ಗುಜರಾತ್ : ಸರ್ಕಾರ ರಚಿಸುವುದಾದರೆ ಬೆಂಬಲ ನೀಡುವುದಾಗಿ ನಿತಿನ್ ಪಟೇಲ್‍ಗೆ ಕಾಂಗ್ರೆಸ್ ಆಫರ್

ಈ ಸುದ್ದಿಯನ್ನು ಶೇರ್ ಮಾಡಿ

Nitin-Pate--02ಗಾಂಧಿನಗರ, ಡಿ.31-ಗುಜರಾತ್‍ನಲ್ಲಿ ಸತತ ಆರನೇ ಬಾರಿ ಅಧಿಕಾರ ಗದ್ದುಗೆಗೆ ಏರಿರುವ ನೂತನ ಬಿಜೆಪಿ ಸರ್ಕಾರದಲ್ಲಿ ಭಿನ್ನಮತ ಆಸ್ಫೋಟಗೊಂಡ ಬೆನ್ನಲ್ಲೇ ಬಿರುಸಿನ ರಾಜಕೀಯ ಬೆಳವಣಿಗೆ ಕಾರಣವಾಗಿದೆ. ಖಾತೆ ಹಂಚಿಕೆ ವಿಷಯದಲ್ಲಿ ಮುಖ್ಯಮಂತ್ರಿ ವಿಜಯ್ ರೂಪಾಣಿ ವಿರುದ್ಧ ತೀವ್ರ ಅಸಮಾಧಾನಗೊಂಡಿರುವ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್‍ರನ್ನು ಕಾಂಗ್ರೆಸ್ ಬೆಂಬಲದೊಂದಿಗೆ ಸರ್ಕಾರ ರಚಿಸಲು ಕೈ ಶಾಸಕರು ಆಹ್ವಾನ ನೀಡಿದ್ದಾರೆ.

ತಮ್ಮ ಬೆಂಬಲಿಗ ಶಾಸಕರೊಂದಿಗೆ ನಿತಿನ್ ಪಟೇಲ್ ಬಿಜೆಪಿಯಿಂದ ಹೊರಬಂದರೆ ಅವರು ಮುಖ್ಯಮಂತ್ರಿಯಾಗಲು ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಪಕ್ಷದ ಹಿರಿಯ ನಾಯಕರು ಮತ್ತು ಶಾಸಕರು ತಿಳಿಸಿದ್ದಾರೆ.   ನಿತಿನ್ ಅವರಿಗೆ ಈ ಆಹ್ವಾನ ನೀಡಿರುವ ಕಾಂಗ್ರೆಸ್ ಹಿರಿಯ ಶಾಸಕ ವೀರ್ಜಿ ಥುಮ್ಮರ್, 10 ರಿಂದ 15 ಶಾಸಕರ ಜೊತೆ ಬಿಜೆಪಿಯಿಂದ ಅವರು ಹೊರ ಬಂದರೆ ತಮ್ಮ ಪಕ್ಷವು ಬಾಹ್ಯ ಬೆಂಬಲ ನೀಡುತ್ತದೆ ಎಂದು ಮುಕ್ತ ಮನಸ್ಸಿನಿಂದ ಆಹ್ವಾನಿಸಿದ್ದಾರೆ.

