ಹುಬ್ಬಳ್ಳಿಯ ಪರಿವರ್ತನಾಯಾತ್ರೆ ಸಮಾವೇಶಕ್ಕೆ ಆಗಮಿಸುತ್ತಿದ್ದಾರೆ ಯೋಗಿ ಆದಿತ್ಯನಾಥ್

ಈ ಸುದ್ದಿಯನ್ನು ಶೇರ್ ಮಾಡಿ

Yogi-Adityanath--01

ಬೆಂಗಳೂರು,ಡಿ.20-ರಾಜ್ಯದಲ್ಲಿ ಕೆಲವೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ಬರಲಿದೆ.ರಾಜ್ಯ ಬಿಜೆಪಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ಮೊದಲಿನಿಂದ ತನ್ನದೇ ಆದ ತಂತ್ರಗಳನ್ನು ಹೆಣೆಯುತ್ತಿದೆ. ತೆರೆಮರೆಯಲ್ಲಿಯೂ ಸಾಕಷ್ಟು ಕಸರತ್ತು ನಡೆಸುತ್ತಿದ್ದು, ನಾಳೆ ಹುಬ್ಬಳ್ಳಿಯ ಪರಿವರ್ತನಾಯಾತ್ರೆ ಸಮಾವೇಶಕ್ಕೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಗಮಿಸಲಿದ್ದಾರೆ. ಉತ್ತರ ಕರ್ನಾಟಕದ ಹೆಬ್ಬಾಗಿಲು ಹುಬ್ಬಳ್ಳಿಯಲ್ಲಿ ನಡೆಯುವ ಪರಿವರ್ತನಾ ಯಾತ್ರೆಗೆ ಯೋಗಿ ಅದಿತ್ಯನಾಥ್ ಕರೆತರುವ ಮೂಲಕ ಹೊಸ ಸಂಚಲನ ಮೂಡಿಸಲು ಬಿಜೆಪಿ ಮುಂದಾಗಿದೆ.

ಗುಜರಾತ್ ಫಲಿತಾಂಶ ರಾಜ್ಯ ಬಿಜೆಪಿ ನಾಯಕರಿಗೆ ಹೊಸ ಉತ್ಸಾಹ ತುಂಬಿದ್ದು, ಮುಂದಿನ ವಿಧಾನಸಭಾ ಚುನಾವಣೆಗೆ ಅಧಿಕೃತ ರಣಕಹಳೆ ಮೊಳಗಿಸಲು 75 ದಿನಗಳ ಪರಿವರ್ತನಾ ಯಾತ್ರೆ ನಾಳೆ ಹುಬ್ಬಳ್ಳಿಗೆ ಆಗಮಿಸಲಿದೆ. ನೆಹರು ಮೈದಾನದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಪ್ರಮುಖ ಭಾಷಣಕಾರರಾಗಿ ಉತ್ತರ ಪ್ರದೇಶದ ಸಿಎಂ, ಫೈರ್ ಬ್ರ್ಯಾಂಡ್ ಆಗಿರುವ ಯೋಗಿ ಆದಿತ್ಯನಾಥ್ ಭಾಗವಹಿಸುತ್ತಿದ್ದಾರೆ. ಮತ್ತೊಂದೆಡೆ ಇದೇ ಸಮಾವೇಶದಲ್ಲಿ ಉತ್ತರ ಕರ್ನಾಟಕದ ದಶಕಗಳ ಬೇಡಿಕೆಯಾದ ಮಹದಾಯಿ ವಿವಾದ ಬಗೆಹರಿಸಿ, ರೈತರಿಗೆ ಉಡುಗೊರೆಯಾಗಿ ನೀಡುವ ಸಾಧ್ಯತೆಯಿದೆ.

ಈಗಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಗೋವಾ ಮುಖ್ಯಮಂತ್ರಿ ಮಾತುಕತೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಪರಿವರ್ತನಾಯಾತ್ರೆ ವೇಳೆ ಮಹದಾಯಿ ವಿಚಾರ ಘೋಷಣೆಯಾಗುವ ಸಾಧ್ಯತೆ ಇದೆ.  ಇದರ ಜೊತೆ ಪ್ರಮುಖವಾಗಿ ಕಳಸಾ-ಬಂಡೂರಿ, ಮಹದಾಯಿ ಯೋಜನೆಯ ಜಾರಿ ಕುರಿತಂತೆ ಸ್ವಲ್ಪ ಪ್ರಮಾಣದಲ್ಲಿ ನೀರು ಹರಿಸುವ ಕುರಿತು ಘೋಷಣೆ ಮಾಡುವ ಸಾಧ್ಯತೆ ಇದೆ. ಶತಾಯಗತಾಯ ಮಹದಾಯಿ ಯೋಜನೆ ಕುರಿತಂತೆ ಒಂದು ತಾರ್ಕಿಕ ಅಂತ್ಯ ಕಾಣಲು ಬಿಜೆಪಿ ಮುಂದಾಗಿದೆ. ಆದ್ದರಿಂದ ಕಳೆದ ಒಂದು ವಾರದಿಂದ ಗೋವಾ ಮುಖ್ಯಮಂತ್ರಿ ಪರಿಕ್ಕರ್ ಜೊತೆ ಬಿಜೆಪಿ ಹಿರಿಯ ನಾಯಕರು ಸರಣಿ ಸಭೆಯನ್ನು ನಡೆಸುತ್ತಿದ್ದಾರೆ.

