ವೋಟರ್ ಕಾರ್ಡ್ ನಲ್ಲಿನ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ಡಿ.29ರವರೆಗೆ ಕಾಲಾವಕಾಶ

ಈ ಸುದ್ದಿಯನ್ನು ಶೇರ್ ಮಾಡಿ

Fake-Voters--01

ಬೆಂಗಳೂರು, ಡಿ.24-ಮುಂದಿನ 2018ರ ವಿಧಾನಸಭೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಕೇಂದ್ರ ಚುನಾವಣಾ ಆಯೋಗ ಈಗಾಗಲೇ ಮತದಾರರ ಕರಡು ಪಟ್ಟಿ ಬಿಡುಗಡೆ ಮಾಡಿದ್ದು, ಲೋಪದೋಷಗಳ ಸರಿಪಡಿಸುವಿಕೆ ಸೇರಿದಂತೆ ಪರಿಷ್ಕರಣೆಗೆ ಡಿ.29ರವರೆಗೂ ಕಾಲಾವಕಾಶ ನೀಡಿದೆ. ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿರುವ ಅರ್ಹ ಮತದಾರರ ಹೆಸರು ಸೇರ್ಪಡೆ, ಮತದಾರರ ಕ್ಷೇತ್ರ ಬದಲಾವಣೆ, ಪುನರಾವರ್ತಿತ ಸೇರ್ಪಡೆ ಸರಿಪಡಿಸುವಿಕೆ, ಹೊಸದಾಗಿ ಮತದಾರರ ಪಟ್ಟಿಗೆ ನೋಂದಾವಣೆ, ತಿದ್ದುಪಡಿಗಳಿಗೆ ಅವಕಾಶ ಮಾಡಿಕೊಟ್ಟಿದ್ದು, ಫೆ.15 ರಂದು ವಿಧಾನಸಭೆ ಚುನಾವಣೆಯ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲು ಉದ್ದೇಶಿಸಿದೆ.

ಮತದಾರರ ಪಟ್ಟಿಯಲ್ಲಿನ ನ್ಯೂನ್ಯತೆಗಳನ್ನು ಸರಿಪಡಿಸಲು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು ಹಲವು ರೀತಿಯ ಕ್ರಮಗಳನ್ನು ಕೈಗೊಂಡಿದ್ದು, ಮನೆ ಮನೆಗೆ ತೆರಳಿ ಹೊಸ ಮತದಾರರ ನೋಂದಣಿ ಮಾಡುವುದು, ಮೃತ ಹೊಂದಿರುವವರ, ಸ್ಥಳ ಬದಲಾವಣೆ ಮಾಡಿರುವವರ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕುವುದು, ಮೊದಲಾದ ಕಾರ್ಯಗಳನ್ನು ಬೂತ್ ಮಟ್ಟದಲ್ಲಿ ಕೈಗೊಂಡಿದೆ. ಇದಕ್ಕೆ ಬೇಕಾದ ತರಬೇತಿಯನ್ನು ಸಿಬ್ಬಂದಿಗೆ ಈಗಾಗಲೇ ನೀಡಲಾಗಿದೆ. ರಾಜಕೀಯ ಪಕ್ಷಗಳು ಕೂಡ ಬೂತ್‍ಮಟ್ಟದಲ್ಲಿ ತಮ್ಮ ತಮ್ಮ ಏಜೆಂಟ್‍ಗಳನ್ನು ನೇಮಕ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದ್ದು, ಆ ಮೂಲಕ ಮತದಾರರು ಪಟ್ಟಿಯ ಗುಣಮಟ್ಟವನ್ನು ಹೆಚ್ಚಿಸಲು ಮುಂದಾಗಿದೆ.

