3ನೇ ದಿನಕ್ಕೆ ಕಾಲಿಟ್ಟ ಮಹದಾಯಿ ಹೋರಾಟ, ಉಪಹಾರ ನಿರಾಕರಿಸಿದ ಹೋರಾಟನಿರತರು

ಈ ಸುದ್ದಿಯನ್ನು ಶೇರ್ ಮಾಡಿ

Mahadayi--01

ಬೆಂಗಳೂರು,ಡಿ.25-ಉತ್ತರ ಕರ್ನಾಟಕದ ಪ್ರಮುಖ ಭಾಗಗಳಿಗೆ ಶಾಶ್ವತ ಕುಡಿಯುವ ನೀರು ಪೂರೈಕೆ ಒದಗಿಸುವ ಮಹದಾಯಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿಭಟನೆ ಮುಂದುವರಿದಿದ್ದು, ಬಿಜೆಪಿ ಕಚೇರಿ ಎದುರು ನಡೆಯುತ್ತಿರುವ ಧರಣಿ ಮೂರನೇ ದಿನಕ್ಕೆ ಕಾಲಿಟ್ಟಿದೆ. ನೂರಾರು ರೈತರು ಮಲ್ಲೇಶ್ವರಂ ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ ಮುಂದುವರೆಸಿದ್ದಾರೆ. ಕೊರೆಯುವ ಚಳಿಯಲ್ಲಿ ರೈತರು ರಾತ್ರಿ ರಸ್ತೆಯಲ್ಲೆ ವಾಸ್ತವ್ಯ ಹೂಡಿದ್ದು, ರಸ್ತೆ ಮತ್ತು ಫುಟ್‍ಪಾತ್ ಮೇಲೆ ಮಲಗಿ ನಿದ್ದೆ ಮಾಡಿದರು. ಬಿಜೆಪಿ ರಾಜ್ಯಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಇಲ್ಲಿಗೆ ಬರಬೇಕು. ನಮ್ಮ ಮನವಿ ಸ್ವೀಕರಿಸಬೇಕು. ಅಲ್ಲಿವರೆಗೆ ಜಪ್ಪಯ್ಯಅಂದರೂ ಕದಲಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಎಷ್ಟು ದಿನವಾದರೂ ಸರಿ ನಾವು ಪ್ರತಿಭಟನೆ ನಡೆಸುತ್ತೇವೆ.ನ.15 ರಂದು ಜಗದೀಶ್ ಶೆಟ್ಟರ್ ಮನೆ ಮುಂದೆ ಪ್ರತಿಭಟನೆ ಮಾಡಿದ್ದಾಗ ಬಿಎಸ್‍ಯಡಿಯೂರಪ್ಪಅವರು ಮಹದಾಯಿ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದ್ದರು. ಸಮಸ್ಯೆ ಬಗೆಹರಿಸಲು 20 ದಿನ ಕಾಲಾವಕಾಶ ಕೇಳಿದ್ದರು. ಆದರೆ ಈವರೆಗೆ ಅವರು ಭರವಸೆ ಈಡೇರಿಸುವ ಕೆಲಸ ಮಾಡಿಲ್ಲ. ತಮ್ಮ ಜೊತೆ ಸಮಸ್ಯೆಗಳ ಬಗ್ಗೆ ಚರ್ಚಿಸದಿದ್ದರೆ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಬೆದರಿಕೆಯೊಡ್ಡಿದ್ದಾರೆ.

ಗದಗ, ಬಾಗಲಕೋಟೆ, ಹುಬ್ಬಳ್ಳಿ ಮತ್ತು ಇತರ ಭಾಗಗಳ ರೈತರು ಬೆಂಗಳೂರಿಗೆ ಆಗಮಿಸಿ ತಮ್ಮ ಭಾಗಗಳಿಗೆ ಮಹಾದಾಯಿ ನೀರು ಹರಿಸುವಂತೆಒತ್ತಾಯ ಮಾಡಿದರು. ರಾಜ್ಯ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿರುವ ಯಡಿಯೂರಪ್ಪ ನಾಳೆ ಬೆಂಗಳೂರಿಗೆ ಹಿಂತಿರುಗುವ ನಿರೀಕ್ಷೆಯಿದೆ. ಕರ್ನಾಟಕ ರೈತ ಸೇನೆ ಬ್ಯಾನರ್ ನಲ್ಲಿ ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿರುವ ರೈತರು, ಕಳೆದೆರಡು ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿದ್ದು ಮಹದಾಯಿ ಯೋಜನೆ ಜಾರಿಗೆ ಒತ್ತಾಯಿಸುತ್ತಲೇ ಬಂದಿದ್ದೇವೆ. ಆದರೆ ಜನನಾಯಕರು ಕಿವುಡರಂತೆ ವರ್ತಿಸುತ್ತಿದ್ದಾರೆ. ನೀರಿಗಾಗಿ ನಮ್ಮ ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರಿಸುತ್ತೇವೆ ಎಂದು ಪ್ರತಿಭಟನಾನಿರತರು ಹೇಳಿದರು.

