ಏತ ನೀರಾವರಿ ಯೋಜನೆ ವಿರೋಧಿಸಿ ಚಿಕ್ಕಬಳ್ಳಾಪುರ ಬಂದ್‍

ಈ ಸುದ್ದಿಯನ್ನು ಶೇರ್ ಮಾಡಿ

Chikkamagaluru--02

ಚಿಕ್ಕಬಳ್ಳಾಪುರ, ಡಿ.20- ಬೆಂಗಳೂರಿನ ಹೆಬ್ಬಾಳ-ನಾಗವಾರ ಕೆರೆಗಳ ಸಂಸ್ಕರಿಸಿದ ನೀರನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳಿಗೆ ಹರಿಸುವ ಏತ ನೀರಾವರಿ ಯೋಜನೆ ವಿರೋಧಿಸಿ ವಿವಿಧ ಸಂಘಟನೆಗಳು ಚಿಕ್ಕಬಳ್ಳಾಪುರ ಬಂದ್‍ಗೆ ಕರೆ ನೀಡಿದ್ದ ವೇಳೆ ಉಂಟಾದ ಗಲಭೆ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ ಪರಿಣಾಮ ಇಬ್ಬರಿಗೆ ಗಾಯಗಳಾಗಿವೆ. ಬಂದ್‍ನ್ನು ವಿಫಲಗೊಳಿಸುವ ನಿಟ್ಟಿನಲ್ಲಿ ಸ್ಥಳೀಯ ಶಾಸಕರ ಬೆಂಬಲಿಗರು ಪ್ರಯತ್ನ ನಡೆಸಿದ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದು ಪ್ರಕ್ಷುಬ್ಧ ವಾತಾವರಣ ಉಂಟಾಯಿತು.

ಪ್ರತಿಭಟನಾ ನಿರತರು ಮತ್ತು ಶಾಸಕರ ಬೆಂಬಲಿಗರ ನಡುವೆ ಕೈ ಕೈ ಮಿಲಾಯಿಸುವ ಹಂತ ತಲುಪಿತು. ಎರಡು ಗುಂಪುಗಳ ನಡುವೆ ನಡೆಯುವ ಘರ್ಷಣೆ ತಡೆಯುವ ದಿಸೆಯಲ್ಲಿ ಪೊಲೀಸರು ಗುಂಪುಗಳನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದರು. ಇದರ ಪರಿಣಾಮ ಇಬ್ಬರಿಗೆ ತೀವ್ರತರನಾದ ಗಾಯಗಳಾಗಿದ್ದು , ಇಲ್ಲಿನ ಜೀವನ್ ಮತ್ತು ಸರ್ಕಾರಿ ಆಸ್ಪತ್ರೆಗಳಿಗೆ ಗಾಯಾಳುಗಳನ್ನು ಸೇರಿಸಲಾಗಿದೆ.

WhatsApp Image 2017-12-20 at 9.30.44 AM

ಇಂದು ನಸುಕಿನ ಜಾವ 5 ಗಂಟೆಯಿಂದಲೇ ಕನ್ನಡ ಪರ ಸಂಘಟನೆಗಳೂ ಸೇರಿದಂತೆ ಶಾಶ್ವತ ನೀರಾವರಿ ಹೋರಾಟ ಸಮಿತಿ ಕಾರ್ಯಕರ್ತರು ನಗರದ ಪ್ರಮುಖ ರಸ್ತೆಗಳ ಮೂಲಕ ಪಂಜಿನ ಮೆರವಣಿಗೆ ನಡೆಸಿ ಎಚ್.ಎನ್.ವ್ಯಾಲಿ ವಿರುದ್ದ ಘೋಷಣೆಗಳನ್ನು ಕೂಗಿದರು ನಗರದ ಶಿಡ್ಲಘಟ್ಟ ವೃತ್ತದಲ್ಲಿ ಧರಣಿ ನಡೆಸುತ್ತಿದ್ದರು. ಪ್ರತಿಭಟನೆ ಶಾಂತಿಯುತವಾಗಿ ನಡೆಯುತ್ತಿತ್ತು. ಆದರೆ ಸ್ಥಳೀಯ ಶಾಸಕರ ಕುಮ್ಮಕ್ಕಿನಿಂದಾಗಿ ಅವರ ಬೆಂಬಲಿಗರ ಗುಂಪೊಂದು ಕೆ.ಸಿ.ವ್ಯಾಲಿ ಪರ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆಯ ಸ್ಥಳಕ್ಕೆ ನುಗ್ಗಿದಾಗ ಕಾವೇರಿದ ವಾತಾವರಣ ಉಂಟಾಗಿತ್ತು.

ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿ ಶಾಸಕರ ಗುಂಪನ್ನು ವಾಪಸ್ ಕಳುಹಿಸಿದರು ಆದರೆ ಶಾಸಕರ ಗುಂಪು ಮೋಟಾರು ಬೈಕ್‍ಗಳಲ್ಲಿ ಪ್ರತಿಭಟನಾ ನಿರತರ ಮೇಲೆ ನುಗ್ಗಿ ಮುಂದಕ್ಕೆ ಹೋಗಲು ಯತ್ನಿಸಿದಾಗ ಪ್ರತಿಭಟನಾಕಾರರು ಸಹ ಕೆರಳಿದರು. ಈ ವೇಳೆ ಎರಡೂ ಗುಂಪುಗಳನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.

WhatsApp Image 2017-12-20 at 9.30.42 AM

ಮಾರುಕಟ್ಟೆಗಳು ಬಿಕೋ: ಖಾಸಗಿ ಬಸ್‍ಗಳು ಹೊರತುಪಡಿಸಿ ಕೆಎಸ್‍ಆರ್‍ಟಿಸಿ ಬಸ್ ಸಂಚಾರ ಸಹಾ ವಿರಳವಾಗಿತ್ತು. ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಎಂದಿನಂತೆ ಜನಜಂಗುಳಿಯಿಂದ ಕೂಡಿದ್ದ ಎಪಿಎಂಸಿ ಮಾರುಕಟ್ಟೆ ಪ್ರಾಂಗಣ ಬಿಕೋ ಎನ್ನುತ್ತಿತ್ತು. ಬೆಳಿಗ್ಗೆ 8 ಗಂಟೆಯವರೆವಿಗೆ ಪೆಟ್ರೋಲ್ ಬಂಕ್‍ಗಳು ತೆರೆದಿದ್ದವಾದರೂ ನಂತರ ಪೆಟ್ರೋಲ್ ಬಂಕ್‍ಗಳು ಬಂದ್ ಮಾಡಿದ್ದವು ಸಿನಿಮಾ ಮಂದಿರಗಳು ತೆರೆದಿರಲಿಲ್ಲ ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿತ್ತು ಬಹುತೇಕ ವ್ಯಾಪಾರಸ್ಥರು ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್‍ಗೆ ಸಾಥ್ ನೀಡಿದರು.

ಬಂದ್‍ಗೆ ಜೆಡಿಎಸ್, ಬಿಜೆಪಿ ಬೆಂಬಲ :

ಚಿಕ್ಕಬಳ್ಳಾಪುರ, ಡಿ.20- ಇಂದು ವಿವಿಧ ಸಂಘಟನೆಗಳು ಕರೆ ನೀಡಿದ್ದ ಚಿಕ್ಕಬಳ್ಳಾಪುರ ಬಂದ್‍ಗೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳೂ ಸಹಾ ಸಾಥ್ ನೀಡಿದವು. ಆದರೆ ಮಂಗಳವಾರ ರಾತ್ರಿ 10 ಗಂಟೆ ಸುಮಾರಿನಲ್ಲಿ ಶಾಸಕ ಸುಧಾಕರ್ ಅವರ ಬೆಂಬಲಿಗರು ಆಟೋಗಳಲ್ಲಿ ಬಂದ್ ಇಲ್ಲ ಎಂಬ ಪ್ರಚಾರವನ್ನು ನಡೆಸಿ ಜನತೆಯಲ್ಲಿ ಗೊಂದಲ ಉಂಟು ಮಾಡಿದರು. ಇದರಿಂದ ಕೆರಳಿದ ಶಾಶ್ವತ ನೀರಾವರಿ ಹೋರಾಟಗಾರರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಮತ್ತು ಸಂಘ-ಸಂಸ್ಥೆಗಳ ಮುಖಂಡರು ಬೆಳಿಗ್ಗೆ 5ರಿಂದಲೆ ಪಂಜಿನ ಮೆರವಣಿಗೆ ನಡೆಸಿ ನಗರದ ಅಂಬೇಡ್ಕರ್ ವೃತ್ತದ ರಸ್ತೆ ತಡೆ ಮಾಡಿದರು. ಒಟ್ಟಾರೆಯಾಗಿ ಬಂದ್ ಬಹುತೇಕ ಯಶಸ್ವಿಯಾಗಿದೆ.  ಬಂದ್‍ನ ಈ ವೇಳೆ ಶಾಶ್ವತ ನೀರಾವರಿ ಹೋರಾಟ ಸಮಿತಿ ಜಿಲ್ಲಾದ್ಯಕ್ಷ ಆರ್.ಆಂಜನೇಯರೆಡ್ಡಿ, ಸುಷ್ಮಾ ಶ್ರೀನಿವಾಸ್, ಮಳ್ಳೂರು ಹರೀಶ್, ಕನ್ನಡಪರ ಸಂಘಟನೆಗಳ ಮುಖಂಡರಾದ ಶ್ರೀರಾಮೇಗೌಡ, ಆನಂದ್, ರಾಮಚಂದ್ರ, ಭಾಜಪ ಜಿಲ್ಲಾಧ್ಯಕ್ಷ ಡಾ.ಮಂಜುನಾಥ್, ಮುಖಂಡರಾದ ಪ್ರೇಮಲೀಲಾ ವೆಂಕಟೇಶ್, ಎಸ್ಸಿ ಮೋರ್ಚಾದ ಹನುಮಂತಪ್ಪ, ಸೇರಿದಂತೆ ಇನ್ನಿತರ ಮುಖಂಡರು ಭಾಗವಹಿಸಿದ್ದರು.

Facebook Comments

Sri Raghav

Admin