ಹಬ್ಬ-ಹರಿದಿನಗಳಲ್ಲಿ ಹೆಚ್ಚಾಗಲಿದೆ ರೈಲ್ವೆ ಪ್ರಯಾಣದರ

ಈ ಸುದ್ದಿಯನ್ನು ಶೇರ್ ಮಾಡಿ

Railway-n-02

ನವದೆಹಲಿ, ಡಿ.24-ಅವಶ್ಯಕತೆಗನುಗುಣವಾಗಿ ಪ್ರಯಾಣ ದರದಲ್ಲಿ ಅದಲು-ಬದಲು ಮಾಡುವುದು ಹಾಗೂ ಪ್ರಯಾಣಿಕರು ಕಡಿಮೆ ಇರುವ ಮಾರ್ಗದಲ್ಲಿ ಊಟ-ತಿಂಡಿ ವ್ಯವಸ್ಥೆ ರದ್ದುಗೊಳಿಸುವ ತೀರ್ಮಾನ ಕೈಗೊಳ್ಳಲು ಭಾರತೀಯ ರೈಲ್ವೆ ಇಲಾಖೆ ತೀರ್ಮಾನಿಸಿದೆ. ಹಬ್ಬ-ಹರಿದಿನಗಳಲ್ಲಿ ರೈಲ್ವೆ ಪ್ರಯಾಣ ದರ ಹೆಚ್ಚಳ ಮಾಡಲು ಹಾಗೂ ಇತರೆ ದಿನಗಳಲ್ಲಿ ಪ್ರಯಾಣದರ ಇಳಿಸಲು ಚಿಂತನೆ ನಡೆಸಲಾಗಿದೆ.

ಪ್ರಯಾಣಿಕರು ಕಡಿಮೆ ಇರುವ ಮಾರ್ಗದಲ್ಲಿ ಊಟ-ತಿಂಡಿ ವ್ಯವಸ್ಥೆ ಕೈ ಬಿಡಲು ರೈಲ್ವೆ ಇಲಾಖೆ ಅಧಿಕಾರಿಗಳು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ. ರೈಲ್ವೆ ಸಚಿವ ಪೀಯೂಷ್ ಗೋಯಲ್ ನೇತೃತ್ವದಲ್ಲಿ ನಡೆದ ಹಿರಿಯ ರೈಲ್ವೆ ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಪ್ರಯಾಣಿಕರನ್ನು ಆಕರ್ಷಿಸಲು ವೈಮಾನಿಕ ಕ್ಷೇತ್ರದಲ್ಲಿ ನೀಡಲಾಗುತ್ತಿರುವ ಆಫರ್‍ಗಳ ಮಾದರಿಯನ್ನೇ ರೈಲ್ವೆ ಇಲಾಖೆಯಲ್ಲೂ ಅಳವಡಿಸಿಕೊಳ್ಳಲಾಗುತ್ತಿದೆ.
ಪ್ರಯಾಣಿಕರು ಕಡಿಮೆ ಇರುವ ರೈಲುಗಳ ಪ್ರಯಾಣ ದರದಲ್ಲಿ ಭಾರೀ ಇಳಿಕೆ ಮಾಡುವುದು, ಹಬ್ಬ-ಹರಿದಿನಗಳಲ್ಲಿ ದರ ಹೆಚ್ಚಳ ಮಾಡಲಾಗುತ್ತದೆ.

ಆರಂಭದಲ್ಲಿ ಪೂರ್ವ, ಪಶ್ಚಿಮ ಮತ್ತು ಪಶ್ಚಿಮ ಮಧ್ಯಭಾಗದ ರೈಲ್ವೆ ವಲಯಗಳಲ್ಲಿ ಈ ಯೋಜನೆ ಜಾರಿಗೊಳಿಸಲಾಗುತ್ತದೆ. ಮಧ್ಯರಾತ್ರಿ 1 ಗಂಟೆಯಿಂದ 4 ಗಂಟೆ ಸಮಯದಲ್ಲಿ ಪ್ರಯಾಣ ದರದಲ್ಲಿ ಭಾರೀ ಇಳಿಕೆ ಮಾಡುವ ಮೂಲಕ ಪ್ರಯಾಣಿಕರನ್ನು ಪ್ರೋತ್ಸಾಹಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಒತ್ತಡ ಹೆಚ್ಚಾಗಿಲ್ಲದ ಸಮಯದಲ್ಲಿ ಮತ್ತು ಕಡಿಮೆ ಪ್ರಯಾಣಿಕರಿರುವ ಮಾರ್ಗಗಳಲ್ಲಿ ಶೇ.10 ರಿಂದ 30ರಷ್ಟು ದರ ಕಡಿತಗೊಳಿಸಲಾಗುತ್ತಿದೆ.

ಅದೇ ರೀತಿ ಹಬ್ಬ-ಹರಿದಿನಗಳಲ್ಲಿ ಪ್ರಯಾಣ ದರವನ್ನು ಶೇ.10 ರಿಂದ 20ರಷ್ಟು ಹೆಚ್ಚಳ ಮಾಡುವುದು ಈ ಯೋಜನೆಯ ಉದ್ದೇಶ. ತಾವು ಸಂಚರಿಸುವ ಮಾರ್ಗದಲ್ಲಿ ಹೈ ಸ್ಪೀಡ್ ಟ್ರೈನ್ ವ್ಯವಸ್ಥೆಯನ್ನು ಪಡೆದುಕೊಳ್ಳಲು ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲಾಗಿದ್ದು, ಇಂತಹ ಅವಕಾಶಕ್ಕೆ ಗಂಟೆಗೆ ಇಂತಿಷ್ಟು ದರ ನಿಗದಿಪಡಿಸಲಾಗುತ್ತಿದೆ.  ಇದರ ಜತೆಗೆ ಇನ್ನು ಮುಂದೆ ಲೋಯರ್ ಬರ್ತ್ ಪಡೆದುಕೊಳ್ಳಲು ಹಾಗೂ ಕಿಟಕಿ ಸಮೀಪದ ಆಸನ ಬೇಕೆಂದವರು ಹೆಚ್ಚು ದರ ಪಾವತಿಸುವುದು ಅನಿವಾರ್ಯವಾಗಲಿದೆ.  ಒಟ್ಟಾರೆ ರೈಲ್ವೆ ಪ್ರಯಾಣವನ್ನು ಆಕರ್ಷಿಸುವಂತೆ ಮಾಡಲು ಮತ್ತು ಆದಾಯ ಕ್ರೋಢೀಕರಣದ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸಲು ರೈಲ್ವೆ ಇಲಾಖೆ ತೀರ್ಮಾನಿಸಿದ್ದು, ಹೊಸ ವರ್ಷದಿಂದ ಈ ಯೋಜನೆ ಜಾರಿಗೊಳ್ಳುವ ಸಾಧ್ಯತೆ ಇದೆ.

Facebook Comments

Sri Raghav

Admin