3 ದಿನಗಳ ಛಾಯಾಚಿತ್ರ ಪ್ರದರ್ಶನಕ್ಕೆ ಸಚಿವ ರಾಮಲಿಂಗಾರೆಡ್ಡಿ, ಯಶ್ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

photo--02

ಬೆಂಗಳೂರು,ಡಿ.22- ಆಕಸ್ಮಿಕ ಘಟನೆಗಳು ಜರುಗಿದಾಗ ಅಪರೂಪದ ಛಾಯಾಚಿತ್ರ ಸೆರೆ ಹಿಡಿಯುವುದು ಒಂದು ಕಲೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ಫೋಟೋ ಜರ್ನಲಿಸ್ಟ್ ಅಸೋಸಿಯೇಷನ್ ಆಫ್ ಬೆಂಗಳೂರು ವತಿಯಿಂದ ಚಿತ್ರಕಲಾ ಪರಿಷತ್‍ನಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಛಾಯಾಚಿತ್ರ ಪ್ರದರ್ಶನವನ್ನು ಇಂದು ಉದ್ಘಾಟಿಸಿ ಮಾತನಾಡಿದ ಅವರು, ಒಳ್ಳೆಯ ಫೋಟೊಗಳನ್ನು ತೆಗೆಯುವುದು ಸುಲಭದ ಕೆಲಸವಲ್ಲ. ಅದಕ್ಕೆ ಸಾಕಷ್ಟು ತಾಳ್ಮೆ, ವ್ಯವಧಾನ ಇರಬೇಕು ಎಂದರು.

ಈ ಪ್ರದರ್ಶನದಲ್ಲಿ ಅಪರೂಪದ ಮತ್ತು ಉತ್ತಮವಾದ ಫೋಟೋಗಳನ್ನು ಪ್ರದರ್ಶಿಸಲಾಗಿದೆ ಎಂದು ಮೆಚ್ಚುಗೆಯ ನುಡಿಗಳನ್ನಾಡಿದರು. ವಿಜಯಪುರದ ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣವನ್ನು ಈಗಾಗಲೇ ಸಿಐಡಿ ತನಿಖೆಗೆ ವಹಿಸಲಾಗಿದೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು. ಆರೋಪಿಗಳು ಯಾವುದೇ ಪಕ್ಷದವರಾಗಿರಲಿ ಅಥವಾ ಇಲ್ಲದಿರಲಿ ಅವರಿಗೆ ಶಿಕ್ಷೆಯಾಗಬೇಕೆಂದು ಹೇಳಿದರು. ರಾಕಿಂಗ್ ಸ್ಟಾರ್ ಯಶ್  ಮಾತನಾಡಿ, ಜೀವನದ ನೆನಪುಗಳನ್ನು ಛಾಯಾಚಿತ್ರದ ಮೂಲಕ ಸೆರೆ ಹಿಡಿಯುವುದು ಸಾಮಾನ್ಯವಲ್ಲ. ಅದು ಕಾಲವನ್ನೇ ಸೆರೆ ಹಿಡಿದಂತೆ. ಒಂದು ಛಾಯಾಚಿತ್ರವನ್ನು ನೋಡಿದಾಕ್ಷಣ ಅದನ್ನು ಸೆರೆ ಹಿಡಿದ ಸಂದರ್ಭ, ಕಾಲ ಎಲ್ಲವನ್ನು ನೆನಪಿಗೆ ತರುತ್ತದೆ ಎಂದರು.

ಛಾಯಾಗ್ರಾಹಕರು ಪ್ರದರ್ಶಿಸಿರುವ ಛಾಯಾಚಿತ್ರಗಳು ಸಾಕಷ್ಟು ನೋವು, ಹಸಿವು, ಕಷ್ಟಗಳಿಗೆ ಸಂಬಂಧಿಸಿವೆ. ಅಲ್ಲದೆ ಸಾಕಷ್ಟು ಖುಷಿ ಘಟನೆಗಳು ನಡೆದಿರುತ್ತವೆ. ಅಂತಹ ವಿಷಯಗಳಿಗೆ ಸಂಬಂಧಿಸಿದ ಛಾಯಾಚಿತ್ರಗಳನ್ನು ಪ್ರದರ್ಶಿಸಬೇಕು ಎಂದ ಅವರು, ಛಾಯಾಚಿತ್ರಗಳು ಸತ್ಯ ಹೇಳುವುದರಿಂದ ಸಕಾರಾತ್ಮಕ ಧೋರಣೆಯನ್ನು ಹೊಂದಿರುತ್ತವೆ ಎಂದು ಹೇಳಿದರು. ಕೆಜಿಎಫ್ ಸಿನಿಮಾ ಶೂಟಿಂಗ್ ನಡೆಯುತ್ತಿದ್ದು, ಅದ್ಭುತವಾಗಿ ಮೂಡಿಬರುತ್ತಿದೆ. ಇದೊಂದು ಉತ್ತಮ ಚಲನಚಿತ್ರವಾಗಲಿದೆ ಎಂದ ಯಶ್, ನನಗೆ ರಾಜಕೀಯದ ಬಗ್ಗೆ ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ನಾನು ಎಂದಿಗೂ ಜನಸೇವಕನಾಗೇ ಇರುತ್ತೇನೆ ಹೊರತು ಜನನಾಯಕನಾಗಲು ಇಷ್ಟಪಡುವುದಿಲ್ಲ ಎಂದರು. ವಿವಿಧ ಮಾಧ್ಯಮಗಳ ಛಾಯಾಗ್ರಾಹಕರು ಪ್ರದರ್ಶಿಸಿದ್ದ ಛಾಯಾಚಿತ್ರಗಳಲ್ಲಿ ಬಡತನ, ಹಸಿವು, ಕೂಲಿಕಾರ್ಮಿಕರ ಸಮಸ್ಯೆ, ಪ್ರತಿಭಟನೆ, ಬರ, ನೆರೆ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದ್ದವುಗಳಾಗಿದ್ದು , ಜನರಿಂದ ಮೆಚ್ಚುಗೆ ಗಳಿಸಿದವು.

ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಸಿದ್ದರಾಜು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎನ್.ರಾಜು, ಬೆಂಗಳೂರು ಪ್ರೆಸ್‍ಕ್ಲಬ್ ಅಧ್ಯಕ್ಷ ಸದಾಶಿವ ಶಣೈ, ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಎ.ಎಂ.ಸುರೇಶ್, ಫೋಟೊ ಜರ್ನಲಿಸ್ಟ್ ಅಸೋಸಿಯೇಷನ್ ಆಫ್ ಬೆಂಗಳೂರು ಅಧ್ಯಕ್ಷ ಎಸ್.ಈಶ್ವರ್, ಪ್ರಧಾನ ಕಾರ್ಯದರ್ಶಿ ಶರಣ ಬಸಪ್ಪ ಮತ್ತಿತರರು ಇದ್ದರು.

Facebook Comments

Sri Raghav

Admin