“ಎಲ್ಲ ಕೆಲ್ಸ ಸರ್ಕಾರ ಮಾಡಿದ್ರೆ ನಾವೇನ್ ಮಾಡೋದು, ರಾಜೀನಾಮೆ ಕೊಟ್ಟು ಮನೆಗೆ ಹೋಗೋಣ ನಡೀರಿ”

ಈ ಸುದ್ದಿಯನ್ನು ಶೇರ್ ಮಾಡಿ

BBMp--Pro--03

ಬೆಂಗಳೂರು, ಡಿ.29-2017 ಬಿಬಿಎಂಪಿಯಲ್ಲಿ ಭ್ರಷ್ಟಾಚಾರದ ವರ್ಷ ಎಂದರೆ ತಪ್ಪಾಗಲಾರದು. ಎಲ್ಲ ಕೆಲಸಗಳನ್ನು ಸರ್ಕಾರವೇ ಮಾಡುತ್ತಿರಬೇಕಾದರೆ ಮೇಯರ್ ಮತ್ತು 198 ಪಾಲಿಕೆ ಸದಸ್ಯರು ಏಕಿರಬೇಕು ಎಲ್ಲರೂ ರಾಜೀನಾಮೆ ಕೊಟ್ಟು ಮನೆಗೆ ಹೋಗೋಣ ನಡೀರಿ ಎಂದು ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ ಪಾಲಿಕೆ ಸಭೆಯಲ್ಲಿ ಆಡಳಿತ ಪಕ್ಷದ ವೈಖರಿಯನ್ನು ತರಾಟೆಗೆ ತೆಗೆದುಕೊಂಡರು.  ಪಾಲಿಕೆಯಲ್ಲಿ 198 ಸದಸ್ಯರು ಆರಿಸಿಬಂದಿದ್ದೇವೆ. 12 ಜನ ಸ್ಟ್ಯಾಂಡಿಂಗ್ ಕಮಿಟಿ ಛೇರ್‍ಮನ್‍ಗಳು ಇದ್ದಾರೆ. ಆದರೆ ಸರ್ಕಾರ ಈ ಎಲ್ಲರನ್ನು ಕಡೆಗಣಿಸಿ ಕೆವಲ 4 ಅಧಿಕಾರಿಗಳು ಸಿದ್ಧಪಡಿಸುವ ಯೋಜನೆಗೆ ರಬ್ಬರ್ ಸ್ಟ್ಯಾಂಪ್‍ನಂತೆ ಪಾಲಿಕೆ ಆಯುಕ್ತರು ಹಾಕುವ ಸಹಿಯನ್ನೇ ಮಾನದಂಡವಾಗಿಟ್ಟುಕೊಂಡು ಕ್ರಿಯಾಯೋಜನೆ ಸಿದ್ಧಪಡಿಸಲಾಗುತ್ತಿದೆ. ಹೀಗಾದರೆ ನಾವಿದ್ದೂ ಏನು ಪ್ರಯೋಜನೆ ಎಂದು ಪ್ರಶ್ನಿಸಿದರು.

ಯಾವುದೇ ಯೋಜನೆ ಜಾರಿಗೆ ಬರಬೇಕಾದರೆ ಅದಕ್ಕೆ ಸಂಬಂಧಪಟ್ಟ ಸ್ಥಾಯಿ ಸಮಿತಿಗೆ ಬರಬೇಕು. ಆ ಸಮಿತಿಯಲ್ಲಿ ಒಪ್ಪಿಗೆ ಪಡೆಯಬೇಕು. ತದನಂತರ ಸರ್ಕಾರಕ್ಕೆ ಹೋಗಬೇಕು. ಇದು ಕಾನೂನು ಪ್ರಕಾರ ನಡೆಯಬೇಕಾದ ನೀತಿ. ಆದರೆ ಸಿದ್ದರಾಮಯ್ಯ ಅವರ ಸರ್ಕಾರ ಮೂರು ದಿನಗಳ ಹಿಂದೆ ಸಾವಿರಾರು ಕೋಟಿಯ ಕ್ರಿಯಾ ಯೋಜನೆ ಸಿದ್ಧಪಡಿಸಿದೆ. ಇದು ನಮ್ಮ ಗಮನಕ್ಕೆ ಬಂದಿಲ್ಲ. ಆಯುಕ್ತರು ಸಹಿ ಹಾಕಿ ಕಳುಹಿಸಿದ್ದಾರೆ. ನೀವೇ ಹೀಗೆ ಸುಖಾಸುಮ್ಮನೆ ಕಳುಹಿಸಿದರೆ, ಸಂವಿಧಾನದ 74ನೆ ತಿದ್ದುಪಡಿಯಂತೆ ನಮಗೇನೂ ಅಧಿಕಾರವೇ ಇಲ್ಲವಾ? ಎಂದು ಖಾರವಾಗಿ ಪ್ರಶ್ನಿಸಿದರು. ಯಾವ ರಸ್ತೆ ಹೇಗೆ ಅಭಿವೃದ್ಧಿ ಮಾಡಬೇಕೆಂಬ ಅಧಿಕಾರವೂ ನಮಗೆ ಇಲ್ಲವಾದ ಮೇಲೆ ನಾವು ಇದ್ದು ಏನು ಪ್ರಯೋಜನ ? ಸಂವಿಧಾನಬದ್ದವಾದ ಅಧಿಕಾರವನ್ನು ನಾವು ಕಳೆದುಕೊಳ್ಳುತ್ತಿದ್ದೇವೆ ಎಂದರು.

