ಗವಿಸಿದ್ದೇಶ್ವರ ಮಹಾರಥೋತ್ಸವಕ್ಕೆ ಅಣ್ಣಾ ಹಜಾರೆ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

LKoppala--01

ಕೊಪ್ಪಳ,ಜ.3- ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತವಾಗಿರುವ ನಗರದ ಗವಿಸಿದ್ದೇಶ್ವರ ಜಾತ್ರೆಯು ಇಂದಿನಿಂದ ಇದೇ 6 ವರೆಗೆ ವಿಜೃಂಭಣೆಯಿಂದ ಜರುಗಲಿದ್ದು, ಇಂದು ಮಹಾರಥೋತ್ಸವದ ಉದ್ಘಾಟನೆಗೆ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ನೆರವೇರಿಸಲಿದ್ದಾರೆ. ಜಾತ್ರೆಯ ಅಂಗವಾಗಿ ಅನುಭವಿಗಳ ಅಮೃತ ಚಿಂತನಗೋಷ್ಠಿಯಲ್ಲಿ ಸಂಗೀತ ಕಾರ್ಯಕ್ರಮ, ಚಿತ್ರ ತರಂಗ, ಗಾನ ತರಂಗ, ಸಾಹಸ ಮೋಜಿನ ಗೊಂಬೆ ಪ್ರದರ್ಶನ, ಕರಾಟೆ ಪ್ರದರ್ಶನ, ನಾಳೆ ಮಲಗಂಬ ಪ್ರದರ್ಶನ, ಸಿದ್ದೇಶ್ವರ ಮೂರ್ತಿಯ ಮೆರವಣಿಗೆ, ಮದ್ದು ಸುಡುವುದು, ನಂತರ ಭಕ್ತ ಹಿತಚಿಂತನ ಸಭೆಯಲ್ಲಿ ಸಂಗೀತ ಕಾರ್ಯಕ್ರಮ, ನೆರಳು-ಬೆಳಕು, ತಾನ-ತರಂಗ ನಡೆಯಲಿದೆ.

ಇದೇ 5 ರಂದು ಸಮಾರೋಪ ಸಮಾರಂಭ ಜರುಗಲಿದ್ದು, ಅಂದು ಬೆಳಿಗ್ಗೆ ಕಬ್ಬಡ್ಡಿ ಪಂದ್ಯಾವಳಿಗಳು, ಸಂಗೀತ ಕಾರ್ಯಕ್ರಮ, ಜಲ-ತರಂಗ, ಸಾಹಸ ಪ್ರದರ್ಶನ, ಭಾವ-ತರಂಗ ಮುಂತಾದ ವೈವಿಧ್ಯಮಯ ಕಾರ್ಯಕ್ರಮ ಜಾತ್ರೆಯ ನಿಮಿತ್ತ ಆಯೋಜಿಸಲಾಗಿದೆ. ಜಾತ್ರಾ ಮಹೋತ್ಸವದ ದಿವ್ಯ ಸಾನಿಧ್ಯ ಮುಂಡರಗಿಯ ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು, ಯಲಬುರ್ಗಾ ಶ್ರೀಧರಮುರಡಿ ಹಿರೇಮಠದ ಬಸವಲಿಂಗ ಶಿವಾಚಾರ್ಯರು, ಖಜ್ಜಿಡೋಣಿಯ ಕೃಷ್ಣಾನಂದ ಶಾಸ್ತ್ರಿಗಳು, ಆದಿಚುಂಚನಗಿರಿಯ ನಿರ್ಮಲಾನಂದನಾಥರು, ಹುಬ್ಬಳ್ಳಿಯ ಚಿದ್ರೂಪಾನಂದ ಸರಸ್ವತಿ, ತುಮಕೂರಿನ ಹಿರೇಮಠದ ಡಾ. ಶಿವಾನಂದ ಶಿವಾಚಾರ್ಯರು, ಬಿಜಕಲ್‍ನ ಶಿವಲಿಂಗ ಸ್ವಾಮಿಗಳು ಸೇರಿದಂತೆ ವಿವಿಧ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ.

ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಸಾಧ್ಯತೆ ಇದ್ದು, ಆಗಮಿಸುವ ಭಕ್ತರಿಗೆ ಉಚಿತವಾಗಿ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಬಾರಿ 6 ರಿಂದ 7 ಲಕ್ಷಕ್ಕೂ ಅಧಿಕ ಭಕ್ತರು ಬರುವ ನಿರೀಕ್ಷೆ ಇದ್ದು, ಉಚಿತ ವಸತಿ ನಿಲಯ, ಪ್ರೌಢಶಾಲೆ, ಬಿಇಡಿ ಮತ್ತು ಡಿಇಡಿ ಕಾಲೇಜು, ಪದವಿ ಮತ್ತು ಪದವಿಪೂರ್ವ ಕಾಲೇಜು, ಶಿವಶಾಂತವೀರ ಪಬ್ಲಿಕ್ ಸ್ಕೂಲ್, ಗವಿಮಠದ ಯಾತ್ರಿ ನಿವಾಸ ಹೀಗೆ ನಗರದ ವಿವಿಧೆಡೆ ಭಕ್ತರು ತಂಗಲು ವ್ಯವಸ್ಥೆ ಕಲ್ಪಿಸಲಾಗಿದೆ.

Facebook Comments

Sri Raghav

Admin