316 ಮಂದಿ ದ್ವಿಚಕ್ರ ವಾಹನ ಕಳ್ಳರ ಸೆರೆ, 1180 ವಾಹನಗಳು ವಶಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

Biike--02

ಬೆಂಗಳೂರು, ಡಿ.23- ನಗರದ ಪೂರ್ವ ವಲಯದ ನಾಲ್ಕು ವಿಭಾಗಗಳಲ್ಲಿ ಪ್ರಸಕ್ತ ವರ್ಷ ವಾಹನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ 316 ಆರೋಪಿಗಳನ್ನು ಬಂಧಿಸಿ 5 ಕೋಟಿ ರೂ. ಮೌಲ್ಯದ 1180 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಟಿ.ಸುನಿಲ್‍ಕುಮಾರ್ ಇಂದಿಲ್ಲಿ ತಿಳಿಸಿದರು.  ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಈಶಾನ್ಯ ವಲಯ ಪೊಲೀಸರು ವಶಪಡಿಸಿಕೊಂಡಿರುವ ಕಳುವಾಗಿದ್ದ ದ್ವಿಚಕ್ರ ವಾಹನಗಳ ಪ್ರದರ್ಶನ ಸಮಾರಂಭದಲ್ಲಿ ಮಾತನಾಡಿದ ಅವರು, ಬೈಕ್‍ಗಳನ್ನು ಕಳ್ಳತನ ಮಾಡಿದ್ದ ಕಳ್ಳರು ಅವುಗಳನ್ನು ಬೆಂಗಳೂರು, ಹಾಸನ, ಚನ್ನರಾಯಪಟ್ಟಣ, ಕೋಲಾರ, ರಾಮನಗರ, ಶಿಡ್ಲಘಟ್ಟ, ಚಿಂತಾಮಣಿ, ಮುಳಬಾಗಿಲು, ಆಂಧ್ರ ಪ್ರದೇಶ, ತಮಿಳುನಾಡು, ಕೇರಳದಲ್ಲಿ ಮಾರಾಟ ಮಾಡಿದ್ದರು.

ಹೆಚ್ಚುವರಿ ಪೊಲೀಸ್ ಆಯುಕ್ತ (ಪೂರ್ವ) ಸೀಮಂತ್‍ಕುಮಾರ್‍ಸಿಂಗ್ ನೇತೃತ್ವದಲ್ಲಿ ತನಿಖೆ ನಡೆಸಿ ಬೈಕ್ ಕಳ್ಳರನ್ನು ಬಂಧಿಸಿ ಇವರು ಮಾರಾಟ ಮಾಡಿದ್ದ ವ್ಯಕ್ತಿಗಳಿಂದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳ್ಳರು ಕದ್ದ ಬೈಕ್‍ಗಳನ್ನು ಬೇರೆಯವರಿಗೆ ಮಾರಾಟ ಮಾಡುವಾಗ ಇವು ಸಾಲ ವಸೂಲಾತಿಯಾಗದ ಕಾರಣ ಜಫ್ತಿಯಾಗಿರುವ ಬೈಕ್‍ಗಳು ಎಂದು ಹೇಳಿ ಅವರನ್ನು ನಂಬಿಸಿ 70-80 ಸಾವಿರ ಬೆಲೆಯ ಬೈಕ್‍ಗಳನ್ನು ಕೇವಲ 5-10 ಸಾವಿರಕ್ಕೆ ಮಾರಾಟ ಮಾಡಿರುವುದು ವಿಚಾರಣೆಯಿಂದ ತಿಳಿದುಬಂದಿದೆ.

ದಾಖಲೆಗಳನ್ನು ನಂತರ ತಂದುಕೊಡುವುದಾಗಿ ಹೇಳಿ ಬೈಕ್ ಕೊಂಡವರಿಗೆ ನಂಬಿಸಿ ಅವರಿಂದ ಹಣ ಪಡೆದು ದಾಖಲೆಗಳನ್ನೂ ನೀಡದೆ ವಂಚಿಸಿದ್ದರು.
ಯಲಹಂಕ ಠಾಣೆ ಪೊಲೀಸರು ಬೈಕ್ ಕಳ್ಳರ ತನಿಖೆ ವೇಳೆ ಚನ್ನರಾಯಪಟ್ಟಣದಲ್ಲಿ ಇಬ್ಬರನ್ನು ಬಂಧಿಸಿ ವಿಚಾರಣೆಗೊಳಪಡಿಸಿ 40 ವಾಹನ ವಶಪಡಿಸಿಕೊಂಡಿದ್ದು, ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ. ಇವರು ಸಿಕ್ಕರೆ ಮತ್ತಷ್ಟು ವಾಹನಗಳು ಸಿಗುವ ಸಾಧ್ಯತೆ ಇದೆ ಎಂದು ಅವರು ವಿವರಿಸಿದರು.
ಡಿಸಿಪಿ (ಪೂರ್ವ) ಅಜಯ್ ಹಿಲೋರಿ ನೇತೃತ್ವದಲ್ಲಿ 13 ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ 110 ಆರೋಪಿಗಳನ್ನು ಬಂಧಿಸಿ 1 ಕೋಟಿ 24 ಲಕ್ಷದ 27 ಸಾವಿರ ರೂ. ಬೆಲೆಯ 312 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆಗ್ನೇಯ ವಿಭಾಗದ ಡಿಸಿಪಿ ಡಾ.ಬೋರಲಿಂಗಯ್ಯ ನೇತೃತ್ವದಲ್ಲಿ 13 ಠಾಣಾ ವ್ಯಾಪ್ತಿಗಳಲ್ಲಿ 81 ಆರೋಪಿಗಳನ್ನು ಬಂಧಿಸಿ 2 ಕೋಟಿ 2 ಲಕ್ಷದ 44 ಸಾವಿರ ರೂ. ಬೆಲೆಬಾಳುವ 482 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.  ವೈಟ್‍ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹಾದ್ ನೇತೃತ್ವದಲ್ಲಿ 8 ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕಾರ್ಯಾಚರಣೆ ನಡೆಸಿ 60 ಆರೋಪಿಗಳನ್ನು ಬಂಧಿಸಿ 95.20 ಲಕ್ಷ ರೂ. ಮೌಲ್ಯದ 238 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.  ಈಶಾನ್ಯ ವಿಭಾಗದ ಡಿಸಿಪಿ ಗಿರೀಶ್ ನೇತೃತ್ವದಲ್ಲಿ 11 ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಕಾರ್ಯಾಚರಣೆ ನಡೆಸಿ 65 ಮಂದಿ ಆರೋಪಿಗಳನ್ನು ಬಂಧಿಸಿ 76.62 ಲಕ್ಷ ರೂ. ಮೌಲ್ಯದ 148 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.

Facebook Comments

Sri Raghav

Admin