ಮತದಾರರ ಪಟ್ಟಿಯಲ್ಲಿನ ಲೋಪದೋಷಗಳ ಸರಿಪಡಿಸುವಿಕೆಗೆ ರಾಜಕೀಯ ಪಕ್ಷಗಳ ಏಜೆಂಟರು ಸೂಕ್ತ ಮಾಹಿತಿಯನ್ನು ಮತದಾರರ ನೋಂದಣಾಧಿಕಾರಿಗಳಿಗೆ ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ.   ಕಳೆದ 2013ರ ವಿಧಾನಸಭೆ ಚುನಾವಣೆಯಲ್ಲಿ 4.18 ಕೋಟಿ ಮತದಾರರಿದ್ದು, ಈಗ 4.90 ಕೋಟಿಗೆ ಮತದಾರರ ಸಂಖ್ಯೆ ಹೆಚ್ಚಳವಾಗಿದೆ. ಈ ಪೈಕಿ 2.41 ಕೋಟಿ ಮಹಿಳೆಯರು 2.48 ಕೋಟಿ ಪುರುಷ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ.

ಈ ಬಾರಿ ಹೊಸದಾಗಿ 72 ಲಕ್ಷ ಮತದಾರರು ಸೇರ್ಪಡೆಯಾಗಿದ್ದು, ಇದೇ ಮೊದಲ ಬಾರಿಗೆ ಮತದಾರರ ಪಟ್ಟಿಯಲ್ಲಿ 18- 19 ವಯೋಮಾನದ 7.69 ಲಕ್ಷ ಮತದಾರರು ಸೇರ್ಪಡೆಯಾಗಿದ್ದಾರೆ. ಬೆಂಗಳೂರಿನಲ್ಲಿ 85.88 ಲಕ್ಷ ಮತದಾರರಿದ್ದು, 45.02 ಲಕ್ಷ ಪುರುಷರು ಹಾಗೂ 40.84 ಮಹಿಳಾ ಮತದಾರರಿದ್ದಾರೆ. ಮತದಾನದ ದಿನದಂದು ಮತದಾರರ ಪಟ್ಟಿಯಲ್ಲಿ ಹೆಸರಿಲ್ಲ ಎಂದು ದೂಷಣೆ ಮಾಡುವ ಬದಲು ಪರಿಷ್ಕರಣೆ ಸಂದರ್ಭದಲ್ಲಿ ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿಕೊಳ್ಳುವುದು ಸೂಕ್ತ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಮತದಾರರ ಗುರುತಿನ ಚೀಟಿ ಹೊಂದಿದ್ದರೂ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಿದೆಯೇ, ಇಲ್ಲವೇ ಎಂದು ಪರೀಕ್ಷಿಸಿಕೊಳ್ಳುವುದು ಪ್ರತಿಯೊಬ್ಬ ಮತದಾರರ ಕರ್ತವ್ಯವಾಗಿದೆ. ಈಗಾಗಲೇ ಕರಡು ಮತದಾರರ ಪಟ್ಟಿಯನ್ನು ಮತದಾರರ ನೋಂದಣಾಧಿಕಾರಿಗಳ ಕಚೇರಿ, ತಾಲೂಕು ಕಚೇರಿ, ನಗರ ಪಾಲಿಕೆ ಕಚೇರಿ, ಬಿಎಂಎಂಪಿ ಕಂದಾಯಾಧಿಕಾರಿಗಳ ಕಚೇರಿಗಳಲ್ಲಿ ಪ್ರಕಟಿಸಿರುವುದಲ್ಲದೆ, ಅಂತರ್ಜಾಲದಲ್ಲೂ ಕೂಡ ಪ್ರಕಟಿಸಲಾಗಿದೆ. ಮತದಾರರ ಪಟ್ಟಿಯಲ್ಲಿನ ಲೋಪದೋಷ ತಿದ್ದುಪಡಿಗೆ ನಮೂನೆ-8, ಸೇರ್ಪಡೆಗೆ ನಮೂನೆ-6 ಹಾಗೂ ಹೆಸರನ್ನು ತೆಗೆದುಹಾಕಲು ನಮೂನೆ-7ರ ಮೂಲಕ ಮತದಾರರ ನೋಂದಣಾಧಿಕಾರಿಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

Facebook Comments

Sri Raghav

Admin