ಬಿಜೆಪಿ ಕಚೇರಿ ಬದಲು ಸಿಎಂ ಮನೆ ಮುಂದೆ ಧರಣಿ ಮಾಡುವಂತೆ ರೈತರಿಗೆ ಬಿಎಸ್ವೈ ಸಲಹೆ

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa-01

ಹಾವೇರಿ, ಡಿ.24-ನಮ್ಮ ಪಕ್ಷದ ಕಚೇರಿ ಮುಂದೆ ಧರಣಿ ಮಾಡುವ ಬದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆ ಬಳಿ ಧರಣಿ ಮಾಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಉತ್ತರ ಕರ್ನಾಟಕದ ರೈತರಿಗೆ ಸಲಹೆ ನೀಡಿದ್ದಾರೆ. ಕಳೆದೆರಡು ದಿನಗಳಿಂದ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಬಳಿ ಉತ್ತರ ಕರ್ನಾಟಕದ ನೂರಾರು ರೈತರು ಹಗಲು ರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಹಾವೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀವು ತಕ್ಷಣವೇ ಬಿಜೆಪಿ ಕಚೇರಿಯಿಂದ ತೆರಳಿ ಸಿದ್ದರಾಮಯ್ಯನವರ ಮನೆ ಮುಂದೆ ಧರಣಿ ಕುಳಿತುಕೊಳ್ಳಿ. ನಮ್ಮ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಹೇಳಿದರು. ರೈತರು ಸತ್ಯಾಗ್ರಹ ನಡೆಸಬೇಕಾಗಿರುವುದು ನಮ್ಮ ಕಚೇರಿಯಲ್ಲಲ್ಲ. ಸಿದ್ದರಾಮಯ್ಯನವರ ಮನೆ ಮುಂದೆ ಧರಣಿ ಕುಳಿತರೆ ನಿಮಗೆ ಪರಿಹಾರ ಸಿಗುತ್ತದೆ. ತಕ್ಷಣವೇ ಇಲ್ಲಿಂದ ಹೊರಡಿ ಎಂದು ಮನವಿ ಮಾಡಿದರು.

ಮಹದಾಯಿ ನದಿ ನೀರು ಹಂಚಿಕೆ ವಿವಾದವನ್ನು ಪರಿಹರಿಸಲು ನಾನು ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಸೂಚನೆಯಂತೆ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಹಾಗೂ ಮಹಾರಾಷ್ಟ್ರದ ದೇವೇಂದ್ರ ಫಡ್ನವಿಸ್ ಜೊತೆಯು ಮಾತುಕತೆ ನಡೆಸಲಾಗಿದೆ. ನ್ಯಾಯಾಧೀಕರಣದ ಹೊರಗೆ ಮಾತುಕತೆ ಮೂಲಕ ಪರಿಹರಿಸಿಕೊಳ್ಳಲು ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಸಮ್ಮತಿಸಿದ್ದಾರೆ. ಇದರ ಶ್ರೇಯಸ್ಸು ಬಿಜೆಪಿಗೆ ಸಿಗುತ್ತದೆ ಎಂಬ ಕಾರಣಕ್ಕಾಗಿ ಕಾಂಗ್ರೆಸ್ ಅಡ್ಡಗಾಲು ಹಾಕುತ್ತಿದೆ ಎಂದು ಯಡಿಯೂರಪ್ಪ ಕಿಡಿಕಾರಿದರು.

ಕಾಂಗ್ರೆಸ್‍ನವರಿಗೆ ನಿಜವಾಗಿಯೂ ಸಮಸ್ಯೆ ಪರಿಹರಿಸಬೇಕೆಂಬ ಇಚ್ಛಾಶಕ್ತಿ ಇದ್ದರೆ ಗೋವಾ ಹಾಗೂ ಮಹಾರಾಷ್ಟ್ರದಲ್ಲಿರುವ ಕಾಂಗ್ರೆಸ್ ನಾಯಕರನ್ನು ಮನವೊಲಿಸಬೇಕು. ಮಹದಾಯಿ ಸಮಸ್ಯೆ ಪರಿಹರಿಸುತ್ತೇನೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಾಯಿಂದ ಹೇಳಿಸಲು ಸಿದ್ದರಾಮಯ್ಯನವರಿಗೆ ತಾಕತ್ತು ಇದೆಯೇ ಎಂದು ಪ್ರಶ್ನಿಸಿದರು. ಈ ಯೋಜನೆಗೆ ಅಡ್ಡಗಾಲು ಹಾಕುತ್ತಿರುವುದೇ ಕಾಂಗ್ರೆಸ್. ಚುನಾವಣಾ ಸಂದರ್ಭದಲ್ಲಿ ಇದನ್ನೇ ಮುಂದಿಟ್ಟುಕೊಂಡು ಬಿಜೆಪಿ  ಹಾಗೂ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಸಿದ್ದರಾಮಯ್ಯ ನಡೆಸುತ್ತಿದ್ದಾರೆ.   ಕಾಂಗ್ರೆಸ್‍ನ ಈ ದೊಂಬರಾಟಕ್ಕೆ ಮತದಾರರು ಸೊಪ್ಪು ಹಾಕುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.

Facebook Comments

Sri Raghav

Admin