‘ಬಿಜೆಪಿ ಕಚೇರಿಯೆದುರು ರೈತರ ಪ್ರತಿಭಟನೆ ಹಿಂದೆ ಸಿದ್ದರಾಮಯ್ಯ ಆ್ಯಂಡ್ ಕಂಪೆನಿ ‘ಕೈ’ವಾಡ’

ಈ ಸುದ್ದಿಯನ್ನು ಶೇರ್ ಮಾಡಿ

sadananda

ಬೆಂಗಳೂರು, ಡಿ.25-ಬಿಜೆಪಿ ಕಚೇರಿ ಮುಂದೆ ಮಹದಾಯಿ ರೈತರು ನಡೆಸುತ್ತಿರುವ ಪ್ರತಿಭಟನೆ ಹಿಂದೆ ಸಿದ್ದರಾಮಯ್ಯ ಆ್ಯಂಡ್ ಕಂಪೆನಿ ಹಾಗೂ ಕಾಂಗ್ರೆಸ್‍ನ ಕುಮ್ಮಕ್ಕಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲದರಲ್ಲೂ ರಾಜಕಾರಣ ಹುಡುಕುವುದು ಒಳ್ಳೆಯದಲ್ಲ. ಮಹದಾಯಿ ವಿವಾದ ನ್ಯಾಯಾಧೀಕರಣದಿಂದಲೇ ಪರಿಹಾರವಾಗಬೇಕು ಎಂಬ ನಿಲುವಿನ ನಡುವೆ ಕರ್ನಾಟಕಕ್ಕೆ ಅಗತ್ಯವಾದಷ್ಟು ನೀರು ಕೊಡಲು ಗೋವಾದ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಒಪ್ಪಿದ್ದಾರೆ. ಇದನ್ನು ಸಿದ್ದರಾಮಯ್ಯ ಆ್ಯಂಡ್ ಕಂಪೆನಿ ಸಹಿಸಿಕೊಳ್ಳಲಾಗದೆ ಯೋಜನೆಗೆ ಅಡ್ಡಗಾಲು ಹಾಕುವ ಪ್ರಯತ್ನ ಮಾಡುತ್ತಿದೆ ಎಂದರು.

ಕಾಂಗ್ರೆಸ್‍ನ ಮುಖಂಡರು ಮಹದಾಯಿ ಯೋಜನೆ ವ್ಯಾಪ್ತಿಯ ಪ್ರದೇಶದಲ್ಲಿ ಜನರನ್ನು ಪ್ರಚೋದಿಸಿ ಪ್ರತಿಭಟನೆ ಮಾಡಿಸುತ್ತಿದ್ದಾರೆ. ಸಿದ್ದರಾಮಯ್ಯ ಕೂಡ ಹೋದ ಕಡೆಯಲೆಲ್ಲಾ ಪ್ರತಿಭಟನೆಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಬಿಜೆಪಿ ಕಚೇರಿ ಎದುರು ಯಾರೋ ನಾಲ್ಕು ಜನ ಬಂದು ಪ್ರತಿಭಟನೆ ನಡೆಸಿದಾಕ್ಷಣ ನಾವು ಹೆದರಿ ಹಿಂದೆ ಸರಿಯುವುದಿಲ್ಲ. ಮಹದಾಯಿ ವಿವಾದದ ಇತ್ಯರ್ಥ ಪ್ರಯತ್ನವನ್ನು ಮುಂದುವರೆಸಿದ್ದೇವೆ. ಆಮಿತ್‍ಷಾ ಅವರು ಆಸಕ್ತಿ ವಹಿಸಿ ಸಂಧಾನ ಸಭೆ ಮಾಡಿದ್ದಾರೆ. ಅದನ್ನು ಆಧರಿಸಿ ಮನೋಹರ್ ಪಾರಿಕ್ಕರ್ ಪತ್ರ ಬರೆದಿದ್ದಾರೆ.

ನಾನು ಮುಖ್ಯಮಂತ್ರಿಯಾಗಿದ್ದರೆ ಇದಕ್ಕೆ ಸಹಭಾಷ್‍ಗಿರಿ ನೀಡುತ್ತಿದ್ದೆ. ಕೂಡಲೇ ಯಡಿಯೂರಪ್ಪ ಅವರ ಮನೆಗೆ ಹೋಗಿ ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ಚರ್ಚೆ ಮಾಡುತ್ತಿದ್ದೆ. ಅದನ್ನು ಬಿಟ್ಟು ಯೋಜನೆಗೆ ಅಡ್ಡಗಾಲು ಆಗುತ್ತಿರಲಿಲ್ಲ ಎಂದು ತಿರುಗೇಟು ನೀಡಿದರು. ಬಿಜೆಪಿ ಕಚೇರಿ ಎದುರು ನಡೆಸುತ್ತಿರುವ ಪ್ರತಿಭಟನೆಯನ್ನು ಕೈ ಬಿಡಸಲು ಪೊಲೀಸರು ಮನವಿ ಮಾಡಿದ್ದಾಗಿಯೂ ಅಲ್ಲಿ ಕುಳಿತವರು ಒಪ್ಪುತ್ತಿಲ್ಲ. ಇದನ್ನು ನೋಡಿದರೆ ಕಾಂಗ್ರೆಸ್ ಕೈವಾಡವಿರುವುದು ಇದೇ ಅನ್ನಿಸುತ್ತಿದೆ. ನಾನು ನಿನ್ನೆ ಪೊಲೀಸ್ ಆಯುಕ್ತರಿಗೆ ನಾಲ್ಕೈದು ಬಾರಿ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಲಿಲ್ಲ. ಇದೆಲ್ಲಾ ಏನನ್ನು ತೋರಿಸುತ್ತದೆ ಎಂದು ಪ್ರಶ್ನಿಸಿದರು.

ವಿಧಾನಸಭೆ ಚುನಾವಣೆಯ ನಂತರ ಮಾತುಕತೆ ನಡೆಸುವುದಾಗಿ ಮನೋಹರ್ ಪಾರಿಕ್ಕರ್ ನೀಡಿರುವ ಭರವಸೆಯನ್ನು ಸಮರ್ಥಿಸಿಕೊಂಡ ಸದಾನಂದಗೌಡರು, ನಮ್ಮ ಪಕ್ಷದ ಮುಖ್ಯಮಂತ್ರಿಗಳು ಒಮ್ಮೆ ಕೊಟ್ಟ ಮಾತನ್ನು ಹಿಂಪಡೆಯುವುದಿಲ್ಲ ಎಂದು ಹೇಳಿದರು. ಸಂವಿಧಾನ ಬದಲು ಮಾಡಲು ನಾವು ಬಂದಿದ್ದೇವೆ ಎಂದು ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗಡೆ ಹೇಳಿರುವುದನ್ನು ಸಮರ್ಥಿಸಿಕೊಂಡ ಡಿವಿಎಸ್, ಸಂವಿಧಾನ ಹಲವಾರು ಬಾರಿ ಬದಲಾವಣೆಯಾಗಿದೆ. ಕಾಲ ಕಾಲಕ್ಕೆ ತಿದ್ದುಪಡಿಗಳಾಗಿವೆ. ಒಬಿಸಿ ಮೀಸಲಾತಿ ಸಂಬಂಧ 101ನೇ ತಿದ್ದುಪಡಿ ಇತ್ತೀಚೆಗೆ ಹಾಗಿದೆ. ಈ ರೀತಿ ಬದಲಾವಣೆಗಳು ಸಾಮಾನ್ಯ. ಅನಂತ್‍ಕುಮಾರ್ ಹೆಗಡೆ ಅವರ ಹೇಳಿಕೆಗಳನ್ನು ವಿವಾದ ಮಾಡಲಿಕ್ಕಾಗಿಯೇ ಕೆಲವು ಜನ ಕಾಯುತ್ತಿರುತ್ತಾರೆ. ಅವರ ಹೇಳಿಕೆಗಳಲ್ಲೂ ಸ್ವಲ್ಪ ಹೆಚ್ಚು ಕಡಿಮೆ ಇರಬಹುದು. ಆದರೆ, ವಿವಾದ ಮಾಡಲಿಕ್ಕಾಗಿಯೇ ಇರುವವರು ಇದನ್ನೇ ದೊಡ್ಡದು ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Facebook Comments

Sri Raghav

Admin