ಒತ್ತಾಯ ಮಾಡಿದರೆ ರಾಜಕೀಯಕ್ಕೆ ಬರಲು ರೆಡಿ : ಪ್ರಕಾಶ್‍ರೈ

ಈ ಸುದ್ದಿಯನ್ನು ಶೇರ್ ಮಾಡಿ

Prakash-Rai--02

ಬೆಂಗಳೂರು, ಡಿ.31-ನನಗೆ ರಾಜಕೀಯದ ಆಸೆ ಇಲ್ಲ. ಆದರೆ ಒತ್ತಾಯ ಮಾಡಿದರೆ ರಾಜಕೀಯಕ್ಕೆ ಬರಲು ಸಿದ್ಧ. ರಾಜಕೀಯ ಕಷ್ಟ. ಅದಕ್ಕೊಂದು ಜವಾಬ್ದಾರಿ ಇದೆ. ಅದರಿಂದ ನುಣುಚಿಕೊಳ್ಳಲೂ ಇಷ್ಟಪಡುವುದಿಲ್ಲ ಎಂದು ಖ್ಯಾತ ನಟ, ಕಲಾವಿದ ಪ್ರಕಾಶ್ ರೈ ಹೇಳಿದ್ದಾರೆ. ನಗರದ ಪ್ರೆಸ್‍ಕ್ಲಬ್‍ನಲ್ಲಿಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರೆಸ್‍ಕ್ಲಬ್ ವರ್ಷದ ವ್ಯಕ್ತಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಪದೇ ಪದೇ ಸವಾಲು ಹಾಕಿದರೆ ತಾವು ರಾಜಕೀಯಕ್ಕೆ ಬರಲು ಸಿದ್ಧ. ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ಬೆಂದಕಾಳೂರು ಎಂಬ ಹೆಸರಿದೆ. ಇಲ್ಲಿ ಸಮಾಜದ ಶಾಂತಿ ಕದಡುವವರ ಬೇಳೆ ಬೇಯಲು ಅವಕಾಶ ಕೊಡಬಾರದು ಎಂದು ತಿಳಿಸಿದರು.

ನಮ್ಮವರಲ್ಲದೆ ಇರುವವರು ಇಲ್ಲಿ ಬಂದು ಆಡಳಿತ ಮಾಡಲು ಅವಕಾಶ ನೀಡಬಾರದು. ನೀವು ಯಾರು ಎಂಬ ಪ್ರಶ್ನೆ ಕೇಳಬೇಕು. ಮನೆ ಮನೆಗೆ ಹೋಗಿ ಸುಖ-ಶಾಂತಿ ಕದಡುತ್ತಿರುವವರ ಮಾಹಿತಿ ಕೊಟ್ಟು ಅಂತಹ ಶಕ್ತಿಗಳನ್ನು ಹಿಮ್ಮೆಟ್ಟಿಸಬೇಕು ಎಂದು ಕರೆ ನೀಡಿದರು. ಗೌರಿ ಲಂಕೇಶ್ ಅವರ ಹತ್ಯೆ ನಂತರ ನಾನು ವಿಚಲಿತನಾದೆ. ನನ್ನಲ್ಲಿ ಸಾಕಷ್ಟು ಪರಿವರ್ತನೆಯಾಯಿತು. ಆ ನಂತರದಲ್ಲಿ ನಾನು ವ್ಯಕ್ತಿಯಾಗಿ ಮಾತನಾಡಲಾರಂಭಿಸಿದೆ. ಜಸ್ಟ್ ಆಸ್ಕಿಂಗ್ ಹ್ಯಾಷ್ ಟ್ಯಾಗ್ ಜೊತೆ ಹಲವಾರು ಪ್ರಶ್ನೆಗಳನ್ನು ಕೇಳಿದ್ದೇನೆ. ನನಗೆ ಯಾವುದೇ ರೀತಿಯ ಜಾತಿಭೇದ ಇಲ್ಲ, ಯಾವುದೇ ಪಕ್ಷದ ಪರವಾಗಿಯೂ ನಾನಿಲ್ಲ ಎಂದು ಸ್ಪಷ್ಟಪಡಿಸಿದರು.

ಒಂದೇ ಧರ್ಮದವರಲ್ಲಿ ಹೀಗೇಕೆ ಬೇರೆ ಬೇರೆ ಎಂಬ ಧೋರಣೆ ಹಿಟ್ಲರ್ ಕಾಲದ್ದು. ಈಗ ಅದಕ್ಕೆ ಅವಕಾಶ ಕೊಡಬಾರದು. ನನಗೆ ಹಣ, ಯಶಸ್ಸು ಎಲ್ಲಾ ಸಿಕ್ಕಿದೆ. ನೆಮ್ಮದಿಯ ಜೀವನ ಬಿಟ್ಟು ಯಾಕೆ ಮಾತನಾಡಲು ಆರಂಭಿಸಿದ್ದೇನೆ ಎಂದರೆ ಈ ಸಮಾಜದಲ್ಲಿ ರಾಜಕೀಯ, ಸಾಮಾಜಿಕ ಪರಿಸ್ಥಿತಿ ಬಗ್ಗೆ ಎಲ್ಲರಿಗೂ ಮಾಹಿತಿ ಇರಬೇಕು ಎಂದರು.  ನನಗೆ ಪ್ರಶ್ನೆ ಮಾಡುವ ಧೈರ್ಯ ತಂದುಕೊಟ್ಟವರು ಹಿರಿಯ ಪತ್ರಕರ್ತರು. ಅವರ ಮಾರ್ಗದರ್ಶನದಲ್ಲಿ ಬೆಳೆದ ಏಕಲವ್ಯ ನಾನು. ಧರ್ಮ ವಿನಯವಂತಿಕೆಯನ್ನು ಬೆಳೆಸಬೇಕೇ ಹೊರತು ಸರ್ವಾಧಿಕಾರಿಯನ್ನಲ್ಲ. ಇನ್ನಷ್ಟು ಗಟ್ಟಿಯಾಗಿ ಮಾತನಾಡಲು ಪ್ರೆಸ್‍ಕ್ಲಬ್ ನೀಡಿರುವ ವರ್ಷದ ವ್ಯಕ್ತಿ ಪ್ರಶಸ್ತಿ ಧೈರ್ಯ ತಂದುಕೊಟ್ಟಿದೆ ಎಂದು ಅಭಿಪ್ರಾಯಪಟ್ಟರು.

Facebook Comments

Sri Raghav

Admin