ನಿತಿನ್‍ಭಾಯ್ ಪಟೇಲ್ ಅವರ ಬಳಿ ಇದ್ದ ಮಹತ್ವದ ಖಾತೆಗಳನ್ನು ಕಿತ್ತುಕೊಳ್ಳಲಾಗಿದೆ. ಬಿಜೆಪಿ ಅವರನ್ನು ದುರ್ಬಳಕೆ ಮಾಡಿಕೊಂಡಿದೆ. ಅವರು ಅಗತ್ಯವಿರುವಷ್ಟು ಶಾಸಕರೊಂದಿಗೆ ಪಕ್ಷದಿಂದ ಹೊರಬಂದರೆ, ಗುಜರಾತ್ ಅಭಿವೃದ್ಧಿ ಮತ್ತು ರೈತರ ಹಿತಚಿಂತನೆ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯನಿರ್ವಹಿಸಬಹುದು ಎಂದು ಅವರು ಹೇಳಿದ್ದಾರೆ.   ಕಾಂಗ್ರೆಸ್ ಪಕ್ಷದ ವಕ್ತಾರ ಮನೀಷ್ ಜೋಷಿ ಸಹ ಇದೇ ಮಾತನ್ನು ಹೇಳಿದ್ದಾರೆ. ಪಾಟೀದಾರ್ ಮುಖಂಡ ಮತ್ತು ಶಾಸಕ ಹಾರ್ದಿಕ್ ಪಟೇಲ್ ಕೂಡ ಈಗಾಗಲೇ ನಿತಿನ್ ಅವರನ್ನು ಸ್ವಾಗತಿಸಿದ್ದಾರೆ.

ಪ್ರಮಾಣ ವಚನ ಸ್ವೀಕರಿಸಿದ 20 ಮಂತ್ರಿಗಳಲ್ಲಿ ಹಲವು ಸಚಿವರು ಶುಕ್ರವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಆದರೆ ಹಣಕಾಸು, ನಗರಾಭಿವೃದ್ಧಿ ಮತ್ತು ಪೆಟ್ರೋಲಿಯಂ ಸೇರಿದಂತೆ ಮಹತ್ವದ ಖಾತೆಗಳಿಂದ ವಂಚಿತರಾದ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಸಚಿವಾಲಯದಲ್ಲಿ ಪದಗ್ರಹಣ ಮಾಡದಿರುವುದು ಹೊಸ ಬಿಜೆಪಿ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ತೋರಿಸುತ್ತದೆ.. ಗುಜರಾತ್‍ನಲ್ಲಿ ರಾಜಕೀಯ ಬೆಳವಣಿಗೆಯಿಂದಾಗಿ 2016ರಲ್ಲಿ ಹೊಸ ಸರ್ಕಾರ ರಚನೆ ವೇಳೆ ನಿತಿನ್ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದರು. ಕೊನೆ ಕ್ಷಣದಲ್ಲಿ ಅವರು ಉಪ ಮುಖ್ಯಮಂತ್ರಿ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಈ ತ್ಯಾಗ ಮಾಡಲು ಅವರು ಮುಂದಿಟ್ಟಿದ್ದ ಕೆಲವು ಬೇಡಿಕೆಗಳು ಈಡೇರಲಿಲ್ಲ.

ಈ ಬಾರಿಯೂ ಅವರು ಹಣಕಾಸು ಮತ್ತು ನಗರಾಭಿವೃದ್ದಿ ಖಾತೆಯನ್ನು ಹೊಂದಲು ಒಲವು ವ್ಯಕ್ತಪಡಿಸಿದ್ದರು. ಆದರೆ ಅವರ ಆಸೆಗೆ ತಣ್ಣೀರು ಎರಚಲಾಗಿದ್ದು, ಮತ್ತೆ ಅವರು ಪರೋಕ್ಷವಾಗಿ ಅಪಮಾನಕ್ಕೆ ಗುರಿಯಾಗಿದ್ದಾರೆ ಎಂದು ಅವರ ನಿಕಟವರ್ತಿಗಳು ಹೇಳಿದ್ದಾರೆ. ಹಣಕಾಸು ಖಾತೆಯನ್ನು ತಮಗಿಂತ ಕಿರಿಯರಾದ ಸೌರಭ್ ಪಟೇಲ್ ಅವರಿಗೆ ನೀಡಿರುವುದು ಹಾಗೂ ನಗರಾಭಿವೃದ್ದಿ ಮತ್ತು ಪೆಟ್ರೋಲಿಯಂ ಖಾತೆಗಳನ್ನು ಮುಖ್ಯಮಂತ್ರಿ ತಮ್ಮ ಬಳಿಯೇ ಉಳಿಸಿಕೊಂಡಿರುವು ನಿತಿನ್ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin