ಬೆಂಗಳೂರು ಕೂಡ ಬಯಲು ಬಹಿರ್ದೆಸೆಯಿಂದ ಇನ್ನೂ ಮುಕ್ತವಾಗಿಲ್ಲ..!

ಈ ಸುದ್ದಿಯನ್ನು ಶೇರ್ ಮಾಡಿ

Toilet--01

ಬೆಂಗಳೂರು,ಡಿ.23- ರಾಜಧಾನಿ ಬೆಂಗಳೂರಿನಲ್ಲಿ 198 ವಾರ್ಡ್‍ಗಳಲ್ಲಿ ಒಂದು ವಾರ್ಡ್ ಕೂಡ ಬಯಲು ಬಹಿರ್ದೆಸೆ ಮುಕ್ತವಾಗಿಲ್ಲ. ಆದರೂ ಸ್ವಚ್ಛ ನಗರ ಮಿಷನ್‍ನಡಿ ಪಟ್ಟ ಗಿಟ್ಟಿಸಿಕೊಳ್ಳಲು ಬಿಬಿಎಂಪಿ ಅಧಿಕಾರಿಗಳು ಮಾತ್ರ ಘನಂಧಾರಿ ಕೆಲಸ ಮಾಡಿದ್ದಾರೆ. ದಾಖಲೆಗಳಲ್ಲಿ ಎಲ್ಲವನ್ನು ಸಿದ್ಧಪಡಿಸಿದ್ದಾರೆ.  ಜನಸಂಖ್ಯೆ ಆಧಾರದ ಪ್ರಕಾರ 6595 ಕೊಮೊಡ್ ಶೌಚಾಲಯಗಳು ನಗರದಲ್ಲಿರಬೇಕು. ಆದರೆ 2 ಸಾವಿರ ಶೌಚಾಲಯಗಳು ಮಾತ್ರ ಇವೆ. ಇನ್ನು ಅಧಿಕಾರಿಗಳು ಸ್ವಚ್ಛ ಭಾರತ ಮಿಷನ್‍ಗೆ ತಪ್ಪು ಮಾಹಿತಿ ರವಾನಿಸಿ ಪಟ್ಟ ಗಿಟ್ಟಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ತರಾತುರಿಯಲ್ಲಿ ನಾಲ್ಕು ಸಾವಿರ ಶೌಚಾಲಯಗಳ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಿದ್ದು, 2800 ಶೌಚಾಲಯಗಳ ನಿರ್ಮಾಣಕ್ಕೆ ಅನುಮತಿ ಕೊಟ್ಟಾಗಿದೆ. ಇನ್ನು ಉಳಿದ ಶೌಚಾಲಯಗಳ ನಿರ್ಮಾಣಕ್ಕೆ ಅನುಮತಿ ನೀಡಬೇಕಿದೆ. ಬೆಂಗಳೂರು ಮಹಾನಗರ ಕಾಸ್ಮೋ ಪಾಲಿಟಿನ್ ಸಿಟಿ ಇಲ್ಲಿ ಕಟ್ಟಡ ಕಾಮಗಾರಿಗಳು ನಿರಂತರವಾಗಿ ನಡೆಯುತ್ತಿರುತ್ತದೆ. ವಲಸಿಗರು, ಕಾರ್ಮಿಕರ ತಾಣವಾಗಿದೆ. 198 ವಾರ್ಡ್‍ಗಳೂ ಈವರೆಗೂ ಬಯಲು ಬಹಿರ್ದೆಸೆ ಮುಕ್ತವಾಗಿಲ್ಲ.

ಬೆಂಗಳೂರಿಗೆ ಪ್ರತಿನಿತ್ಯ ಬರುವ ವಲಸಿಗರು, ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಸಿಕೊಳ್ಳುವ ಕಾರ್ಮಿಕರಿಗೆ ಬಯಲೇ ಶೌಚಾಲಯವಾಗಿದೆ. ಈಗ ಬಿಲ್ಡರ್‍ಗಳಿಗೆ ಬಿಬಿಎಂಪಿಯವರು ಶೌಚಾಲಯಗಳನ್ನು ನಿರ್ಮಾಣ ಮಾಡುವುದಕ್ಕೆ ಸೂಚನೆ ನೀಡಿದ್ದಾರೆ. ಇದೆಲ್ಲ ಸ್ವಚ್ಛ ಭಾರತ ಅಭಿಯಾನದ ಪಟ್ಟ ಪಡೆಯುವ ಎಫೆಕ್ಟ್. 2018ರ ಗಾಂಧಿಜಯಂತಿ ವೇಳೆಗೆ ಇಡೀ ದೇಶ ಬಯಲು ಬಹಿರ್ದೆಸೆ ಮುಕ್ತವಾಗಬೇಕೆಂಬುದು ಸ್ವಚ್ಛ ಭಾರತ್ ಅಭಿಯಾನದ ಉದ್ದೇಶವಾಗಿದೆ. ಅದಕ್ಕಾಗಿ ಸಾಕಷ್ಟು ಯೋಜನೆಗಳು, ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ರಾಜ್ಯ ಸರ್ಕಾರವೂ ಸಹ ಹಲವಾರು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ.