ನಾನು ಯಾವುದೇ ಒಂದು ಪಕ್ಷದ ಬಗ್ಗೆ ಹೇಳುತ್ತಿಲ್ಲ ಎಲ್ಲಾ 198 ಸದಸ್ಯರ ಪರವಾಗಿ ಹೇಳುತ್ತಿದ್ದೇನೆ 198 ಸದಸ್ಯರು, 12 ಸ್ಥಾಯಿ ಸಮಿತಿ ಅಧ್ಯಕ್ಷರು, ಮೇಯರ್-ಉಪಮೇಯರ್ ರಾಜೀನಾಮೆ ಕೊಟ್ಟು ಮನೆಗೆ ಹೋಗುವುದೇ ಒಳ್ಳೆಯದು ಎಂದು ಸಲಹೆ ನೀಡಿದರು. ವೈಟ್ ಅಂಡ್ ಬ್ಲಾಕ್ ಮನಿ ಎಂದು ಕೇಳಿಬರುತಿತ್ತು. ಈಗ ನಗರದಲ್ಲಿ ಬ್ಲಾಕ್ ಅಂಡ್ ವೈಟ್ ಕಾಮಗಾರಿ ಪ್ರಾರಂಭವಾಗಿದೆ. ಟಾರ್ ಹಾಕುವುದು ಬ್ಲಾಕ್ ಕಾಮಗಾರಿ, ವೈಟ್ ಟಾಪಿಂಗ್ ಮಾಡುವುದು ವೈಟ್ ಕಾಮಗಾರಿ. ಎಲ್ಲೆಲ್ಲಿ ಕಾಮಗಾರಿ ಮಾಡಿ, ಎಷ್ಟು ಕೋಟಿ ವೆಚ್ಚ ಮಾಡಿದ್ದೇವೆ. ಆದರೆ ಇದ್ಯಾವುದೂ ನಮ್ಮ ಗಮನಕ್ಕೆ ಬರುವುದಿಲ್ಲ. ಎಲ್ಲವೂ ಸರ್ಕಾರದ ಮೂಗಿನ ನೇರಕ್ಕೆ ನಡೆಯುತ್ತಿದೆ ಎಂದು ಹೇಳಿದರು.

ನಗರಾಭಿವೃದ್ಧಿ ಸಚಿವರನ್ನು ಕರೆತರೋಣ, ಜೊತೆಗೆ 12 ಸ್ಥಾಯಿ ಸಮಿತಿಗೂ 12 ಸಚಿವರನ್ನು ಅಧ್ಯಕ್ಷರನ್ನಾಗಿ ಮಾಡೋಣ ಅವರೇ ಅಧಿಕಾರ ನಡೆಸಲಿ. ನಾವೇಲ್ಲ ಅವರ ಸೇವಕರಂತೆ ಕಾರ್ಯನಿರ್ವಹಿಸಿಕೊಂಡು ಇರೋಣ. ಇಷ್ಟೇ ನಮ್ಮ ಅಧಿಕಾರ ಎಂದು ವ್ಯಂಗ್ಯತೆಯ ಮೂಲಕ ಚಾಟಿ ಬೀಸಿದರು.
ಇನ್ನು ಮುಂದಾದರು ಪಾಲಿಕೆಯ 198 ಸದಸ್ಯರು ನಮ್ಮ ಹಕ್ಕು ಚಲಾಯಿಸಲು ಅವಕಾಶ ಪಡೆಯಬೇಕು ಎಂದು ಪದ್ಮನಾಭರೆಡ್ಡಿ ಖಡಕ್ಕಾಗಿ ಹೇಳಿದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin