ತಲಾಖ್ ರದ್ದತಿ ಮಾದರಿಯಲ್ಲೇ ಬಹುಪತ್ನಿತ್ವ ಪದ್ಧತಿ ನಿಷೇಧಕ್ಕೆ ಮುಸ್ಲಿಂ ಮಹಿಳೆಯರ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

polygamy-Muslim--02

ನವದೆಹಲಿ, ಡಿ.30- ತ್ರಿವಳಿ ತಲಾಖ್ ರದ್ದತಿ ಮಾದರಿಯಲ್ಲೇ ಮುಸ್ಲಿಂ ಸಮುದಾಯದ ಬಹುಪತ್ನಿತ್ವ ಪದ್ಧತಿ (ಪಾಲಿಗಾಮಿ)ಯನ್ನು ನಿಷೇಧಿಸುವಂತೆ ಆ ಸಮುದಾಯದ ಮಹಿಳೆಯರು ಪ್ರಧಾನಿ ನರೇಂದ್ರಮೋದಿಯವರಿಗೆ ಮನವಿ ಮಾಡಿಕೊಂಡಿದ್ದಾರೆ.  ಮುಸ್ಲಿಂ ಮಹಿಳೆಯರ ಹಕ್ಕು ರಕ್ಷಣೆಗಾಗಿ ತ್ರಿವಳಿ ತಲಾಖ್ ರದ್ದತಿಗೆ ಲೋಕಸಭೆಯಲ್ಲಿ ಅನುಮೋದನೆ ದೊರೆತಿರುವ ಬೆನ್ನಲ್ಲೆ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಆ ಸಮುದಾಯದ ವನಿತೆಯರು ಈಗ ಬಹುಪತ್ನಿತ್ವ ಪದ್ಧತಿ ವಿರುದ್ಧ ದೊಡ್ಡ ಮಟ್ಟದಲ್ಲಿ ಸಮರ ಸಾರಲು ಮುಂದಾಗಿದ್ದಾರೆ. ತ್ರಿವಳಿ ತಲಾಖ್‍ನಂತೆಯೇ ಮುಸ್ಲಿಂ ಸಮುದಾಯದ ಅಸಂಖ್ಯಾತ ಮಹಿಳೆಯರ ಬದುಕನ್ನು ದುಸ್ತರಗೊಳಿಸಿದೆ ಮತ್ತು ಜೀವನವನ್ನು ಅತಂತ್ರಗೊಳಿಸುತ್ತಿದೆ ಎನ್ನಲಾದ ಬಹುಪತ್ನಿತ್ವ ಪದ್ಧತಿಯನ್ನೂ ರದ್ದುಗೊಳಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮುಂದಾಗಬೇಕೆಂದು ಮುಸ್ಲಿಂ ವನಿತೆಯರು ಈಗ ದೊಡ್ಡ ಮಟ್ಟದಲ್ಲಿ ಧ್ವನಿ ಎತ್ತಿದ್ದಾರೆ.

ತ್ರಿವಳಿ ತಲಾಖ್ ರದ್ದತಿಗೆ ಲೋಕಸಭೆಯಲ್ಲಿ ಅನುಮೋದನೆ ದೊರೆತಿರುವುದು ನಮ್ಮ ಹೋರಾಟಕ್ಕೆ ಸಂದ ಗೆಲುವಾಗಿದೆ. ಆದರೆ, ತ್ರಿವಳಿ ತಲಾಖ್ ರದ್ದುಪಡಿಸುವುದರಿಂದ ಮಾತ್ರ ನಮ್ಮ ಬದುಕು ಹಸನಾಗುವುದಿಲ್ಲ. ಬಹುಪತ್ನಿತ್ವ ಪದ್ಧತಿ ಮುಸ್ಲಿಂ ಮಹಿಳೆಯರ ಜೀವನವನ್ನು ಮೂರಾಬಟ್ಟೆ ಮಾಡಿದೆ ಎಂಬುದು ವನಿತೆಯರ ಒಕ್ಕೊರಲ ಅಭಿಪ್ರಾಯವಾಗಿದೆ.ತ್ರಿವಳಿ ತಲಾಖ್ ವಿರುದ್ಧ ದೀರ್ಘಕಾಲ ಹೋರಾಟ ನಡೆಸಿ ಯಶಸ್ಸು ಕಂಡಿರುವುದರಿಂದ ಉತ್ತೇಜಿತರಾಗಿರುವ ಮುಸ್ಲಿಂ ಮಹಿಳೆಯರು ಈಗ ಬಹುಪತ್ನಿತ್ವ ಪಿಡುಗಿನ ವಿರುದ್ಧವೂ ಹೋರಾಟದ ರೂಪುರೇಷೆಗಳನ್ನು ರೂಪಿಸುತ್ತಿದ್ದು, ಸರ್ಕಾರದ ಸಾಥ್ ಬಯಸಿದ್ದಾರೆ.

ಮುಸ್ಲಿಂ ಮಹಿಳೆಯರ ಈ ಹೊಸ ಆಂದೋಲನಕ್ಕೆ ಈಗಾಗಲೇ ಅನೇಕ ಸಂಘ-ಸಂಸ್ಥೆಗಳು, ಹಿರಿಯ ವಕೀಲರು ಬೆಂಬಲ ನೀಡುವುದಾಗಿ ಪ್ರಕಟಿಸಿದ್ದು, ಮತ್ತೊಂದು ಸುತ್ತಿನ ಹೋರಾಟಕ್ಕೆ ವೇದಿಕೆ ಸಜ್ಜುಗೊಂಡಿದೆ.  ತ್ರಿವಳಿ ತಲಾಖ್ ಮಾದರಿಯಲ್ಲಿಯೇ ಬಹುಪತ್ನಿತ್ವ ಸಂಪ್ರದಾಯಕ್ಕೆ ಕಡಿವಾಣ ಹಾಕಲು ಕಾನೂನು ಸಾಧಕ-ಬಾಧಕಗಳ ಬಗ್ಗೆ ಮುಸ್ಲಿಂ ಮಹಿಳೆಯರ ಪರ ವಕೀಲರು ಈಗಾಗಲೇ ಗಂಭೀರ ಚಿಂತನೆ ನಡೆಸುತ್ತಿದ್ದು, ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುತ್ತಿದ್ದಾರೆ.

ಅಖಿಲ ಭಾರತ ಮುಸ್ಲಿಂ ಮಹಿಳೆಯರ ವೈಯಕ್ತಿಕ ಕಾನೂನು ಮಂಡಳಿ (ಎಐಎಂಡಬ್ಲ್ಯೂಟಿಎಲ್‍ಬಿ) ಸಹ ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಬಹುಪತ್ನಿತ್ವ ನಿಷೇಧಕ್ಕೆ ಆಗ್ರಹಿಸಿ ನಡೆಯಲಿರುವ ಹೋರಾಟ ಉಗ್ರ ಸ್ವರೂಪ ಪಡೆದುಕೊಳ್ಳುವ ಸ್ಪಷ್ಟ ಲಕ್ಷಣಗಳು ಗೋಚರಿಸುತ್ತಿವೆ. ಮುಸ್ಲಿಂ ಮಹಿಳಾ ಸಬಲೀಕರಣ ವಿಷಯದಲ್ಲಿ ಬಹುಪತ್ನಿತ್ವ ನಿಷೇಧವು ಪ್ರಮುಖ ಅಸ್ತ್ರವಾಗಲಿದೆ ಎಂದು ಆ ಸಮುದಾಯದ ಮಹಿಳೆಯರ ಒಕ್ಕೊರಲ ಅಭಿಪ್ರಾಯವಾಗಿದೆ.

Facebook Comments

Sri Raghav

Admin