ರಾಜ್ಯದಲ್ಲಿ ಮಾರ್ಚ್ ವೇಳೆಗೆ ಬಯಲು ಬಹಿರ್ದೆಸೆ ಮುಕ್ತ ಮಾಡಬೇಕೆಂದು ಪಣತೊಟ್ಟು ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆದರೆ ಶಕ್ತಿಕೇಂದ್ರ ರಾಜಧಾನಿ ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ಸಮರ್ಪಕವಾಗಿ ಅನುಷ್ಟಾನವಾಗುತ್ತಿಲ್ಲದಿರುವುದು ವಿಪರ್ಯಾಸದ ಸಂಗತಿಯಾಗಿದೆ. ಸ್ವಚ್ಛ ನಗರ ಅಭಿಯಾನ ಸರ್ವೇಕ್ಷಣ ಪ್ರಕಾರ 198 ವಾರ್ಡ್‍ಗಳ ಪೈಕಿ 109 ವಾರ್ಡ್‍ಗಳಲ್ಲಿ ಈ ಯೋಜನೆ ಘೋಷಣೆಯಾಗಿದೆ. ಇನ್ನುಳಿದ 89 ವಾರ್ಡ್‍ಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಸೂಚನೆ ನೀಡಲಾಗಿದೆ.

ಗಾಂಧಿನಗರ, ಸುಭಾಷ್‍ನಗರ, ವಸಂತನಗರ, ಹೆಬ್ಬಾಳ, ನಂದಿನಿಲೇಔಟ್, ಮಾರಪ್ಪನಪಾಳ್ಯ, ಮೂಡಲಪಾಳ್ಯ, ಬೊಮ್ಮನಹಳ್ಳಿ, ಉತ್ತರಹಳ್ಳಿ ಸೇರಿದಂತೆ ಹಲವು ವಾರ್ಡ್‍ಗಳು ಬಯಲು ಬಹಿರ್ದೆಸೆ ಮುಕ್ತವಾಗಿಲ್ಲ. ಇಲ್ಲಿ ಶೌಚಾಲಯಗಳ ನಿರ್ಮಾಣಕ್ಕೆ ಅರ್ಜಿ ಸಲ್ಲಿಕೆಯಾಗಿದೆ. ಆದರೆ ದಾಸರಹಳ್ಳಿ, ಯಲಹಂಕ ಕ್ಷೇತ್ರಗಳ ವಾರ್ಡ್‍ಗಳಿಂದ ಇನ್ನೂ ಅರ್ಜಿಯೇ ಬಂದಿಲ್ಲ. ಈ ಯೋಜನೆ ಯಾವ ರೀತಿ ಫಲಪ್ರದವಾಗುತ್ತದೆ ಎಂಬುದು ಯಕ್ಷಪ್ರಶ್ನೆಯಾಗಿದೆ.

2014ರಲ್ಲಿ ಸ್ವಚ್ಛ ಭಾರತ ಅಭಿಯಾನ ಆರಂಭವಾಯಿತು. 2018 ಗಾಂಧಿ ಜಯಂತಿ ವೇಳೆಗೆ ಇದನ್ನು ಸಂಪೂರ್ಣವಾಗಿ ದೇಶಾದ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸಬೇಕು. ಕರ್ನಾಟಕ ರಾಜ್ಯಾದ್ಯಂತ ಮಾರ್ಚ್ ವೇಳೆಗೆ ಈ ಯೋಜನೆಯನ್ನು ಗ್ರಾಮೀಣ, ನಗರ ಪ್ರದೇಶಗಳಲ್ಲೂ ತ್ವರಿತಗತಿಯಲ್ಲಿ ಅನುಷ್ಠಾನಕ್ಕೆ ತರುವ ಕೆಲಸ ನಡೆಯುತ್ತಿದೆ. ಆದರೆ ಸಿಲಿಕಾನ್ ಸಿಟಿಯಲ್ಲಿ ಮಾತ್ರ ಫಲಪ್ರದವಾಗುತ್ತಿಲ್ಲ. ಸ್ವಚ್ಛ ನಗರ ಯೋಜನೆ ವಿಫಲವಾದರೆ ಇದರ ಹೊಣೆಯನ್ನು ಅಧಿಕಾರಿಗಳು ಹೊರಬೇಕು.

ಕೇಂದ್ರ ಸರ್ಕಾರ ಕಳೆದ ಸಾಲಿನಲ್ಲಿ ಪ್ರಕಟಿಸಿದ ಸ್ವಚ್ಛ ನಗರಿ ಸಾಲಿನಲ್ಲಿ ಬೆಂಗಳೂರು ತೀರಾ ಕೆಳಮಟ್ಟದ ಸ್ಥಾನವನ್ನು ಪಡೆದಿತ್ತು.ಬಯಲು ಬಹಿರ್ದೆಸೆ ಮುಕ್ತಗೊಳಿಸದಿದ್ದರೆ ಮತ್ತಷ್ಟು ಕೆಳಮಟ್ಟಕ್ಕೆ ಕುಸಿಯುತ್ತದೆ ಎಂಬ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ತರಾತುರಿಯಲ್ಲಿ ಯೋಜನೆ ಅನುಷ್ಠಾನಗೊಳಿಸಲು ಮುಂದಾಗಿದ್ದಾರೆ. ತಪ್ಪು ಮಾಹಿತಿಗಳನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ. ಮೊದಲು ಮಾಹಿತಿ ರವಾನಿಸಿ ನಂತರ ಶೌಚಾಲಯ ನಿರ್ಮಾಣಕ್ಕೆ ತೊಡಗಿಸಿಕೊಂಡಿದ್ದಾರೆ ಎನ್ನಲಾಗಿದೆ.

Facebook Comments

Sri Raghav

Admin