ ಮಾಡಿ

Jayalalithaa--02

ಚೆನ್ನೈ, ಡಿ.20-ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜೆ.ಜಯಲಲಿತಾ ಅವರ ಸಾವಿನ ಬಗ್ಗೆ ಗೊಂದಲ-ವಿವಾದಗಳು ಕೇಳಿ ಬರುತ್ತಿರುವ ಸಂದರ್ಭದಲ್ಲೇ ಎಐಎಡಿಎಂಕೆಯ ಉಚ್ಛಾಟಿತ ನಾಯಕ ಟಿ.ಟಿ.ವಿ. ದಿನಕರನ್ ಬಣ, ಅಸ್ಪತ್ರೆಯಲ್ಲಿ ಜಯಾ ಚಿಕಿತ್ಸೆ ಪಡೆಯುತ್ತಿದ್ದ ವೀಡಿಯೋ ಬಿಡುಗಡೆ ಮಾಡಿದೆ. ನಾಳೆ ಪ್ರತಿಷ್ಠಿತ ಆರ್.ಕೆ.ನಗರ ವಿಧಾನಸಭೆ ಉಪ ಚುನಾವಣೆ ಸಂದರ್ಭದಲ್ಲೇ ಈ ವೀಡಿಯೋ ದೃಶ್ಯ ಬಿಡುಗಡೆಯಾಗಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಇದೇ ವೇಳೆ ಇದು ಚುನಾವಣಾ ನೀತಿ-ಸಂಹಿತೆ ಉಲ್ಲಂಘನೆಯಾಗಿರುವುದರಿಂದ ದಿನಕರನ್ ಪರಮಾಪ್ತ ವೆಟ್ರಿವೇಲ್ ವಿರುದ್ಧ ಚುನಾವಣಾ ಆಯೋಗ ಎಫ್‍ಐಆರ್ ದಾಖಲಿಸಿದೆ.

ಈ ವಿಡಿಯೋ ಬಗ್ಗೆ ಕೇಂದ್ರ ಚುನಾವಣಾ ಆಯೋಗವು ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಯವರಿಂದ ವರದಿ ಕೇಳಿದೆ. ಜಯಲಲಿತಾ ನಿಧನರಾದ ಒಂದು ವರ್ಷದ ನಂತರ ಬಿಡುಗೆಯಾಗಿರುವ ಈ ದೃಶ್ಯ ಎಲ್ಲರ ಹುಬ್ಬೇರುವಂತೆ ಮಾಡಿದೆ. ಅಕ್ರಮ ಆಸ್ತಿಗಳಿಕೆ ಆರೋಪದ ಮೇಲೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಶಶಿಕಲಾ ನಟರಾಜನ್ ಅವರ ಸಹೋದರ ಸಂಬಂಧಿ ದಿನಕರನ್ ಬಣದಿಂದ ಈ ವೀಡಿಯೋ ಬಿಡುಗಡೆ ಮಾಡಲಾಗಿದೆ.

ರೋಗಗ್ರಸ್ತರಾಗಿ ಸ್ವಲ್ಪ ಕೃಶರಾದಂತೆ ಕಂಡುಬರುತ್ತಿರುವ ಜಯಲಲಿತಾ ಚೆನ್ನೈನ ಅಪೋಲೋ ಆಸ್ಪತ್ರೆಯ ವಿಶೇಷ ತೀವ್ರ ನಿಗಾ ಘಟಕದಲ್ಲಿ ಹಾಸಿಗೆ ಮೇಲೆ ನಿಧಾನವಾಗಿ ಹಣ್ಣಿನ ರಸ ಕುಡಿಯುತ್ತಿರುವ ದೃಶ್ಯ ಈ ವೀಡಿಯೋದಲ್ಲಿದೆ. ಜಯಲಲಿತಾರಿಗೆ ನೀಡಿರುವ ಚಿಕಿತ್ಸಾ ವಿಧಾನಗಳ ಬಗ್ಗೆ ಅಸ್ಪಷ್ಟ ಚಿತ್ರಣ ಇರುವ ಸಂದರ್ಭದಲ್ಲೇ ಈ ವೀಡಿಯೋ ಬಿಡುಗಡೆಯಾಗಿರುವುದು ಕುತೂಹಲಕ್ಕೂ ಕಾರಣವಾಗಿದೆ. ಜಯಲಲಿತಾರನ್ನು ಆಸ್ಪತ್ರೆಗೆ ಕರೆತಂದಾಗಲೇ ಅವರ ಉಸಿರಾಡುತ್ತಿರಲಿಲ್ಲ ಎಂಬ ವರದಿಗಳು ಹೊರಬಿದ್ದ ನಾಲ್ಕು ದಿನಗಳ ನಂತರ ಈ ದೃಶ್ಯ ಹಠಾತ್ ಬಿತ್ತರವಾಗಿರುವುದು ಕೂಡ ಆಸಕ್ತಿ ಕೆರಳಿಸಿದೆ.

ಜಯಲಲಿತಾ ಐಸಿಯುಗೆ ದಾಖಲಾಗಿ ಅವರಿಗೆ ಚಿಕಿತ್ಸೆ ನೀಡುತ್ತಿರುವ ಯಾವುದೇ ದೃಶ್ಯ ಅಪೋಲೋ ಆಸ್ಪತ್ರೆಯ ಆಡಳಿತ ಮಂಡಳಿಯಲ್ಲಿ ಇಲ್ಲ. ಹೀಗಿರುವಾಗ ಇದೇ ಮೊದಲ ಬಾರಿಗೆ ಜಯಾ ಹಣ್ಣಿನ ರಸ ಕುಡಿಯುತ್ತಿರುವ ದೃಶ್ಯ ಬಹಿರಂಗಗೊಂಡಿರುವುದು ರಾಜಕೀಯ ಸಂಚಲನಕ್ಕೂ ಕಾರಣವಾಗಿದೆ. ಇದು ದಿನಕರನ್ ಬಣದ ಚುನಾವಣಾ ಗಿಮಿಕ್ ಎಂದು ಆಡಳಿತಾರೂಢ ಎಐಎಡಿಎಂಕೆ ಹೇಳಿದೆ. ಆರ್.ಕೆ.ನಗರ ಚುನಾವಣೆ ಸಂದರ್ಭದಲ್ಲೇ ಈ ದೃಶ್ಯವನ್ನು ಬಿಡುಗಡೆ ಮಾಡಿರುವುದು ಚುನಾವಣಾ ನೀತಿ ಉಲ್ಲಂಘನೆ ಎಂಬ ವ್ಯಾಪಕ ಆರೋಪಗಳೂ ಕೇಳಿಬರುತ್ತಿವೆ. ಚುನಾವಣಾ ನೀತಿ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲು ಆಯೋಗ ಮುಂದಾಗಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin