ಚರ್ಮ ಉತ್ಪನ್ನ ಮಾರಾಟ ಮಳಿಗೆಗಳ ಸ್ಥಾಪಿಸಲು ಸರ್ಕಾರಿ ಭೂಮಿ

ಈ ಸುದ್ದಿಯನ್ನು ಶೇರ್ ಮಾಡಿ

Anjaneya--01

ಬೆಂಗಳೂರು, ಡಿ.20-ರಾಜ್ಯದ ತಾಲೂಕು, ನಗರ ಹಾಗೂ ಪಾಲಿಕೆ ವ್ಯಾಪ್ತಿಯಲ್ಲಿ ಚರ್ಮ ಉತ್ಪನ್ನ ಮಾರಾಟ ಮಳಿಗೆಗಳನ್ನು ಸ್ಥಾಪಿಸಲು ಸರ್ಕಾರಿ ಭೂಮಿ ನೀಡಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಆಂಜನೇಯ ಭರವಸೆ ನೀಡಿದ್ದಾರೆ. ನಗರದ ಫ್ರೀಡಂ ಪಾರ್ಕ್‍ನಲ್ಲಿಂದು ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮ ನಿಯಮಿತದ ವತಿಯಿಂದ ಹಮ್ಮಿಕೊಂಡಿದ್ದ ನಾಲ್ಕು ದಿನಗಳ ರಾಜ್ಯ ಮಟ್ಟದ ಚರ್ಮ ಕರಕುಶಲಕರ್ಮಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಚರ್ಮ ಉತ್ಪನ್ನಗಳನ್ನು ತಯಾರಿಸುವ ಕುಶಲಕರ್ಮಿಗಳು ಆರ್ಥಿಕವಾಗಿ ತೀರ ಹಿಂದುಳಿದಿದ್ದಾರೆ. ಹೀಗಾಗಿ ಅವರಿಗೆ ಮಳಿಗೆಗಳ ಅನುಕೂಲ ಕಲ್ಪಿಸಿದರೆ ಸಾಕಷ್ಟು ಉಪಯೋಗವಾಗಲಿದೆ. ಈ ನಿಟ್ಟಿನಲ್ಲಿ ಪಾಲಿಕೆ ವ್ಯಾಪ್ತಿಗಳಲ್ಲಿ ಹತ್ತು ಅಡಿ ಜಾಗ ನೀಡಲು ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ಕೆಲ ವರ್ಗದವರ ವಿರೋಧ ಎದುರಾಗಿದೆ ಎಂದರು.

ಒಂದು ಕಾಲದಲ್ಲಿ ತೀರಾ ಹಿಂದುಳಿದಿದ್ದ ಪಾದರಕ್ಷೆ ತಯಾರಿಕಾ ಉದ್ಯಮ ಇದೀಗ ಬಂಡವಾಳಗಾರರಿಂದಾಗಿ ಹೆಚ್ಚು ವ್ಯಾಪಕವಾಗಿದೆ. ಈ ಉದ್ಯಮವನ್ನು ಅವರೇ ಆಕ್ರಮಿಸಿದ್ದಾರೆ. ಇಂತಹ ಕುಶಲಕರ್ಮಿಗಳು ತಯಾರಿಸುವ ವಸ್ತುಗಳನ್ನು ಬಾಟಾ ಸೇರಿದಂತೆ ಇನ್ನಿತರ ವಿವಿಧ ಕಂಪೆನಿಗಳು ತಮ್ಮ ಶೋರೂಂಗಳಲ್ಲಿ ಮಾರಾಟ ಮಾಡುತ್ತಿವೆ ಎಂದರು.

ಬೀದಿ ಬದಿ ಚರ್ಮ ಉತ್ಪನ್ನ ಮಾರಾಟ ಮಳಿಗೆಗಳನ್ನು ಹೆಚ್ಚಿಸಬೇಕಾಗಿದೆ. ಇದರಿಂದ ನಿರುದ್ಯೋಗ ಸಮಸ್ಯೆಯೂ ದೂರವಾಗಲಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ಚರ್ಮ ಉತ್ಪನ್ನ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತಾರಗೊಳಿಸುವ ಮೂಲಕ ಇಂತಹ ಉದ್ಯಮ ಬೆಳೆಸುವ ಅವಶ್ಯಕತೆ ಇದೆ ಎಂದರು. ನಿಗಮದ ಅಧ್ಯಕ್ಷ ಓ.ಶಂಕರ್ ಮಾತನಾಡಿ,ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಾಬು ಜಗಜೀವನರಾಂ ಚರ್ಮ ಮತ್ತು ಕೈಗಾರಿಕಾ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಿದ್ದರು. ಇದೀಗ ಈ ಕುಶಲಕರ್ಮಿಗಳು ತಯಾರಿಸುವ ವಸ್ತುಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸಬೇಕಾಗಿದೆ ಎಂದರು. ಕಾರ್ಯಕ್ರಮದಲ್ಲಿ ವ್ಯವಸ್ಥಾಪಕ ನಿರ್ದೇಶಕ ಎಚ್.ನಟರಾಜ್, ಸಮಾಜ ಕಲ್ಯಾಣ ಇಲಾಖೆ ಆಯುಕ್ತ ವಿಕಾಸ್‍ಕುಮಾರ್, ಅಪರ ಮುಖ್ಯಕಾರ್ಯದರ್ಶಿ ಎಂ.ಲಕ್ಷ್ಮಿನಾರಾಯಣ್ ಮತ್ತಿತರರು ಉಪಸ್ಥಿತರಿದ್ದರು.

Facebook Comments

Sri Raghav

Admin