ಕಳೆದ ಎರಡು ದಿನಗಳಿಂದ ಈ ಕುರಿತು ಸಿಹಿ ಸುದ್ದಿ ನೀಡಲು ಮುಂದಾಗಿದ್ದಾರೆ. ಅದು ಹುಬ್ಬಳ್ಳಿಯ ಪರಿವರ್ತನಾರಾಲಿಯಲ್ಲಿಯೇ ಪ್ರಕಟಿಸಿದರೆ ಮುಂದಿನ ಸಾರ್ವತ್ರಿಕ ಚುನಾವಣೆಗೆ ಅನುಕೂಲವಾಗಲಿದೆ ಎಂಬ ರಾಜಕೀಯ ಲೆಕ್ಕಾಚಾರ. ಆರು ತಿಂಗಳ ಅಂತರದಲ್ಲಿ ಚುನಾವಣೆ ಇದೆ. 96 ವಿಧಾನಸಭಾ ಕ್ಷೇತ್ರಗಳು ಇದೇ ಭಾಗದಲ್ಲಿವೆ. ಉತ್ತರ ಕರ್ನಾಟಕಕ್ಕೆ ಯೋಗಿಯ ಆಗಮನವಾದರೆ ಬಿಜೆಪಿ ಪಾಲಿಗೆ ಹೊಸ ಸಂಚಲನ ಮೂಡಲಿದೆ ಎಂಬುದು ಬಿಜೆಪಿಯ ಮತ್ತೊಂದು ಲೆಕ್ಕಾಚಾರವಾಗಿದೆ.

ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಯಡಿಯೂರಪ್ಪ ಸ್ಥಾಪಿಸಿದ್ದ ಕೆಜೆಪಿ ಸವಾಲಾಗಿತ್ತು. ಐವತ್ತಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕೆಜೆಪಿ ಸ್ಪರ್ಧೆಯಿಂದ ಬಿಜೆಪಿಗೆ ಕೆಲವೇ ಮತಗಳ ಅಂತರದಿಂದ ಸೋಲಾಗಿತ್ತು.ಕೆಜೆಪಿ ರಾಜ್ಯದಲ್ಲಿ ಪ್ರಭಾವ ಬೀರಲು ಸಾಧ್ಯವಾಗಿಲ್ಲವಾದರೂ ಬಿಜೆಪಿಯ ಜಯದ ಆಸೆಗೆ ಅಡ್ಡಗಾಲಾಗಿತ್ತು. ಸದ್ಯ ಯಡಿಯೂರಪ್ಪರಾಜ್ಯ ಬಿಜೆಪಿ ಸಾರಥಿ. ಯೋಗಿ ಆದಿತ್ಯನಾಥ್ ಮೂಲಕ, ಪ್ರಖರ ಹಿಂದುತ್ವವಾದ ಮುನ್ನೆಲೆಗೆ ತಂದು ಜನರನ್ನು ಸೆಳೆಯುವುದು ಬಿಜೆಪಿ ನಾಯಕರ ಉದ್ದೇಶ ಇದಾಗಿದೆ.

ಗುಜರಾತ್ ಚುನಾವಣಾ ಫಲಿತಾಂಶದಲ್ಲಿ ಹಿನ್ನಡೆ ಕಂಡರೂ ಬಿಜೆಪಿ ಗೆಲುವನ್ನು ಸಂಭ್ರಮಿಸಿದೆ. ಅದರ ಪರಿಣಾಮ ಮುಂಬರುವ ರಾಜ್ಯಗಳ ಚುನಾವಣೆಗಳ ಮೇಲೆ ಅಲ್ಪಮಟ್ಟಿಗಾದರೂ ಆಗುವುದು ಸಹಜ. ದಕ್ಷಿಣ ಭಾರತ ಮಾತ್ರ ಬಿಜೆಪಿಗೆ ಮೊದಲಿನಿಂದಲೂ ನುಂಗಲಾರದ ತುತ್ತಾಗಿದೆ. ಒಂದು ಸಲ ಕಮಲ ಪಾಳೆಯಕ್ಕೆ ಅಧಿಕಾರ ನೀಡಿದ್ದ ಮತದಾರ ನಂತರ ಕಮಲವನ್ನು ಅರಳಲು ಬಿಟ್ಟಿರಲಿಲ್ಲ. ಇದೆಲ್ಲ ಬಿಜೆಪಿ ನಾಯಕರ ಗಮನದಲ್ಲಿದ್ದು, ಗುಜರಾತ್‍ಚುನಾವಣಾ ಫಲಿತಾಂಶ, ಯೋಗಿ ಆಗಮನ, ಕಳಸಾ-ಬಂಡೂರಿ, ಮಹದಾಯಿ ಬಗ್ಗೆ ಭರವಸೆ ಹೀಗೆ ತಮ್ಮದೇ ತಂತ್ರಗಳ ಮೂಲಕ ಬಿಜೆಪಿಯ ಅಲೆಯನ್ನು ಜೀವಂತವಾಗಿಡುವ ಪ್ರಯತ್ನ ನಡೆದಿದೆ.

ಕಳೆದ ಲೋಕಸಭಾಚುನಾವಣೆ ವೇಳೆ ಉತ್ತರ ಕರ್ನಾಟಕದಲ್ಲಿ ಚುನಾವಣಾ ಪ್ರಚಾರಕ್ಕಾಗಿ ಮೋದಿ ಬಂದಿದ್ದರು. ಉತ್ತರಕರ್ನಾಟಕದಿಂದ ಹೆಚ್ಚಿನ ಸಂಸದರು ಆಯ್ಕೆಯಾಗಲು ಇದು ಕಾರಣವಾಗಿತ್ತು ಎಂಬುದು ಗಮನಾರ್ಹ.  ಅಮಿತ್ ಷಾ ನಂತರ ರಾಷ್ಟ್ರ ಬಿಜೆಪಿಯ ಪ್ರಬಲ ನಾಯಕ ಎನ್ನಲಾಗಿರುವ ಉತ್ತರ ಪ್ರದೇಶ ಮುಖ್ಯಮಂತ್ರಿಯನ್ನು ಪರಿವರ್ತನಾ ಯಾತ್ರೆಗೆ ಕರೆಸುವ ಮೂಲಕ ಬಿಜೆಪಿ ನಾಯಕರು ಹಳೇ ತಂತ್ರಕ್ಕೆ ಮೊರೆಹೋಗಿದ್ದಾರೆ.   ಈ ಮೊದಲು ಧಾರವಾಡ, ಗದಗ, ಹಾವೇರಿಗಳನ್ನೊಳಗೊಂಡು ಹುಬ್ಬಳ್ಳಿಯಲ್ಲಿ ಕಾರ್ಯಕ್ರಮಕ್ಕೆ ಬಿಜೆಪಿ ಮುಂದಾಗಿತ್ತು. ನಂತರದಲ್ಲಿ ಮೂರು ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಬಿಜೆಪಿ ಪರಿವರ್ತನಾಯಾತ್ರೆ ನಡೆಸಲು ಮುಂದಾಗಿದೆ.

ಜ.28ರಂದು ಬೆಂಗಳೂರಿನಲ್ಲಿ ಪರಿವರ್ತನಾಯಾತ್ರೆ ಮುಕ್ತಾಯಕಾಣಲಿದೆ. ಕಳೆದ ನ.2ರಂದು ಅಮಿತ್ ಷಾ ಉದ್ಘಾಟನೆ ನೆರವೇರಿಸಿದ್ದರು. ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ.
ಕಳೆದುಹೋದ ವರ್ಚಸ್ಸನ್ನು ಮತ್ತೆ ಪಡೆದುಕೊಳ್ಳುವುದು ಬಿಜೆಪಿಯ ಉದ್ದೇಶ. ಮಹದಾಯಿ ಹೋರಾಟ ಕೂಡ ನಿರಂತರವಾಗಿದೆ. ಈ ಹೊತ್ತಲ್ಲಿರಾಜ್ಯ ಬಿಜೆಪಿ ನಾಯಕರು ಯೋಗಿ ಆದಿತ್ಯನಾಥರನ್ನು ಕರೆಸುವ ಮೂಲಕ ಮತ್ತೊಂದು ದಾಳ ಉರುಳಿಸಲು ಮುಂದಾಗಿದ್ದಾರೆ. ಪರಿವರ್ತನಾ ಯಾತ್ರೆ ಸಮಾವೇಶದಲ್ಲಿಯೇ ಉತ್ತರಕರ್ನಾಟಕದ ರೈತರಿಗೆ ಮಹದಾಯಿ ಕುರಿತು ಶುಭಸುದ್ದಿ ನೀಡಲಿದ್ದೇವೆ ಎಂದಿರುವ ಬಿಜೆಪಿ ನಾಯಕರ ಮಾತಿಗೆ ಹುಬ್ಬಳ್ಳಿ ಸಮಾವೇಶದಲ್ಲಿಯೇ ಉತ್ತರ ಸಿಗಲಿದೆ.

Facebook Comments

Sri Raghav

Admin