ಕೇಂದ್ರ, ಗೋವಾದಲ್ಲಿ ಬಿಜೆಪಿ ಸರ್ಕಾರವಿದೆ. ಈಗಲಾದರೂ ಸಮಸ್ಯೆ ಬಗೆಹರಿಸಿ. ರೈತರ ಜೀವನದ ಜೊತೆ ಚೆಲ್ಲಾಟ ಆಡಬೇಡಿ, ಇದರಿಂದ ನಿಮ್ಮ ವಂಶ ಸರ್ವನಾಶವಾಗುತ್ತದೆ ಎಂದು ಬಿಜೆಪಿ ವಿರುದ್ಧ ರೈತ ಮುಖಂಡ ಪಂಚನಗೌಡ ದ್ಯಾಮನಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹದಾಯಿ ಸಮಸ್ಯೆ ಬಗೆಹರಿಸುವುದಾಗಿರಕ್ತದಲ್ಲಿ ಬರೆದುಕೊಡುವುದಾಗಿ ಸಿದ್ಧ ಎಂದು ಹೇಳಿದ್ದ ಯಡಿಯೂರಪ್ಪ ಬೆಳಗ್ಗೆ ಒಂದು ಬಣ್ಣ, ಸಂಜೆಗೆ ಒಂದು ಬಣ್ಣ ಬದಲಿಸುವ ನಾಟಕವಾಡುತ್ತಿದ್ದಾರೆ. ಹೀಗಾಗಿ ಅವರ ಪುಣ್ಯತಿಥಿ ಮಾಡುವ ಕಾಲ ಬಂದಿದೆ ಎಂದು ಧಾರವಾಡದ ರೇವಣ ಸಿದ್ದೇಶ್ವರ ಮಠದ ಬಸವ ರಾಜದೇವರು ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಪಹಾರ ನಿರಾಕರಿಸಿದ ಹೋರಾಟನಿರತರು : 

ವಿಧಾನಪರಿಷತ್ ಸದಸ್ಯ ಟಿ.ಎ.ಶರವಣಅವರು ಬೆಳಗ್ಗೆ ರೈತರಿಗೆ ಉಪಹಾರ ನೀಡಲು ಆಗಮಿಸಿದ್ದರು. ಆದರೆ, ರೈತರು ನಮ್ಮ ಸಮಸ್ಯೆ ಬಗೆಹರಿಸಿ ಯಾವ ಸಹಾಯವೂ ನಮಗೆ ಬೇಡ ಎಂದು ಹೇಳಿ ನಿರಾಕರಿಸಿದ್ದಾರೆ.   ಯಾವುದೇ ಜನ ಪ್ರತಿನಿಧಿ, ಯಾವುದೇ ಪಕ್ಷದಿಂದ ಏನನ್ನೂ ಸ್ವೀಕರಿಸುವುದಿಲ್ಲ. ಏನಾದರೂ ಸಹಾಯ ಮಾಡುವುದಿದ್ದರೆ ದೇವೇಗೌಡರ ಮುಖಾಂತರ ಪ್ರದಾನಿಗಳ ಮನವೊಲಿಸಲಿ. ಕಾವೇರಿ ವಿಚಾರವಾಗಿ ಪ್ರತಿಭಟನೆ ಕೂರುವ ಮಾಜಿ ಪ್ರಧಾನಿ ದೇವೇಗೌಡರು ಮಹದಾಯಿ ವಿಚಾರವಾಗಿ ಸೊಲ್ಲೆತ್ತುತ್ತಿಲ್ಲ. ಕರ್ನಾಟಕದಿಂದ ಪ್ರಧಾನಮಂತ್ರಿಗಳಾಗಿ ಆಯ್ಕೆಯಾಗಿದ್ದ ದೇವೇಗೌಡರ ಮನವೊಲಿಸಲಿ ನಮಗೆ ಅವರ ಉಪಹಾರ ಬೇಡವೆಂದ ಪಟ್ಟು ಹಿಡಿದರು.

ದೂರವಾಣಿ ಮೂಲಕ ಹೋರಾಟಗಾರರ ಜೊತೆ ಮಾತನಾಡಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಧರಣಿ ಸ್ಥಳಕ್ಕೆ ಬಂದು ಮಾತನಾಡುತ್ತೇನೆಂದು ರೈತರಿಗೆ ಭರವಸೆ ನೀಡಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಟಿ.ಎ.ಶರವಣ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮೂರು ದಿನಗಳಿಂದ ಜ್ವರ ಇದೆ. ಹಾಗಾಗಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಲು ಸಾಧ್ಯವಾಗಲಿಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳು ರಾಜಕೀಯ ಮಾಡುತ್ತಿವೆ. ಕೇಂದ್ರ, ಮಹಾರಾಷ್ಟ್ರ ಹಾಗೂ ಗೋವಾದಲ್ಲಿ ಬಿಜೆಪಿ ಸರ್ಕಾರವಿದೆ. ಆದರೆ ಸಮಸ್ಯೆ ಬಗೆಹರಿಸುವುದನ್ನು ಬಿಟ್ಟು ರಾಜಕೀಯ ಮಾಡ್ತಿದ್ದಾರೆ. ಸಂಸದೆ ಶೋಭಾ ಕರಂದ್ಲಾಜೆ ಪ್ರತಿಭಟನೆ ನಡೆಸದಂತೆ ಬೆದರಿಕೆ ಹಾಕುತ್ತಾರೆ. ಪ್ರತಿಭಟನೆ ನಡೆಸುವುದು ರೈತರ ಹಕ್ಕು. ಅದಕ್ಕೂ ಅವಕಾಶ ಇಲ್ಲಾಂದ್ರೆ ಹೇಗೆ ಎಂದು ಪ್ರಶ್ನೆಸಿದರು.

ದೇವೇಗೌಡರು ಈಗಾಗಲೇ ಪ್ರಧಾನಿಗಳಿಗೂ ಪತ್ರ ಬರೆದಿದ್ದಾರೆ.ರೈತರ ವಿಚಾರದಲ್ಲಿ ಎಂದೂ ಸುಮ್ಮನೆ ಕೂರುವುದಿಲ್ಲಾ. ಮಹದಾಯಿ ಹೋರಾಟಗಾರರಿಗೆ ನಮ್ಮ ಬೆಂಬಲ ಇದ್ದೇ ಇರುತ್ತೆ. ಈ ಕೂಡಲೇ ಪ್ರಧಾನಿ ಮೋದಿ ಮಧ್ಯ ಪ್ರವೇಶಿಸಬೇಕು ಎಂದು ಆಗ್ರಹಿಸಿದರು. ಕಾಂಗ್ರೆಸ್ ನಾಯಕರೊಬ್ಬರಿಗೆ ಸೇರಿದಕಲ್ಯಾಣ ಮಂಟಪದಲ್ಲಿ ಹೋರಾಟಗಾರರು ವಾಸ್ತವ್ಯ ಹೂಡಿದ್ದಾರೆ ಎಂಬ ಬಿಜೆಪಿ ಮುಖಂಡರ ಆರೋಪಕ್ಕೆ ತಿರುಗೇಟು ನೀಡಿದ ಮಹಾದಾಯಿ ಹೋರಾಟಗಾರರು ದಿನಕ್ಕೆ 12 ಸಾವಿರ ರೂಪಾಯಿ ಕೊಟ್ಟು ವಾಸ್ತವ್ಯ ಹೂಡಿದ್ದೇವೆ. ಯಾರ ದುಡ್ಡಿನಲ್ಲೂ ನಾವು ವಾಸ್ತವ್ಯದ ಮೊರೆ ಹೋಗಿಲ್ಲ. ಇದು ಕಾಂಗ್ರೆಸ್ ನಾಯಕನಿಗೆ ಸೇರಿದ್ದು ಎಂದು ನಮಗೆ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

Facebook Comments

Sri Raghav

Admin