ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಮೈಸೂರಲ್ಲಿ ಫಲಪುಷ್ಪ ಪ್ರದರ್ಶನ

ಈ ಸುದ್ದಿಯನ್ನು ಶೇರ್ ಮಾಡಿ

Mysuru--011

ಮೈಸೂರು, ಡಿ.24- ಕ್ರಿಸ್‍ಮಸ್ ಮತ್ತು ನೂತನ ವರ್ಷ ಸಂದರ್ಭದಲ್ಲಿ ಮೈಸೂರಿಗೆ ಮತ್ತಷ್ಟು ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಮೈಸೂರು ಅರಮನೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ. ಈ ಫಲಪುಷ್ಪ ಪ್ರದರ್ಶನವನ್ನು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ಯಾಪ್ರಭ ಅರಸು ಅವರು ಪ್ರದರ್ಶನಕ್ಕೆ ಸಂಜೆ ಚಾಲನೆ ನೀಡಿದರು. ನಂತರ ಅವರು ಮಾತನಾಡಿ, ದೇಶದ ವಿವಿಧೆಡೆಗಳಲ್ಲಿ ಇಂತಹ ಉತ್ಸವ ನಡೆಯುತ್ತಿದೆ. ಪ್ರವಾಸಿಗರು ಪ್ರತಿ ಬಾರಿಯ ಹೊಸತನವನ್ನು ಬಯಸುತ್ತಾರೆ. ಈ ರೀತಿ ಉತ್ಸವ ನಡೆಯುವುದರಿಂದ ಹೆಚ್ಚಿನ ಪ್ರವಾಸಿಗರು ಆಗಮಿಸಲಿದ್ದಾರೆ ಎಂದರು.

ಮೈಸೂರು ಎಂದಾಕ್ಷಣ ದಸರಾ ಚಾಮುಂಡಿ ಬೆಟ್ಟ , ಮೃಗಾಲಯ, ಕೆಆರ್‍ಎಸ್ ಅರಮನೆ ಸೇರಿದಂತೆ ಇತರೆ ಪ್ರವಾಸ ತಾಣಗಳು ನೆನಪಿಗೆ ಬರುತ್ತದೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರು ಹೆಚ್ಚಾಗಿ ಬರುವುದರಿಂದ ಇಂತಹ ಪ್ರದರ್ಶನ ಆಯೋಜಿಸಿರುವುದು ಉತ್ತಮ ಎಂದರು. ಜನರ ಮನ ಸೆಳೆದ ಫಲಪುಷ್ಪ ಪ್ರದರ್ಶನ: ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಬಂದ ಸಾರ್ವಜನಿಕರು ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ಹೆಚ್ಚಿನ ಕಾಲ ಕಳೆದರು.  ಬಗೆ ಬಗೆಯ ಹೂವಿನಿಂದ ಅಲಂಕೃತಗೊಂಡಿರುವ ಆನೆಗಾಡಿ, 7 ತಲೆ ಕಾಳಿಂಗಸರ್ಪ, ಕ್ರಿಸ್ಮಸ್ ಟ್ರೀ, ರಾಜದರ್ಬಾರ್, ಸಿಂಹಾಸನ ಇವುಗಳು ನೋಡುಗರಿಗೆ ರಸದೌತಣ ನೀಡಿದವು.

ಛಾಯಾಚಿತ್ರ ಪ್ರದರ್ಶನದಲ್ಲಿ ರಾಜ ಮನೆತನದ ನೆನಪಿನ ಪುಟಗಳು ಅನಾವರಣಗೊಂಡಿದ್ದವು. ಅರಮನೆ ಮಂಡಳಿಯ ಆಯ್ದ ಛಾಯಾಚಿತ್ರಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದು , ಮೈಸೂರು ರಾಜರ ಐತಿಹಾಸಿಕ ದಾಖಲೆಯ ಪತ್ರಗಳನ್ನು ಸಾರ್ವಜನಿಕರು ವೀಕ್ಷಿಸಿದರು. ಈ ಪೈಕಿ ಅರಮನೆ ಸಂಗೀತ ವಿದ್ವಾನ್ ಬಿಡರಾಂ ಕೃಷ್ಣಪ್ಪ ಅವರು ಧನ ಸಹಾಯಕ್ಕಾಗಿ ಮಹಾರಾಜರಿಗೆ ಸಲ್ಲಿಸಿದ್ದ ಮನವಿ ಪತ್ರ, ಆನವಟ್ಟಿ ರಾಮರಾಯರ ವಸಂತಮಿತ್ರ ವಿಜಯ ನಾಟಕವನ್ನು ಪ್ರದರ್ಶಿಸಲು ಅಪ್ಪಣೆ ಕೋರಿ ಮಹಾರಾಜರ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಲ್ಲಿಸಿದ ಮನವಿ ಪತ್ರ ಹಾಗೂ ಚಿತ್ರಕಲಾವಿದ ರಾಜ ರವಿವರ್ಮ ಪತ್ರ ಸೇರಿದಂತೆ ಐತಿಹಾಸಿಕ ಪತ್ರಗಳನ್ನು ಪ್ರದರ್ಶನಕ್ಕಿಡಲಾಗಿದೆ. ಭಾನುವಾರ ಮತ್ತು ಸೋಮವಾರ ರಜೆ ಇರುವುದರಿಂದ ಪ್ರವಾಸಿಗರು ಮೈಸೂರಿನತ್ತ ಪ್ರವಾಸ ಕೈಗೊಂಡಿದ್ದು ಈ ವೇಳೆ ಈ ರೀತಿಯ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ.

20 ಅಡಿ ಎತ್ತರದ ವಿವಿಧ ರೀತಿಯ ಹೂವುಗಳಿಂದ ಅಲಂಕರಿಸಿದ ಹಳೆಯ ಅರಮನೆ ಮಾದರಿ, ಚಿಣ್ಣರಿಗಾಗಿ ಉದ್ಯಾನವನದಲ್ಲಿ ಕಾಳಿಂಗ ಸರ್ಪ, ನಕ್ಷತ್ರದ ಮೀನು, ಆಕ್ಟೋಪಸ್ ಸೇರಿದಂತೆ ವಿವಿಧ ರೀತಿಯ ಪ್ರಾಣಿಗಳನ್ನು ಹೂವುಗಳಿಂದ ಮಾಡಿ ಪ್ರದರ್ಶನಕ್ಕಿಡಲಾಗಿತ್ತು. ಪ್ರತ್ಯೇಕವಾಗಿ ಮಾಡಿದ್ದ ಗೊಂಬೆಗಳ ಜೋಡಣೆ ಆಕರ್ಷಣೀಯವಾಗಿತ್ತು.

Facebook Comments

Sri Raghav

Admin