ಲೋಕಸಭೆಯಲ್ಲಿ ಮಾರ್ದನಿಸಿದ ಮಹದಾಯಿ ವಿಚಾರ, ಮೋದಿ ಮಧ್ಯಸ್ಥಿಕೆಗೆ ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

Mahadayi--02

ನವದೆಹಲಿ, ಜ.2-ಉತ್ತರ ಕರ್ನಾಟಕದ ಭಾಗಗಳಿಗೆ ನೀರು ಪೂರೈಸುವ ಮಹತ್ವದ ಮಹದಾಯಿ ಯೋಜನೆ ಅನುಷ್ಠಾನ ಕುರಿತು ಲೋಕಸಭೆಯಲ್ಲಿಂದು ಚರ್ಚೆ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ, ವಾದ-ವಾಗ್ವಾದ ನಡೆದು ಸದನದಲ್ಲಿ ಗದ್ದಲ- ಕೋಲಾಹಲ ವಾತಾವರಣ ಸೃಷ್ಟಿಯಾಯಿತು. ಪ್ರಶ್ನೋತ್ತರ ಕಲಾಪದಲ್ಲಿ ಇಂದು ಈ ವಿಷಯ ಪ್ರಸ್ತಾಪಿಸಿದ ಸಂಸದ (ತುಮಕೂರು) ಸ್.ಪಿ.ಮುದ್ದಹನುಮೇಗೌಡರು, ಜನರಿಗೆ ಕುಡಿಯುವ ನೀರು ಪೂರೈಸಲ ಮಹದಾಯಿ ಯೋಜನೆ ಅನುಷ್ಠಾನಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸಬೇಕೆಂದು ಲೋಕಸಭೆಯಲ್ಲಿ ಆಗ್ರಹಿಸಿದರು.

ಜನರಿಗೆ ಕುಡಿಯುವ ನೀರು ಪೂರೈಸುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜವಾಬ್ದಾರಿ. ಮಹದಾಯಿ ನೀರಿಗಾಗಿ ಉತ್ತರ ಕರ್ನಾಟಕದ ಜನರು ಪ್ರತಿಭಟನೆ ಮತ್ತು ಧರಣಿ ನಡೆಸುತ್ತಿದ್ದಾರೆ. ಆದ್ದರಿಂದ ಈ ಮಹತ್ವದ ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎಂದು ಅವರು ಒತ್ತಾಯಿಸಿದರು. ಮಹದಾಯಿ ಯೋಜನೆ ಅನುಷ್ಠಾನಕ್ಕಾಗಿ ಆಗ್ರಹಿಸಿ ನರಗುಂದದಲ್ಲಿ ರೈತರು 900 ದಿನಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದಾರೆ ಎಂಬ ಸಂಗತಿಯನ್ನು ಅವರು ಸದನದ ಗಮನಕ್ಕೆ ತಂದರು.

ಮಹದಾಯಿ ಯೋಜನೆ ಕರ್ನಾಟಕದ ಉತ್ತರ ಭಾಗಕ್ಕೆ ಅನಿವಾರ್ಯ. ಅದೇ ರೀತಿ ಮೇಕೆದಾಟು ಯೋಜನೆ ದಕ್ಷಿಣ ಭಾಗಕ್ಕೆ ಮುಖ್ಯ. ಈ ಎರಡೂ ಮುಖ್ಯ ಯೋಜನೆಗಳನ್ನು ಜಾರಿಗೊಳಿಸಲು ಪ್ರಧಾನಿಯವರು ಮಧ್ಯಸ್ಥಿಕೆ ವಹಿಸುವುದು ಅಗತ್ಯ. ಈ ಹಿಂದೆ ಅಂತಾರಾಜ್ಯ ಜಲ ವಿವಾದಗಳು ತಲೆದೋರಿದ್ದಾಗ ಆಗಿನ ಪ್ರಧಾನಮಂತ್ರಿ ಇಂದಿರಾಗಾಂಧಿಯವರು ಸಮಸ್ಯೆ ಬಗೆಹರಿಸಿದ್ದರು. ಹೀಗಾಗಿ ಪ್ರಧಾನಿಯವರ ಮಧ್ಯ ಪ್ರವೇಶದಿಂದ ಮಾತ್ರ ಈ ಸಮಸ್ಯೆ ಇತ್ಯರ್ಥ ಸಾಧ್ಯ ಎಂದು ಅವರು ಹೇಳಿದರು.

ಸರ್ಕಾರದ ಪರವಾಗಿ ಉತ್ತರ ನೀಡಿದ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್, ಮಹದಾಯಿ ಯೋಜನೆ ಅನುಷ್ಠಾನಕ್ಕಾಗಿ ಪ್ರಯತ್ನಗಳು ಮುಂದುವರಿದಿದೆ. ಈ ವಿವಾದಕ್ಕೆ ಸಂಬಂಧಿಸಿದಂತೆ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರಿಗೆ ಪತ್ರ ಬರೆಯಲಾಗಿದೆ ಎಂದು ಸಮಜಾಯಿಷಿ ನೀಡಿದರು. ಈ ಹಂತದಲ್ಲಿ ಗೌಡರು ಮತ್ತು ಅನಂತ್ ಕುಮಾರ್ ನಡುವೆ ಬಿಸಿ ಬಿಸಿ ವಾದ ನಡೆಯಿತು. ಸಚಿವರ ಉತ್ತರದಿಂದ ಕಾಂಗ್ರೆಸ್ ಸದಸ್ಯರು ತೃಪ್ತರಾಗದೇ ಈ ಯೋಜನೆ ಅನುಷ್ಠಾನದಲ್ಲಿ ವಿನಾಕಾರಣ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿದಾಗ ಬಿಜೆಪಿ ಸದಸ್ಯರು ವಾಗ್ವಾದಕ್ಕೆ ಇಳಿದರು. ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಏರಿದ ಧ್ವನಿಯಲ್ಲಿ ಮಾತಿನ ಚಕಮಕಿ ನಡೆದು ಗದ್ದಲ ಮತ್ತು ಕೋಲಾಹಲ ವಾತಾವರಣ ಉಂಟಾಯಿತು.

Facebook Comments

Sri Raghav

Admin