ತಂಗಿಯನ್ನೇ ಪ್ರೀತಿಸಿ ಮದುವೆಯಾದ, ನಂತರ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡ..!
ಮೈಸೂರು, ಡಿ.24-ಸಂಬಂಧಿಕರ ವಿರೋಧದ ನಡುವೆ ತಂಗಿಯನ್ನೇ ಪ್ರೀತಿಸಿ ವಿವಾಹವಾಗಿದ್ದ ಯುವಕ ಜಿಗುಪ್ಸೆಗೊಂಡು ಸಾವಿಗೆ ಶರಣಾಗಿರುವ ಘಟನೆ ಮೈಸೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಸುತ್ತೂರು ಗ್ರಾಮದ ವಾಸಿ ರಸಿಕ (23) ಆತ್ಮಹತ್ಯೆ ಮಾಡಿಕೊಂಡಿರುವ ನವವಿವಾಹಿತ.
ವಿವರ:
ರಸಿಕ ತನ್ನ ತಾಯಿಯ ಅಕ್ಕನ ಮಗಳ (ತಂಗಿ)ನ್ನು ಪ್ರೀತಿಸಿದ್ದ. ಇಬ್ಬರು ಮದುವೆಯಾಗಲು ನಿರ್ಧರಿಸಿದರು. ಆದರೆ ಇವರಿಬ್ಬರ ಮದುವೆಗೆ ಯಾರೂ ಒಪ್ಪಿಗೆ ನೀಡದೆ ವಿರೋಧಿಸಿ ಬುದ್ಧಿ ಹೇಳಿದ್ದರು. ಆದರೂ ಮನೆಯವರ ತೀವ್ರ ವಿರೋಧದ ನಡುವೆಯೂ ರಸಿಕ ಹಾಗೂ ಆತನ ದೊಡ್ಡಮ್ಮನ ಮಗಳು ನಂಜನಗೂಡಿನ ನಂಜುಂಡೇಶ್ವರನ ಸನ್ನಿಧಿಯಲ್ಲಿ ಕಳೆದ ಮೂರು ತಿಂಗಳ ಹಿಂದೆಯಷ್ಟೇ ವಿವಾಹವಾಗಿ ಸುತ್ತೂರಿನಲ್ಲಿಯೇ ವಾಸವಿದ್ದರು. ಇತ್ತೀಚೆಗೆ ಪತಿ-ಪತ್ನಿ ನಡುವೆ ವೈಮನಸ್ಸು ಉಂಟಾಗಿದೆ. ಸಂಬಂಧಿಕರು ಯಾರೂ ಇವರನ್ನು ಮಾತನಾಡಿಸುತ್ತಿರಲಿಲ್ಲ. ಇದರಿಂದ ಬೇಸತ್ತ ರಸಿಕ ಇಂದು ಪತ್ನಿಯ ಸ್ವಗ್ರಾಮ ಕೋಚನಹಳ್ಳಿಗೆ ಹೋಗಿ ಮರವೊಂದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಮೈಸೂರು ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.