ಬಿಜೆಪಿ ‘ಮಹಾ’ಇಕ್ಕಟ್ಟಿನಲ್ಲಿ ಸಿಲುಕಿರುವಾಗಲೇ ರಾಜ್ಯಕ್ಕಾಗಮಿಸುತ್ತಿದ್ದಾರೆ ಚುನಾವಣಾ ಚಾಣಕ್ಯ

ಈ ಸುದ್ದಿಯನ್ನು ಶೇರ್ ಮಾಡಿ

Amit-Shah--01

ಬೆಂಗಳೂರು, ಡಿ.30-ಮಹದಾಯಿ ನದಿ ನೀರು ವಿವಾಹ ಪ್ರತ್ಯೇಕ ಲಿಂಗಾಯಿತ ಧರ್ಮ ಸೇರಿದಂತೆ ಹಲವು ವಿವಾದಗಳು ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿರುವ ಬೆನ್ನಲ್ಲೇ ಕೈಗೊಳ್ಳಬೇಕಾದ ಪರಿಹಾರ ಹಾಗೂ ವಿಧಾನಸಭೆ ಚುನಾವಣೆಗೆ ರಣತಂತ್ರ ರೂಪಿಸಲು ನಾಳೆ ಬಿಜೆಪಿ ಚಾಣಾಕ್ಷ ಅಮಿತ್ ಷಾ ಬೆಂಗಳೂರಿಗೆ ಆಗಮಿಸಲಿದ್ದಾರೆ.  ನಾಳೆ ಅಮಿತ್ ಷಾ ಅವರು ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ , ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್, ಕೇಂದ್ರ ಸಚಿವರಾದ ಅನಂತಕುಮಾರ್, ಸದಾನಂದಗೌಡ, ಕೋರ್ ಕಮಿಟಿ ಸದಸ್ಯರಾದ ಜಗದೀಶ್ ಶೆಟ್ಟರ್, ಈಶ್ವರಪ್ಪ , ಆರ್.ಅಶೋಕ್, ನಳಿನ್‍ಕುಮಾರ್ ಕಟೀಲ್, ಗೋವಿಂದ ಕಾರಜೋಳ ಸೇರಿದಂತೆ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು, ಪದಾಧಿಕಾರಿಗಳು ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ.

ದಿನಪೂರ್ತಿ ಪಕ್ಷದ ಪ್ರಮುಖರ ಜೊತೆ ಸರಣಿ ಸಭೆ ನಡೆಸಲಿರುವ ಅಮಿತ್ ಷಾ ಪಕ್ಷದ ಸಂಘಟನೆ, ಪರಿವರ್ತನಾ ರಥಯಾತ್ರೆ, ರಾಜ್ಯ ಸರ್ಕಾರದ ವಿರುದ್ದ ಹೋರಾಟ, ಕೇಂದ್ರ ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ತಿಳಿಸುವುದು, ಸದಸ್ಯತ್ವ ನೋಂದಾವಣಿ ಸೇರಿದಂತೆ ಮತ್ತಿತರ ಪ್ರಮುಖ ವಿಷಯಗಳ ಬಗ್ಗೆ ಅಮಿತ್ ಷಾ ಚರ್ಚೆ ನಡೆಸುವರು.  ಕಳೆದ ಬಾರಿ ರಾಜ್ಯಕ್ಕೆ ಆಗಮಿಸಿದ್ದ ಅಮಿತ್ ಷಾ ಪಕ್ಷ ಸಂಘಟನೆ, ಆತಂರಿಕ ಕಚ್ಚಾಟ, ಭಿನ್ನಮತದ ಬಗ್ಗೆ ರಾಜ್ಯ ನಾಯಕರನ್ನು ನೇರವಾಗೇ ತರಾಟೆಗೆ ತೆಗೆದುಕೊಂಡಿದ್ದರು.

ಯಡಿಯೂರಪ್ಪ , ಈಶ್ವರಪ್ಪ ನಡುವಿನ ಬ್ರಿಗೇಡ್ ಕಿತ್ತಾಟ ಹಾದಿಬೀದಿಯಲ್ಲಿ ರಾದ್ದಾಂತ ಸೃಷ್ಟಿಸಿತ್ತು. ಕೊನೆಗೆ ಅಮಿತ್ ಷಾ ಮಧ್ಯಪ್ರವೇಶಿಸಿ ಇಬ್ಬರ ನಡುವೆ ರಾಜಿಸಂಧಾನ ನಡೆಸಿದ್ದರು. ಇದಾದ ಬಳಿಕ ಭಯ ನಾಯಕರ ನಡುವೆ ಸಂಬಂಧ ಸುಧಾರಿಸಿದೆಯಾದರೂ ಹೇಳಿಕೊಳ್ಳುವಂತಹ ಮಟ್ಟಕ್ಕೆ ಬಂದಿಲ್ಲ.
ಈಗಾಗಲೇ 140 ವಿಧಾನಸಭಾ ಕ್ಷೇತ್ರಗಳನ್ನು ಪೂರೈಸಿರುವ ಪರಿವರ್ತನಾ ರಥಯಾತ್ರೆ ಒಂದಿಷ್ಟು ಅಪಸ್ವರಗಳ ನಡುವೆಯೂ ಯಶಸ್ವಿಯಾಗಿ ಜರುಗಿದೆ. ಪ್ರಾರಂಭದಲ್ಲಿ ನಿರೀಕ್ಷಿಸಿದಂತೆ ಸಾರ್ವಜನಿಕರಿಂದ ಉತ್ತಮ ಅಭಿಪ್ರಾಯ ಕಂಡುಬರಲಿಲ್ಲ.  ತದನಂತರ ಪಕ್ಷದ ನಾಯಕರು ಒಗ್ಗಟ್ಟು ಪ್ರದರ್ಶಿಸಿದ ಪರಿಣಾಮ ಯಶಸ್ವಿಯಾಗಿದೆ ಎಂದೇ ಹೇಳಲಾಗುತ್ತಿದೆ. ಇದರ ಬಗ್ಗೆಯೂ ಅಮಿತ್ ಷಾ ನಾಯಕರಿಂದ ವಿವರಣೆ ಪಡೆಯುವರು.

ಇನ್ನು ಬಿಜೆಪಿಗೆ ಬೆಂಬಿಡದ ಭೂತದಂತೆ ಕಾಡುತ್ತಿರುವುದು ಮಹದಾಯಿ ನದಿ ನೀರು ವಿವಾದ. 15 ದಿನದಲ್ಲಿ ಸಿಹಿ ಸುದ್ದಿ ಕೊಡುತ್ತೇನೆ ಎಂದು ವಾಗ್ದಾನ ಮಾಡಿದ್ದ ಯಡಿಯೂರಪ್ಪ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಇಂದ ಬಂದ ಪತ್ರ ಬಿಜೆಪಿಗೆ ಭಾರೀ ಮುಜುಗರ ತಂದಿದೆ. ಮಿಷನ್ 150 ಎಂದು ಅಬ್ಬರಿಸುತ್ತಿದ್ದ ಕಮಲ ನಾಯಕರಿಗೆ ಮಹದಾಯಿ ವಿವಾದ ದಿನದಿಂದ ದಿನಕ್ಕೆ ಸುತ್ತಿಕೊಳ್ಳುತ್ತಿದೆ. ಅತ್ತ ಗೋವಾ ಸರ್ಕಾರ ವಿವಾದವನ್ನು ಪರಿಹರಿಸಲು ಮುಂದೆ ಬರುತ್ತಿಲ್ಲ. ಇತ್ತ ಪ್ರತಿಪಕ್ಷಗಳು ಇದನ್ನೇ ಅಸ್ತ್ರವಾಗಿ ಮಾಡಿಕೊಂಡು ಬಿಜೆಪಿಗೆ ಮುಜುಗರ ಸೃಷ್ಟಿಸುತ್ತಿದೆ.

ಇದೀಗ ವಿವಾದದ ಚೆಂಡು ಬಿಜೆಪಿ ಅಂಗಳಕ್ಕೆ ಬಂದಿದ್ದು , ಮಹದಾಯಿ ಬಿಕ್ಕಟ್ಟನ್ನು ಖುದ್ದು ಪ್ರಧಾನಿಯೇ ಮಧ್ಯಪ್ರವೇಶಿಸಿ ಪರಿಹರಿಸಬೇಕು, ನಾಳೆ ಆಗಮಿಸಲಿರುವ ಅಮಿತ್ ಷಾಗೆ ರಾಜ್ಯ ನಾಯಕರು ಇಲ್ಲಿನ ಪರಿಸ್ಥಿತಿಯನ್ನು ಮನವರಿಕೆ ಮಾಡಲಿದ್ದಾರೆ.  ಬಿಕ್ಕಟ್ಟು ಪರಿಹಾರವಾಗದಿದ್ದರೆ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಭಾರೀ ಹಿನ್ನಡೆಯಾಗಲಿದೆ. ಉದ್ದೇಶದ ಗುರಿಯನ್ನು ತಲುಪಲು ಸಾಧ್ಯವಾಗಿಲ್ಲ ಎಂಬ ವಸ್ತುಸ್ಥಿತಿಯನ್ನು ವಿವರಿಸಲಿದ್ದಾರೆ.  ಪ್ರಧಾನಿ ಮಧ್ಯಪ್ರವೇಶಿಸದಿದ್ದರೆ ಬಿಕ್ಕಟ್ಟು ಇತ್ಯರ್ಥವಾಗುವುದಿಲ್ಲ. ಹೇಗಾದರೂ ಮಾಡಿ ಮೋದಿ ಅವರನ್ನು ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಬಿಕ್ಕಟ್ಟು ಪರಿಹಾರಕ್ಕೆ ಮುಂದಾಗಬೇಕೆಂದು ಮನವಿ ಮಾಡುವರು.

ಉಳಿದಂತೆ ಕಳೆದ ಬಾರಿ ರಾಜ್ಯಕ್ಕೆ ಆಗಮಿಸಿದ್ದ ಅಮಿತ್ ಷಾ ಒಬ್ಬೊಬ್ಬ ಸಂಸದರು ಮತ್ತು ಶಾಸಕರಿಗೆ ಎರಡೆರಡು ವಿಧಾನಸಭಾ ಕ್ಷೇತ್ರಗಳ ಹೊಣೆಗಾರಿಕೆ ನೀಡಿದ್ದರು. ಒಬ್ಬ ಶಾಸಕರು ತಾವು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರದ ಜೊತೆಗೆ ಪಕ್ಕದ ಕ್ಷೇತ್ರವನ್ನು ಗೆಲ್ಲಿಸಬೇಕೆಂಬುದು ಷಾ ಅವರ ಸೂಚನೆಯಾಗಿತ್ತು.
17 ಸಂಸದರಿಗೂ ಕೂಡ ಇದೇ ಹೊಣೆಗಾರಿಕೆಯನ್ನು ನೀಡಿದ್ದರು. ತಾವು ರಾಜ್ಯಕ್ಕೆ ಭೇಟಿ ಕೊಟ್ಟ ನಂತರ ಪಕ್ಷ ಸಂಘಟನೆ ಎಷ್ಟರ ಮಟ್ಟಿಗೆ ನಡೆದಿದೆ ಎಂಬುದರ ಬಗ್ಗೆ ವಿವರಣೆ ಪಡೆಯುವರು.  ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ಯಶಸ್ವಿಗೆಲುವಿನ ಅಭಿಯಾನವನ್ನು ಮುಂದುವರೆಸಿರುವ ಬಿಜೆಪಿ ಇದೀಗ ತನ್ನ ಚಿತ್ತವನ್ನು ಕರ್ನಾಟಕದತ್ತ ನೆಟ್ಟಿದೆ.

ಕಾಂಗ್ರೆಸ್ ಆಡಳಿತವಿರುವ ಏಕೈಕ ದೊಡ್ಡ ರಾಜ್ಯವೆಂದರೆ ಕರ್ನಾಟಕ. ಪಕ್ಷದ ಧ್ಯೇಯೋದ್ದೇಶವಾದ ಕಾಂಗ್ರೆಸ್ ಮುಕ್ತ ಭಾರತಗೊಳಿಸಬೇಕಾದರೆ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕೆಂಬ ಉದ್ದೇಶದಿಂದ ಅಮಿತ್ ಷಾ ಚುನಾವಣೆಗೆ ರಣತಂತ್ರ ರೂಪಿಸುವರು. ಜ.28ರಂದು ನಡೆಯಲಿರುವ ಪರಿವರ್ತನಾ ರಥಯಾತ್ರೆಯ ಸಮಾರೋಪ ಸಮಾರಂಭಕ್ಕೆ ಸುಮಾರು 5 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರನ್ನು ಸೇರಿಸುವ ಉದ್ದೇಶ ಬಿಜೆಪಿ ಹೊಂದಿದೆ.

Facebook Comments

Sri Raghav

Admin