20 ವರ್ಷದ ಯುವತಿಯನ್ನು ಗ್ಯಾಂಗ್ ರೇಪ್ ಮಾಡಿದ ಐವರು ಬಾಲಕರು..!

ಈ ಸುದ್ದಿಯನ್ನು ಶೇರ್ ಮಾಡಿ

Gang-Rape-02

ನವದೆಹಲಿ, ಡಿ.22-ಅತ್ಯಾಚಾರಗಳ ರಾಜಧಾನಿ ಎಂದೇ ಕುಖ್ಯಾತಿ ಪಡೆದಿರುವ ದೆಹಲಿಯಲ್ಲಿ ಗ್ಯಾಂಗ್-ರೇಪ್ ಪ್ರಕರಣಗಳು ಮರುಕಳಿಸುತ್ತಿವೆ. 20 ವರ್ಷದ ಯುವತಿ ಮೇಲೆ ಐವರು ಬಾಲಕರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಜಹಂಗಿರ್‍ಪುರಿಯಲ್ಲಿ ನಡೆದಿದ್ದು, ಮಹಿಳೆಯರು ಬೆಚ್ಚಿ ಬೀಳುವಂತಾಗಿದೆ. ಐದು ದಿನಗಳ ಹಿಂದಷ್ಟೇ ದೆಹಲಿ ಶಾಲಿಮಾರ್ ಭಾಗ್‍ನಲ್ಲಿ ಮೂವರು ಯುವಕರಿಂದ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಅದರ ಬೆನ್ನಲ್ಲೇ ಮತ್ತೊಂದು ಹೀನ ಕೃತ್ಯ ನಡೆದಿದೆ.

ಜಹಂಗೀರ್‍ಪುರಿಯಲ್ಲಿನ ನಗರಸಭೆ ಕಸ ಸುರಿಯುವ ಪ್ರದೇಶದ ಬಳಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಈ ಸಂಬಂಧ ಸಂತ್ರಸ್ತೆ ನೀಡಿದ ದೂರನ್ನು ಆಧರಿಸಿ ಜಹಂಗೀರ್‍ಪುರಿ ಠಾಣೆ ಪೊಲೀಸರು ಐವರು ಬಾಲಕರನ್ನು ಬಂಧಿಸಿದ್ದಾರೆ. ಶಾಲೆಯನ್ನು ಅರ್ಧಕ್ಕೆ ತ್ಯಜಿಸಿರುವ ಈ ಬಾಲಕರು ಕಸ ಸುರಿಯುವ ಸ್ಥಳದಲ್ಲಿ ಅರೆಕಾಲಿಕ ಕೆಲಸ ಮಾಡುತ್ತಿದ್ದರು. ಅಲ್ಲಿ ಕಾಲೋನಿ ಬಳಿ ವಾಸವಾಗಿರುವ ಇವರಿಗೆ ಯುವತಿಯ ಪರಿಚಯವಿತ್ತು.

ಬುಧವಾರ ರಾತ್ರಿ 10 ಗಂಟೆಯಲ್ಲಿ ಆಕೆ ಮನೆಯಿಂದ ಹೊರಗೆ ಬಂದಾಗ ಐವರು ಬಾಲಕರು ಆಕೆಯನ್ನು ಹತ್ತಿರದ ಅಪಾರ್ಟ್‍ಮೆಂಟ್‍ನ ನಿರ್ಜನ ಪ್ರದೇಶಕ್ಕೆ ಎಳೆದೊಯ್ಡು ಕಿರುಚಾಡಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿ ಸಾಮೂಹಿಕ ಅತ್ಯಾಚಾರ ಎಸಗಿದರು. ನಂತರ ಈ ವಿಷಯವನ್ನು ಯಾರಿಗೂ ತಿಳಿಸಿದಂತೆ ಎಚ್ಚರಿಕೆ ನೀಡಿದ್ದರು. ಬಂಧಿತ ಬಾಲಕರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಈ ಘಟನೆ ಸಂಬಂಧ ಆಕೆಯ ಗೆಳೆಯನನ್ನು ವಿಚಾರಣೆಗೆ ಒಳಪಡಿಸಲಾಗಿದೆ.

Facebook Comments

Sri Raghav

Admin